ಆಡೂರನಲ್ಲಿ ಸಂಭ್ರಮದ ಸೀಗೆ ಹುಣ್ಣಿಮೆ: ಭೂಮಾತೆಗೆ ಪೂಜೆ

Share

ಹಾನಗಲ್ : ತಾಲ್ಲೂಕಿನ ಆಡೂರ ಸೇರಿ ಸುತ್ತುಮುತ್ತಲಿನ ಗ್ರಾಮಗಳಲ್ಲಿನ ರೈತ ಸಮೂಹ ಸೀಗೆ ಹುಣ್ಣಿಮೆಯನ್ನು ಶ್ರದ್ಧಾ ಭಕ್ತಿಯಿಂದ ಗುರುವಾರ ಆಚರಿಸಿದರು. ರೈತರು ಸಹ ಖುಷಿ ಖುಷಿಯಿದ ಭೂ ದೇವಿಯ ಆರಾಧನೆಯಲ್ಲಿ ನಿರತರಾಗಿರುವುದು ವಿಶೇಷವಾಗಿ ಗಮನ ಸೆಳೆಯಿತು.

ಪ್ರತಿ ವರ್ಷ ವಿಜಯದಶಮಿ ಬಳಿಕ ಬರುವ ಸೀಗೆ ಹುಣ್ಣಿಮೆಗೆ ಗ್ರಾಮೀಣ ಭಾಗದಲ್ಲಿ ವಿಶೇಷ ಮಹತ್ವ ನೀಡಲಾಗುತ್ತದೆ. ಇಲ್ಲಿನ ರೈತರು ಬೆಳಿಗಿನ ಜಾವ ಸೂರ್ಯ ಉದಯಕ್ಕೂ ಮುನ್ನವೇ ಜಾನುವಾರುಗಳ ಮೈ ತೊಳೆದು, ಸಿಂಗರಿಸಿ ಚಕ್ಕಡಿ ಕಟ್ಟಿಕೊಂಡು ಕುಟುಂಬ ಸದಸ್ಯರು, ಸ್ನೇಹಿತರೊಂದಿಗೆ ತಮ್ಮ ಕೃಷಿ ಭೂಮಿಗೆ ತೆರಳಿ, ಭೂಮಾತೆಗೆ ಪೂಜೆ ಸಲ್ಲಿಸಿದ್ದರು. ಭೂಮಿ ತಾಯಿ ಜತೆಗೆ ಪಂಚ ಪಾಂಡವರನ್ನು ಸ್ಥಾಪಿಸಿ, ಪೂಜೆ ಸಲ್ಲಿಸಿರುವುದು ವಿಶೇಷ.

ಸೀಗೆ ಹುಣ್ಣಿಮೆಯ ಪ್ರಯುಕ್ತ ಆಡೂರಿನ ಶಿವಬಸಪ್ಪ ಪೂಜಾರ ಕುಟುಂಬ ಸದಸ್ಯರು ತಮ್ಮ ಜಮೀನಿನಲ್ಲಿ ಪೂಜೆ ಸಲ್ಲಿಸಿ, ಊಟ ಸವಿದರು

ಸೀಗೆ ಹುಣ್ಣಿಮೆಯ ಸಡಗರಕ್ಕಾಗಿಯೇ ಹತ್ತಾರು ಆಹಾರ ಪದಾರ್ಥಗಳು ಸಿದ್ಧಗೊಂಡಿದ್ದವು. ಕಡುಬು, ಖರ್ಚಿಕಾಯಿ, ಹೋಳಿಗೆ, ಎಣಗಾಯಿ ಪಲ್ಯೆ, ಮಡಕಿಕಾಳು ಪಲ್ಯೆ, ಹೀಗೆ ಹಲವಾರು ಪದಾರ್ಥಗಳನ್ನು ಶಿವಬಸಪ್ಪ ಪೂಜಾರ ಅವರು ಕುಟುಂಬ ಸದಸ್ಯರು ಹಾಗೂ ಸ್ನೇಹಿತರ ಜತೆಗೂಡಿ ಸಹಭೋಜನದಲ್ಲಿ ತೊಡಗಿ, ಸೀಗೆ ಹುಣ್ಣಿಮೆಯ ಅರ್ಥಪೂರ್ಣ ಆಚರಣೆಗೆ ಸಾಕ್ಷಿಯಾದರು.

ಒಟ್ಟಿನಲ್ಲಿ ಭೂ ತಾಯಿಯ ಆರಾಧನೆಗೆಂದೇ ಮಿಸಲಿರುವ ಸೀಗೆ ಹುಣ್ಣಿಮೆಯನ್ನು ಈ ಭಾಗದ ಜನರು ಶ್ರದ್ಧೆಯಿಂದ ಆಚರಿಸಿರುವುದು ಗಮನ ಸೆಳೆಯಿತು.