ಎಲ್ಲ ವಿದ್ಯಾರ್ಥಿಗಳಿಗೆ ಆಂಗ್ಲ ಮಾಧ್ಯಮ ಶಿಕ್ಷಣ ನೀಡಿಕೆಗೆ ಆಗ್ರಹಿಸಿ ಪ್ರತಿಭಟನೆ

Share

ಶಿಗ್ಗಾವಿ: ನಗರದ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಪ್ರವೇಶ ಪಡೆದ ಎಲ್ಲ ಮಕ್ಕಳಿಗೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಒದಗಿಸುವಂತೆ ಆಗ್ರಹಿಸಿ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿ ಎದುರಿಗೆ ಪೋಷಕರು ಗುರುವಾರ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಸಂಜೀವ ಮಣ್ಣನವರ, ಆಂಗ್ಲ ಮಾಧ್ಯಮ ಶಿಕ್ಷಣ ಪಡೆಯುವ ಉದ್ದೇಶದಿಂದ ಸರಕಾರಿ ಮಾದರಿ ಶಾಲೆಯಲ್ಲಿ 80 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಶಿಕ್ಷಕರು ವಿದ್ಯಾರ್ಥಿಗಳಿ ಆಸಕ್ತಿ ಮನಗಂಡು 37 ವಿದ್ಯಾರ್ಥಿಗಳಂತೆ ಎರಡು ವಿಭಾಗ ಮಾಡಿಕೊಂಡು ಪಾಠ ಬೋಧನೆ ಮಾಡುತ್ತಿದ್ದರೆ ಎಂದು ಹೇಳಿದರು.

ರಾಜ್ಯ ಸರಕಾರ 30:1 ಶಿಕ್ಷಕ – ವಿದ್ಯಾರ್ಥಿ ಅನುಪಾತಕ್ಕೆ ತಕ್ಕಂತೆ ಕೇವಲ 30 ವಿದ್ಯಾರ್ಥಿಗಳನ್ನು ಮಾತ್ರ ಆಂಗ್ಲ ಮಾಧ್ಯಮಕ್ಕೆ ದಾಖಲಿಸಿಕೊಳ್ಳುವಂತೆ ಇಲಾಖೆ ತಾಕೀತು ಮಾಡಿದೆ. ಇದರಿಂದ ದಾಖಲಾಗುವ ಎಲ್ಲ ಮಕ್ಕಳಿಗೂ ಆಂಗ್ಲ ಮಾಧ್ಯಮದ ತರಗತಿಗಳು ಸಿಗುವುದಿಲ್ಲ. ಹೊಸ ಅನುಪಾತದ ಆದೇಶದಿಂದ ಪ್ರವೇಶ ಪಡೆದ ಉಳಿದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ ಎಂದರು.
ಈ ಕುರಿತು ತಕ್ಷಣವೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಗಮನ ಹರಿಸಿ ಪ್ರವೇಶ ಪಡೆದ ಎಲ್ಲ ವಿದ್ಯಾರ್ಥಿಗಳಿಗೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡಬೇಕು ಎಂದು ಕ್ಷೇತ್ರಶಿಕ್ಷಣಾಧಿಕಾರಿ ಶಿವಾನಂದ ಹೆಳವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪೋಷಕರಾದ ರವಿ ಮಡಿವಾಳರ, ಬಸವರಾಜ ಕಲ್ಬಾರ, ರವಿ ಮಾವೂರ, ನೂರಅಹ್ಮದ, ಧರ್ಮಣ್ಣ, ಪರಶುರಾಮ, ಸರೀತಾ ಮಡಿವಾಳರ, ಸುಂದರಾಬಾಯಿ ಕಲಾಲ, ನಿಂಗಪ್ಪ ಮಲ್ಲೂರ, ಶೇಖಪ್ಪ ಮಾಳಗಿ ಸೇರಿದಂತೆ ಇತರರು ಇದ್ದರು.