ದಿನ ಬಳಕೆ ವಸ್ತುಗಳ ಕಿಟ್ ವಿತರಣೆ

Share

ಸವಣೂರ: ಇಲ್ಲಿನ ರೇಣುಕಾಚಾರ್ಯ ನಗರದಲ್ಲಿ ಅನ್ಯರಾಜ್ಯದಿಂದ ಅನ್ನವನ್ನರಸಿ ಬಂದ ಕೌದಿ ಕುಶಲ ಕರ್ಮಿಗಳ 12 ಕುಟುಂಬಗಳಿಗೆ ಹಾಗೂ ಇಸ್ಲಾಂಪುರ ಬಳಿ ತಂಗಿದ್ದ ನಿರಾಶ್ರಿತರಿಗೆ ಎಸ್.ಬಿ.ಐ ಬ್ಯಾಂಕ್ ವತಿಯಿಂದ ದಿನ ಬಳಕೆ ವಸ್ತುಗಳ ಕಿಟ್ಟಗಳನ್ನು ಬುಧವಾರ ವಿತರಿಸಲಾಯಿತು.

ಇದೇ ವೇಳೆ ಮಾತನಾಡಿದ ಎಸ್.ಬಿ.ಐ ಬ್ಯಾಂಕ್ ವ್ಯವಸ್ಥಾಪಕ ಗೌತಮ್ ಲಾಕ್ ಡೌನ್ ವಿಸ್ತರಣೆಗೊಂಡಿರುವ ಹಿನ್ನೆಲೆಯಲ್ಲಿ ಅನ್ಯ ರಾಜ್ಯಗಳಿಂದ ದುಡಿಮೆಗಾಗಿ ಬಂದ ಜನರು ನಗರ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಿಲುಕಿಕೊಂಡಿರುವುದರಿಂದ ಅವರಿಗೆ ನೆರವಾಗುವ ನಿಟ್ಟಿನಲ್ಲಿ 100 ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ನೀಡುವ ಸದುದ್ದೇಶ ಹೊಂದಿದೆ. ಕೆಲವು ಕುಟುಂಬಗಳಿಗೆ ತಹಶೀಲ್ದಾರ ಅವರ ಸಹಯೋಗದಲ್ಲಿ ಕಿಟ್ ಗಳನ್ನು ವಿತರಿಸಿದ್ದು, ಬಾಕಿ ಉಳಿದ ಕಿಟ್ ಗಳನ್ನು ನಿರ್ಗತಿಕರಿಗೆ ನೀಡುವಂತೆ ತಾಲೂಕಾಡಳಿತಕ್ಕೆ ಹಸ್ತಾಂತರಿಸಲಾಗಿದೆ. ಆದಷ್ಟು ಬೇಗ ಕೊರೊನಾ ಸೋಂಕು ಹೋಗಿ ಜನರು ನೆಮ್ಮದಿಯಿಂದ ಜೀವಿಸುವಂತಾಗಲಿ ಎಂದರು.

ದುಬೈನಲ್ಲಿ ನೆಲೆಸಿರುವ ಸವಣೂರ ನಗರದ ನಿವಾಸಿ ಶ್ರೀಕಾಂತ ಬದ್ದಿ ಅವರು, ಜೆ.ಸಿ.ಐ ನಮ್ಮ ಸವಣೂರು ಮುಖೇನ ಆಶಾ ಕಾರ್ಯಕರ್ತರಿಗೆ ಹಾಗೂ ಪತ್ರಕರ್ತರಿಗೆ ಸ್ಯಾನಿಟೈಸರ್, ಮಾಸ್ಕ್ ಹಾಗೂ ಅಗತ್ಯವಸ್ತುಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗಣ್ಣನವರ ಮಾತನಾಡಿ, ದೇಶಾದ್ಯಂತ ಮೇ 3ರ ವರೆಗೆ ಲಾಕ್ ಡೌನ್ ವಿಸ್ತರಣೆಗೊಂಡಿರುವುದರಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಿಲುಕಿಕೊಂಡಿರುವ ಅನ್ಯರಾಜ್ಯಗಳಿಂದ ಆಗಮಿಸಿದ ನಿರಾಶ್ರಿತರಿಗೆ ತಾಲೂಕಾಡಳಿತವು ವಿವಿಧ ದಾನಿಗಳಿಂದ, ಅಕ್ಷರ ದಾಸೋಹದ ಹಾಗೂ ಜೆ.ಸಿ.ಐ ನಮ್ಮ ಸವಣೂರ ಸಹಯೋಗದಲ್ಲಿ ಅಕ್ಕಿ, ಎಣ್ಣೆ, ಬೇಳೆ, ರವೆ ಸೇರಿದಂತೆ ಇತರೆ ಅಗತ್ಯ ವಸ್ತುಗಳನ್ನು ಪೂರೈಸಲಾಗಿದೆ. ಇದಕ್ಕೆ ಪೂರಕವಾಗಿ ಎಸ್.ಬಿ.ಐ ಶಾಖೆಯ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಯೊಂದಿಗೆ ಆಗಮಿಸಿ 100 ಆಹಾರ ಸಾಮಗ್ರಿಗಳ ಕಿಟ್ ಅನ್ನು ವಿತರಿಸಿದ್ದು, ಜೊತೆಗೆ ದುಬೈನಲ್ಲಿ ನೆಲೆಸಿರುವ ಕನ್ನಡಿಗ ಶ್ರೀಕಾಂತ ಅವರು ಆರೋಗ್ಯ ಕಾಳಜಿಯಿಂದ ಪತ್ರಕರ್ತರಿಗೆ ಹಾಗೂ ಆಶಾ ಕಾರ್ಯಕರ್ತರಿಗೆ ಮಾಸ್ಕ್ ಸ್ಯಾನಿಟೈಸರ್ ನೀರುವುದು ಶ್ಲಾಘನೀಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಡಿ.ಎಂ ಪಾಟೀಲ, ಗ್ರಾಮ ಲೆಕ್ಕಾಧಿಕಾರಿಗಳಾದ ರವಿ ಮಾಚಕನೂರ, ವೆಂಕಟೇಶ ಲಮಾಣಿ, ಆಹಾರ ವಿಭಾಗದ ಗಿರೀಶ ಮುದಗಲ್, ಎಸ್.ಬಿ.ಐ ಸಿಬ್ಬಂದಿಗಳಾದ ಗೀತಾ ಜೋಷಿ, ಹರಿನಾಥ್, ವೀರೇಶ್, ರಕ್ಷಣಾ ಸಿಬ್ಬಂದಿ ಈಶ್ವರಪ್ಪ, ನಾಗರಾಜ ಹೊಂಡದಕಟ್ಟಿ, ಶಿವು ಬಂಡಿವಾಡ ಇದ್ದರು.

ವರದಿ: ನಿಂಗನಗೌಡ ಪಾಟೀಲ, ಸವಣೂರು