ಕೃಷಿ ಚಟುವಟಿಕೆಗೆ ಬೀಜ, ರಸಗೊಬ್ಬರ ವಿತರಣೆ : ಸಚಿವ ಜಗದೀಶ ಶೆಟ್ಟರ್

Share

ಹುಬ್ಬಳ್ಳಿ, ಮೇ 24 : ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಹರಡುತ್ತಿರುವುದರಿಂದ ಹೋಬಳಿ ಮಟ್ಟದಲ್ಲೂ ಕೋವಿಡ್ ಕಾಳಜಿ ಕೇಂದ್ರ ತೆರೆದು ಚಿಕಿತ್ಸೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ನಗರದಲ್ಲಿ ಸೋಮವಾರ ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ‘ಊಹೆಗೂ ಮೀರಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರೊಂದಿಗೆ ಕಪ್ಪು ಶಿಲೀಂಧ್ರ ರೋಗದ ಆತಂಕವೂ ಶುರುವಾಗಿರುವುದರಿಂದ ಸ್ಥಳೀಯ ಮಟ್ಟದಲ್ಲೇ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದರು.

ಜಿಲ್ಲೆಯಲ್ಲಿ ಈಗ ಉತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆಗಳಿಗೆ ಇದು ಸೂಕ್ತ ಸಮಯವಾಗಿದೆ. ರೈತರು ಬಿತ್ತನೆ ಚಟುವಟಿಕೆಗಳಿಗೆ ಸಿದ್ಧತೆ ಆರಂಭಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ, ಬೀಜ ಮತ್ತು ರಸಗೊಬ್ಬರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಶೆಟ್ಟರ್ ಹೇಳಿದರು.

ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ಎರಡು ದಿನದೊಳಗೆ ಬೀಜ ಮತ್ತು ಗೊಬ್ಬರ ವಿತರಿಸಲು ಕೃಷಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜನಸಂದಣಿ ತಪ್ಪಿಸುವುದಕ್ಕಾಗಿ ಪ್ರತಿ ದಿನ ಒಂದೊಂದು ಊರಿನವರಿಗೆ ಸಮಯ ನಿಗದಿಪಡಿಸಿ ವಿತರಿಸಲಾಗುವುದು. ಈ ಕುರಿತು ಗ್ರಾಮಗಳಲ್ಲಿ ಡಂಗೂರ ಸಾರಿಸಿ ರೈತರಿಗೆ ಮಾಹಿತಿ ನೀಡಲಾಗುವುದು ಎಂದರು.

ಕೃಷಿ ಚಟುವಟಿಕೆಗೆ ಪೂರಕವಾಗಿ ಶೀಘ್ರದಲ್ಲೇ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗುವುದು. ಬೀಜ ಮತ್ತು ಗೊಬ್ಬರ ಖರೀದಿಗೆ ಬರುವ ರೈತರಿಗೆ ಪೊಲೀಸರಿಂದ ತೊಂದರೆಯಾಗುವ ಬಗ್ಗೆ ದೂರುಗಳಿವೆ. ಈ ಕುರಿತು ಪೊಲೀಸ್ ಇಲಾಖೆ ಜತೆಗೂ ಚರ್ಚಿಸಲಾಗುವುದು. ಮಾರ್ಗಸೂಚಿ ಪಾಲಿಸಿ ಕೃಷಿ ಚಟುವಟಿಕೆಗೆ ತೆರಳುವವರಿಗೆ ಪೊಲೀಸರಿಂದ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.