ಗ್ರಾಮಗಳ ಅಭಿವೃದ್ಧಿಗೆ ಉತ್ತಮ ಆಳ್ವಿಕೆ ಮುಖ್ಯ: ಸಚಿವ ಜಗದೀಶ್ ಶೆಟ್ಟರ್

Share

ಧಾರವಾಡ: ಗ್ರಾಮಗಳ ಅಭಿವೃದ್ಧಿಗೆ ಉತ್ತಮ ಆಳ್ವಿಕೆ ಬೇಕಾಗಿದ್ದು, ಉತ್ತಮ ಆಳ್ವಿಕೆ ಸಿಕ್ಕಲ್ಲಿ ಗ್ರಾಮಗಳು ಅಭಿವೃದ್ಧಿ ಹೊಂದಲು ಸಾಧ್ಯ. ಅಲ್ಲದೆ ಬರುವ ಗ್ರಾಮ ಪಂಚಾಯತಿ ಚುನಾವಣೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಗ್ರಾಮ ಪಂಚಾಯತಿ ಸದಸ್ಯರಾಗಿ ಹೊರಹೊಮ್ಮಲಿ ಎಂದು ಬಿಜೆಪಿ ಕಾರ್ಯಕರ್ತರಿಗೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಧಾರವಾಡ ಬೆಳಗಾವಿ ಹೆದ್ದಾರಿಯ ಸಾಯಿ ಆರಣ್ಯ ಕಲ್ಯಾಣ ಮಂಟಪದಲ್ಲಿ, ಬಿಜೆಪಿಯ ಗ್ರಾಮ ಸ್ವರಾಜ್ಯ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆಯ ಕಾವು ಜೋರಾಗುತ್ತಿದೆ. ಹಾಗಾಗಿ ಗ್ರಾಮ ಸ್ವರಾಜ್ಯ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಇಂದು ಧಾರವಾಡದಲ್ಲಿ ಸಮಾವೇಶ ಜರುಗಿದ್ದು, ನಾಳೆ ಹಾವೇರಿಯಲ್ಲಿ ನಡೆಯುತ್ತದೆ.

ಗ್ರಾಮ ಪಂಚಾಯತ ಚುನಾವಣೆ ಗೆಲ್ಲಲು ಹೀಗೆ ಪ್ರತಿದಿನವು ಬಿಜೆಪಿ ವತಿಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆದರೆ ಬಿಜೆಪಿ ರೀತಿಯಲ್ಲಿ‌ ಕಾಂಗ್ರೆಸ್ ಪಕ್ಷಕ್ಕೆ ಸಮಾವೇಶಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಟಾಂಗ್ ನೀಡಿದರು. ಇದೇವೇಳೆ ಕೊರೊನಾ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು ಇನ್ನೂ ದೇಶದಲ್ಲಿ ಕೊರೊನಾ ಹೋಗಿಲ್ಲ. ಪ್ರತಿಯೊಬ್ಬರು ಮನೆಯಿಂದ ಹೊರ ಬರುವಾಗ ಮಾಸ್ಕ್‌ಗಳನ್ನು ಬಳಕೆ ಮಾಡಬೇಕು. ಲಸಿಕೆ ಬಂದ ನಂತರ ಕೊರೊನಾ ಹೋಗುತ್ತದೆ ಎಂದರು.

ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳು ಕಾರ್ಯಕರ್ತರ ಚುನಾವಣೆಯಾಗಿವೆ. ನಮ್ಮ ಗೆಲುವಿಗೆ ನೀವು ಶ್ರಮಿಸಿದ್ದೀರಿ. ನಿಮ್ಮ ಗೆಲುವಿಗೆ ಈಗ ನಾವು ನಿಮಗೆ ಸಾಥ್ ನೀಡುತ್ತೇವೆ ಎಂದು ಕಾರ್ಯಕ್ರಮದಲ್ಲಿ ನೇರೆದಿದ್ದ ಕಾರ್ಯಕರ್ತರಿಗೆ ಭರವಸೆ ನೀಡಿದರು. ರಾಜ್ಯದಲ್ಲಿ ಬಿಜೆಪಿ ಪಕ್ಷಕ್ಕೆ ಕಾರ್ಯಕರ್ತರು ತುಂಬಾ ಮುಖ್ಯ, ಅವರ ಪರಿಶ್ರಮದಿಂದ ಈಗ ದೇಶದಲ್ಲಿ ಬಿಜೆಪಿ ಬಲಿಷ್ಟ ಪಕ್ಷವಾಗಿದೆ. ಬರುವಂತಹ ಗ್ರಾಮ ಪಂಚಾಯತಿ ಚುನಾವಣೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಗ್ರಾಮ ಪಂಚಾಯತ ಸದಸ್ಯರಾಗಿ ಹೊರಹೊಮ್ಮಬೇಕು ಎಂದು ಕರೆ ನೀಡಿದರು. ಈ ಬಾರಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಧಾನ್ಯತೆ ಇದೆ ಅದನ್ನು ಮಹಿಳಾ ಕಾರ್ಯಕರ್ತರು ಸದುಪಯೋಗ ಮಾಡಕೊಳ್ಳಬೇಕು ಎಂದರು.