ಮೇ.31ರ ವರೆಗೆ ಸ್ವಯಂ ಪ್ರೇರಿತರಾಗಿ ಬಟ್ಟೆ ವ್ಯಾಪಾರವನ್ನು ಸ್ಥಗಿತಗೊಳಿಸಲು ವರ್ತಕರ ನಿರ್ಧಾರ

Share

ಸವಣೂರ: ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದ ಜವಳಿ ವರ್ತಕರ ಸಂಘದ ವತಿಯಿಂದ ಮೇ.31ರ ವರೆಗೆ ಸ್ವಯಂಪ್ರೇರಿತರಾಗಿ ಬಟ್ಟೆ ವ್ಯಾಪಾರವನ್ನು ಸ್ಥಗಿತಗೊಳಿಸಲು ನಿರ್ಧರಿಸಿ ಉಪವಿಭಾಗಾಧಿಕಾರಿ, ತಹಶೀಲ್ದಾರ ಹಾಗೂ ಪೋಲಿಸ್ ಇಲಾಖೆಗೆ ಪ್ರತ್ಯೇಕ ಮನವಿ ಸಲ್ಲಿಸಿದ್ದಾರೆ.

ಮಂಗಳವಾರ ದಿಗ್ಬಂಧನ (ಕ್ವಾರೆಂಟೇನ್) ಮುದ್ರೆ ಇರುವ ಮಹಿಳೆಯೋರ್ವಳು ಬಟ್ಟೆ ಖರೀದಿಸಲು ಆಗಮಿಸಿದ ಹಿನ್ನೆಲೆಯಲ್ಲಿ ಆತಂಕಕ್ಕೊಳಗಾದ ವ್ಯಾಪಾರಸ್ಥರು, ಬಟ್ಟೆ ಮಾರಲು ನಿರಾಕರಿಸಿದ್ದಾರೆ. ಕೆಲವೇ ದಿನಗಳಲ್ಲಿ ರಂಜಾನ ಹಬ್ಬವಿರುವುದರಿಂದ ಬಟ್ಟೆ ಖರೀದಿಸಲು ಜನದಟ್ಟನೆ ಪ್ರಮಾಣ ಹೆಚ್ಚಲಿದ್ದು, ನಗರಕ್ಕೆ ಮಹಾರಾಷ್ಟ್ರ, ಮುಬೈ ಹಾಗೂ ಪೂನಾದಿಂದ ಜನರು ಆಗಮಿಸುತ್ತಿರುವುದರಿಂದ ವ್ಯಾಪಾರಸ್ಥರಲ್ಲಿ ಆತಂಕ ಇನ್ನಷ್ಟು ಹೆಚ್ಚಿದ ಕಾರಣದಿಂದಾಗಿ ಸಾರ್ವಜನಿಕ ಆರೋಗ್ಯ ಮತ್ತು ವ್ಯಾಪಾರಸ್ಥರ ಆರೋಗ್ಯದ ಹಿತದೃಷ್ಟಿಯಿಂದ ಮೆ.31ರ ವರೆಗೆ ಜವಳಿ ವ್ಯಾಪಾರ ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದಾರೆ.

ಈ ಸಂದರ್ಭದಲ್ಲಿ ಜವಳಿ ವರ್ತಕರ ಸಂಘದ ಅಧ್ಯಕ್ಷ ರೂಪಚಂದ ಜೈನ್, ಉಪಾಧ್ಯಕ್ಷ ಈರಪ್ಪಗೌಡ ಗುಡಿಸಾಗರ್,  ಕಾರ್ಯದರ್ಶಿ ಅಮ್ಜದ್ ಖಾನ ಪಠಾಣ, ಪದಾಧಿಕಾರಿಗಳಾದ ವಿನಾಯಕ ರಾಶಿನಕರ್, ಸಿಕಂದರ್ ಹತ್ತಿವಾಲೆ, ಎಂ.ಕೆ ರಾಶಿನಕರ್, ಪ್ರಕಾಶ ಕಾರಡಗಿ, ಶಿವಣ್ಣ, ಅಮ್ಜದ್, ಯಾಕೂಬ್, ಮಾಲತೇಶ ಸೇರಿದಂತೆ ಇತರರು ಇದ್ದರು.