ಆಮೆಗತಿಯಲ್ಲಿ ಅವಳಿ ನಗರದ ವಿವಿಧ ಕಾಮಗಾರಿಗಳು: ಸಾರ್ವಜನಿಕರ ಶಾಪ!

Share

ಹುಬ್ಬಳ್ಳಿ, ಜುಲೈ 1: ಹುಬ್ಬಳ್ಳಿ-ಧಾರವಾಡದ ಅವಳಿ ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಹಲವು ಕಾಮಗಾರಿಗಳು ಆರಂಭವಾಗಿ ಹಲವು ವರ್ಷಗಳಾಗಿವೆ.    ಹೀಗೆ ಆರಂಭಗೊಂಡ ಯೋಜನೆಗಳು ಆಮೆಗತಿಯಲ್ಲಿ ಚಲಿಸುತ್ತಿವೆ. ಇದರಿಂದಾಗಿ ಇಲ್ಲಿನ ಜನಸಾಮಾನ್ಯರು   ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ನಗರಾಭಿವೃದ್ಧಿ ಸಚಿವರಾಗುತ್ತಿದ್ದಂತೆ ಹುಬ್ಬಳ್ಳಿಗೆ ಭೇಟಿ ನೀಡಿದ್ದ ಸಚಿವ ಭೈರತಿ ಬಸವರಾಜ್, ಕಾಮಗಾರಿ ಬೇಗ ಮುಗಿಸುವಂತೆ ಗುತ್ತಿಕೆದಾರರಿಗೆ ಗಡುವು ನೀಡಿದ್ದರು. ಕಾಮಗಾರಿ ಮುಗಿಯದಿರುವುದನ್ನು ಕಂಡು ಇನ್ನೆರಡು ತಿಂಗಳಲ್ಲಿ ಮುಗಿಸುವಂತೆ ಎಚ್ಚರಿಕೆ ನೀಡಿದ್ದಾರೆ.

ಭೈರತಿ ಬಸವರಾಜ್ ಪ್ರತಿ ಸಲ ಹುಬ್ಬಳ್ಳಿಗೆ ಬಂದಾಗಲೂ 20 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ತೋಳನಕೆರೆ ಕಾಮಗಾರಿ, 13.31 ಕೋಟಿ ವೆಚ್ಚದ ಗ್ಲಾಸ್ ಹೌಸ್ ಕಾಮಗಾರಿ, 47.92 ಕೋಟಿ ವೆಚ್ವದ ಸ್ಮಾರ್ಟ್ ರಸ್ತೆ, ಜನತಾ ಬಜಾರ್ ಸೇರಿದಂತೆ ವಿವಿಧ ಕಾಮಗಾರಿ ವೀಕ್ಷಣೆ ಮಾಡ್ತಾರೆ. ಆದ್ರೆ ಕಾಮಗಾರಿ ಮಾತ್ರ ಮುಗಿಯುತ್ತಿಲ್ಲ.

ಇದುವರೆಗೆ ಹುಬ್ಬಳ್ಳಿಗೆ ಆರು ಸಲ ಭೇಟಿ ನೀಡಿರುವ ಸಚಿವರು ಬಂದಾಗಲೆಲ್ಲ ತಿಂಗಳ ಗಡುವು ನೀಡಿ ಹೋಗುತ್ತಿರುವುದು ಜನರ ನಗೆಪಾಟಲಿಗೀಡಾಗಿದೆ. ಗ್ಲಾಸ್​ಹೌಸ್​ನಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಅವಳಿ ನಗರದ ಇತಿಹಾಸ ಹೇಳಬೇಕಿದ್ದ ಕಾರಂಜಿ ಸಚಿವರು ಬಂದಾಗ ಮಾತ್ರ ಕೆಲ ಹೊತ್ತು ಚಿಮ್ಮುತ್ತದೆ. ಹೀಗಾಗಿ, ಜನರು ಸಚಿವರು ಬಂದಾಗ ಚಿಮ್ಮುವ ಕಾರಂಜಿ ಎಂದೇ ವ್ಯಂಗ್ಯವಾಡುತ್ತಿದ್ದಾರೆ.