ವೃದ್ಧ ಪಾಲಕರನ್ನು ನೋಡಿಕೊಳ್ಳದ ಮಕ್ಕಳ ವಿರುದ್ಧ ಕಠಿಣ ಕ್ರಮ: ಬಿಹಾರ ಸಂಪುಟ ಸಭೆ ತೀರ್ಮಾನ

Share

ಪಟಾನಾ: ನಿತೀಶ್‌ ಕುಮಾರ್‌ ನೇತೃತ್ವದ ಬಿಹಾರ ಸರ್ಕಾರವು ವೃದ್ಧ ಪಾಲಕರಿಗೆ ಸಂತಸದ ಸುದ್ದಿಯೊಂದನ್ನು ನೀಡಿದೆ. ಇನ್ಮುಂದೆ ಮಕ್ಕಳು ನಮ್ಮನ್ನು ನೋಡಿಕೊಳ್ಳುತ್ತಿಲ್ಲ ಎಂದು ಕೊರಗುತ್ತಿದ್ದ ಪಾಲಕರಿಗೆ ರಿಲೀಫ್‌ ಸಿಕ್ಕಂತಾಗಿದ್ದು, ವೃದ್ಧ ಪಾಲಕರನ್ನು ಸರಿಯಾಗಿ ನೋಡಿಕೊಳ್ಳುವಲ್ಲಿ ವಿಫಲರಾಗುವ ಮಕ್ಕಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.

ಬಿಹಾರದ ಸಂಪುಟವು ಮಂಗಳವಾರ ಸುಮಾರು 19 ಪ್ರಸ್ತಾಪಗಳಿಗೆ ಅನುಮೋದನೆ ನೀಡಿದ್ದು, ಮುಖ್ಯವಾಗಿ ಮಕ್ಕಳು ಅವರ ಹಿರಿಯ ಹೆತ್ತವರನ್ನು ಬಿಟ್ಟುಬಿಡುವುದು ಅಥವಾ ಅವರನ್ನು ಕಾಳಜಿ ವಹಿಸದಿರುವವರನ್ನು ತಪ್ಪಿತಸ್ಥರೆಂದು ತೀರ್ಮಾನಿಸಿ ಜೈಲಿಗೆ ಕಳುಹಿಸುವ ಪ್ರಸ್ತಾಪಕ್ಕೆ ಗ್ರೀನ್‌ ಸಿಗ್ನಲ್‌ ನೀಡಲಾಗಿದ್ದು, ಹಾಗಾಗಿ ವೃದ್ಧ ಪಾಲಕರ ಆರೋಗ್ಯ, ಸಂತೋಷ ಮತ್ತು ಕಾಳಜಿ ವಹಿಸುವುದು ಪ್ರತಿಯೊಬ್ಬರಿಗೂ ಕಡ್ಡಾಯವಾಗಿದೆ.
ಮಕ್ಕಳು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಹೆತ್ತವರು ದೂರು ಸಲ್ಲಿಸಿ ಆರೋಪ ಸಾಬೀತಾದರೆ ತಪ್ಪಿತಸ್ಥ ಮಕ್ಕಳಿಗೆ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.

ಈ ಪ್ರಸ್ತಾಪಕ್ಕೆ ರಾಜ್ಯ ಸಂಪುಟ ಈಗಾಗಲೇ ಒಪ್ಪಿಗೆ ಸೂಚಿಸಿದ್ದು, ಅಂತಿಮವಾಗಿ ವಿಧಾನಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುತ್ತದೆ.

ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಈ ರೀತಿಯ ಕಾನೂನು ಅಗತ್ಯವಾಗಿ ಬೇಕಾಗಿದೆ. ಮಕ್ಕಳು ತಮ್ಮ ಬೆಳೆವಣಿಗೆಯ ವೇಳೆ ಪಾಲಕರು ಮಾಡಿದ ಎಲ್ಲ ತ್ಯಾಗಗಳನ್ನು ಪಕ್ಕಕ್ಕೆ ತಳ್ಳಿ ತಮ್ಮ ಹಿರಿಯ ಪಾಲಕರನ್ನು ತಮ್ಮಿಂದ ದೂರವಿಡಲು ನಿರ್ಧರಿಸುತ್ತಾರೆ. ಇಳಿವಯಸ್ಸಿನಲ್ಲಿ ಅವರ ಮಕ್ಕಳು ಸಂತೋಷವಾಗಿ ನೋಡಿಕೊಳ್ಳುವುದು ಅವರ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಇದಕ್ಕಾಗಿಯೇ ಸೂಕ್ತ ಕಾನೂನು ರಚಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.

ಹೊಸ ಪ್ರಸ್ತಾಪಕ್ಕೆ ಕೆಲವರು ಅಪಸ್ವರ ತೆಗೆದಿದ್ದು, ವಯಸ್ಸಾದವರನ್ನು ನೋಡಿಕೊಳ್ಳುವುದನ್ನು ಕಾನೂನಿನಿಂದ ಜಾರಿಗೊಳಿಸಲಾಗುವುದಿಲ್ಲ ಎಂದಿದ್ದರೆ ಮಕ್ಕಳನ್ನು ನೋಡಿಕೊಳ್ಳಿ ಎಂದು ಮನವಿ ಮಾಡಿಕೊಳ್ಳುವುದಕ್ಕಿಂತ ಕಾನೂನಿನ ಮೂಲಕ ಹೋಗುವುದೇ ಸೂಕ್ತ ಎಂದು ಸರ್ಕಾರ ತೀರ್ಮಾನಿಸಿದೆ.

ಭಾರತದ ಜನಸಂಖ್ಯೆಯಲ್ಲಿ 60 ವರ್ಷ ವಯಸ್ಸಿನ ಸುಮಾರು 100 ಮಿಲಿಯನ್ ಜನರಿದ್ದು, ಸಮೀಕ್ಷೆಗಳ ಪ್ರಕಾರ ಇವರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾನಸಿಕವಾಗಿ ನೊಂದವರಾಗಿರುತ್ತಾರೆ. ಅಲ್ಲದೆ, ದೈಹಿಕವಾಗಿಯೂ ಹಲ್ಲೆಗೆ ಒಳಗಾಗುತ್ತಾರೆ ಎಂದು ಹೇಳಲಾಗಿದೆ. ಆರ್ಥಿಕ ಸಮಸ್ಯೆಯೇ ಅತಿ ಮುಖ್ಯ ಕಾರಣವಾಗಿದೆ ಎಂದು ತಿಳಿದುಬಂದಿದೆ.