ಮೇ.27, 28 ಹಾಗೂ 29 ಮೂರು ದಿನಗಳ ಕಾಲ ಕಿರಾಣಿ, ಮಾಂಸ ಮಾರಾಟ ಅವಧಿ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ರವರೆಗೆ ವಿಸ್ತರಣೆ

Share

ಧಾರವಾಡ, ಮೇ.25: ಕೊರೊನಾ ನಿಯಂತ್ರಿಸಲು ಕಠಿಣ ಲಾಕ್‌ಡೌನ್ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಜನತೆಗೆ ಕಿರಾಣಿ, ಮಾಂಸದ ಪದಾರ್ಥಗಳನ್ನು ಪೂರೈಸಲು ಮೇ.27 ಗುರುವಾರ, ಮೇ.28 ಶುಕ್ರವಾರ ಹಾಗೂ ಮೇ.29 ಶನಿವಾರ ಈ  ಮೂರು ದಿನಗಳ ಕಾಲ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ತಿಳಿಸಿದ್ದಾರೆ.

ಹೆಚ್ಚು ಜನದಟ್ಟಣೆಯಾಗಬಾರದು ಎಂಬ ಉದ್ದೇಶದಿಂದ ಕಿರಾಣಿ ಹಾಗೂ ಮಾಂಸ ಮಾರಾಟದ  ಸಮಯದ ಅವಧಿ ವಿಸ್ತರಿಸಲಾಗಿದೆ. ಹುಬ್ಬಳ್ಳಿ ಹಾಗೂ ಧಾರವಾಡದ ಕಿರಾಣಿ ವರ್ತಕರೊಂದಿಗೆ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಜನರು ಏಕಕಾಲಕ್ಕೆ ಅಂಗಡಿಗಳ ಮುಂದೆ ಜನಸಂದಣಿ ಉಂಟು ಮಾಡದೇ ಪ್ರತ್ಯೇಕವಾಗಿ ಬಂದು ಕೋವಿಡ್ ಸುರಕ್ಷತಾ ಕ್ರಮಗಳೊಂದಿಗೆ ಕಿರಾಣಿ, ಮಾಂಸದ ಪದಾರ್ಥಗಳನ್ನು ಖರೀದಿಸಬೇಕು.

ಈ ಮೂರು ದಿನಗಳ ಅವಕಾಶದ ನಂತರ ಕಠಿಣ ಲಾಕ್‌ಡೌನ್ ಅವಧಿ ಪೂರ್ಣಗೊಂಡ ಬಳಿಕ ಜೂನ್ 7 ರ ನಂತರವೇ ಈ ವಸ್ತುಗಳು ದೊರೆಯಲಿವೆ. ತರಕಾರಿ ಮತ್ತು ಹಾಲು ಮಾರಾಟಕ್ಕೆ ಪ್ರತಿದಿನ ಬೆಳಿಗ್ಗೆ 6 ರಿಂದ 8 ರವರೆಗೆ ಅವಕಾಶ ಇರುವುದರಿಂದ ಇವುಗಳ ಪೂರೈಕೆ ಎಂದಿನಂತೆಯೇ ಇರುತ್ತದೆ.ಇವುಗಳ ಸಮಯದಲ್ಲಿ ಬದಲಾವಣೆಯಿಲ್ಲ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.