ಮಹಾ ಮಳೆಯ ಅಬ್ಬರ: ಕೃಷಿ ಜಮೀನಿಗೆ ನುಗ್ಗಿದ ನೀರು

Share

ಹಾವೇರಿ: ಮಹಾ ಮಳೆಯ ಅಬ್ಬರಕ್ಕೆ ಶಿಗ್ಗಾವಿ ಪಟ್ಟಣದ ಐತಿಹಾಸಿಕ ನಾಗನೂರು ಕೆರೆ ಸೇರಿದಂತೆ ತಾಲೂಕಿನ ಬಹುತೇಕ ಕೆರೆಗಳು ಕೋಡಿ ಬಿದ್ದ ಪರಿಣಾಮ ಸಾವಿರಾರು ಹೆಕ್ಟೇರ್ ಕೃಷಿ ಜಮೀನಿಗೆ ನೀರು ನುಗ್ಗಿದೆ.

ತಾಲೂಕಿನ ಹುಲಿಕಟ್ಟಿ ಗ್ರಾಮದ ಡೊಕನಕೆರೆ ಕೊಡಿ ಬಿದಿದ್ದು, ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಬಂಕಾಪುರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿದೆ. ಹುನಗುಂದ ಗ್ರಾಮದ ದೊಡ್ಡ ಕೆರೆ ಈಗಾಗಲೇ ಕೊಡಿ ಬಿದ್ದಿದ್ದು, ಕೆರೆ ಒಡೆಯುವ ಭೀತಿ ಎದುರಾಗಿದೆ.

ಬಾಡದ ಐತಿಹಾಸಿಕ ಬಕಾಸುರನ ಕೆರೆ ಕೋಡಿ ಬಿದ್ದು ಅಕ್ಕ-ಪಕ್ಕದಲ್ಲಿನ ನೂರಾರು ಎಕರೆ ಭೂಮಿಗಳಲ್ಲಿನ ಬೆಳೆ ದೊಡ್ಡ ಪ್ರಮಾಣದಲ್ಲಿ ಜಲಾವೃತಗೊಂಡಿವೆ. ಬಂಕಾಪುರ-ಮುನವಳ್ಳಿ ರಸ್ತೆ ಉದ್ದಕ್ಕೂ ಜಾಲಿ ಗಿಡಗಳು ಬಿದ್ದು ಸಂಚಾರಕ್ಕೆ ಅಡ್ಡಿಯಂಟು ಮಾಡಿವೆ. ಕಲ್ಯಾಣ, ಖುರ್ಸಾಪುರ, ಹುಣಿಸಿಕಟ್ಟಿ, ಸದಾಶಿವಪೇಟೆ, ಇಬ್ರಾಹಿಂಪುರ, ನಾರಾಯಣಪುರ ಗ್ರಾಮಗಳ ರೈತರ ಭೂಮಿಗಳಲ್ಲಿನ ಲಕ್ಷಾಂತರ ಬೆಳೆ ಹಾನಿಯಾಗಿವೆ. ಶಿಗ್ಗಾವಿ ಪಟ್ಟಣ ಸೇರಿ ಗ್ರಾಮೀಣ ಪ್ರದೇಶಗಳಲ್ಲಿ 50ಕ್ಕೂ ಹೆಚ್ಚು ಮನೆಗಳು ಬಿದ್ದಿವೆ.

ಸುರಿಯತ್ತಿರುವ ಮಳೆಯಿಂದ ಕೈಗೆ ಕೆಲಸ ಇಲ್ಲದೆ ಪರದಾಡುತ್ತಿರುವ ಕೂಲಿಗಳು, ಬದುಕಿನ ಆಸರೆ ಕುರಿತು ಚಿಂತಾ ಕ್ರಾಂತರಾಗಿದ್ದಾರೆ. ತಹಸೀಲ್ದಾರ ಚಂದ್ರಶೇಖರ ಗಾಳಿ ಅವರ ನೇತೃತ್ವದಲ್ಲಿ ಕಂದಾಯ, ಕೃಷಿ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಬೆಳೆ ಹಾನಿ, ಮನೆ ಕುಸಿತ ಬಗ್ಗೆ ಪರಿಶೀಲನೆ ಮುಂದುವರಸಿದ್ದಾರೆ.