ಒಡೆದ ಮನಸ್ಸು ಬೆಸೆವ ಶಕ್ತಿ ಕಲೆಯಲ್ಲಿದೆ: ಮಾಗನಹಳ್ಳಿ ಮಂಜುನಾಥ್

Share

ಕರೂರು( ಕುಮಾರಪಟ್ಟಣ): ಒಡೆದ ಮನಸ್ಸುಗಳನ್ನು ಬೆಸೆಯುವ ಶಕ್ತಿ ಕಲೆಯಲ್ಲಿ ಅಡಗಿದ್ದು, ಆಧುನಿಕತೆಯ ಕಲೆ ಹಾಗೂ ಸಂಸ್ಕೃತಿಗಳ ಬೇರುಗಳನ್ನು ದುರ್ಬಲಗೊಳಿಸುತ್ತಿವೆ ಎಂದು ಸ್ವಾಮಿ ವಿವೇಕಾನಂದ ಪ್ರಶಸ್ತಿ ಪುರಸ್ಕೃತ ಮಾಗನಹಳ್ಳಿ ಮಂಜುನಾಥ್ ಅವರು ಹೇಳಿದರು.

ಜಿಲ್ಲೆಯ ಕರೂರು ಮೈಲಾರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಇತ್ತಿಚೆಗೆ ಜರುಗಿದ 150ನೇ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಭಾರತ ಸರ್ಕಾರ, ತಂಜಾವೂರಿನ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ, ಹಾವೇರಿಯ ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಗ್ರಾಮ ಪಂಚಾಯತ ಕರೂರು, ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಮಿಳುನಾಡಿನ ಜಯಕುಮಾರ್ ಮಾತನಾಡಿ, ವಿವಿಧ ರಾಜ್ಯಗಳ ವಿಶಿಷ್ಟ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂದಾಗಿದ್ದು, ಕಲೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುವ ಹೊಣೆ ಸಮಾಜದ ಮೇಲಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಗಳಗೌರಿ ಪೂಜಾರ್ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.

ಮಣಿಪುರದ ಡೋಲ್ ಸೋಲಂ, ರಾಜಸ್ಥಾನದ ಚಕ್ರಿ ಹಾಗೂ ಗಲ್ಲೇರಿಯ ತಮಿಳುನಾಡಿನ ಕರಗಮ್ ಕಾವಡಿ ಕಾಡಿ, ಒಡಿಶಾದ ಜೋಡಿ ಶಂಕು ಹಾಗೂ ಜೋಡಿ ಕೋಲು ನೃತ್ಯ, ಕೇರಳದ ತಿರು ವಾದಕಲಿ, ಆಂಧ್ರಪ್ರದೇಶದ ತಪ್ಪತು ಗಲ್ಲು, ಕರ್ನಾಟಕ ರಾಜ್ಯದ ಪೂಜಾಕುಣಿತ ಹಾಗೂ ತಮಟೆ, ಅಸ್ಸಾಮಿನ ಬಿಹು ನೃತ್ಯ ತಂಡದ ಕಲಾವಿದರು ಕಲಾ ನೈಪುಣ್ಯತೆಯನ್ನು ಪ್ರದರ್ಶಿಸಿದರು.

ತಾಲೂಕು ಪಂಚಾಯಿತಿ ಸದಸ್ಯ ಬೆನ್ನೂರು, ಎಪಿಎಂಸಿ ಸದಸ್ಯ ಸುರೇಶ್ ಬಿರಾಳ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಸವರಾಜ್ ಶಾಸ್ತ್ರಿ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಹನುಮಂತಪ್ಪ ಮೂಡದ್ಯಾವಣ್ಣನವರ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಮಾ ಬಕ್ಕಾಜ್ಜಿ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಜ್ಯೋತಿ ಕಮ್ಮಾರ್, ಸದಸ್ಯ ಹೊನ್ನಪ್ಪ ಮೂಡದ್ಯಾಮಣ್ಣವರ, ಜನಾರ್ಧನ ಕಡೂರು, ನಾಗೇಶ್ ಗೌಡ, ಸೋಮಶೇಖರ್ ಸೇರಿದಂತೆ ಇತರರು ಇದ್ದರು.