ವಿಶ್ವ ವಿಕಲಚೇತನರ ದಿನಾಚರಣೆ, ಫಲಾನುಭವಿಗಳಿಗೆ ಸೌಲಭ್ಯ ದೊರೆಯಲಿ: ಡಾ.ಆನಂದ. ಕೆ

Share

ಗದಗ: ವಿಕಲಚೇತನವಿರುವ ಎಲ್ಲ ಫಲಾನುಭವಿಗಳಿಗೂ ಸಹ ಸರ್ಕಾರದ ಸೌಲಭ್ಯಗಳು ದೊರೆಯಬೇಕು. ಈ ನಿಟ್ಟಿನಲ್ಲಿ ಎಲ್ಲರಿಗೂ ಯುನಿಕ್ ಗುರುತಿನ ಪತ್ರ ನೀಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಆನಂದ. ಕೆ ಅವರು ಹೇಳಿದರು.

ಗುರುವಾರ ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಗದಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮತ್ತು ವಿಕಲ ಚೇತನರ ಕ್ಷೇತ್ರದಲ್ಲಿ ಸೇವಾ ನಿರತ ಸಂಘ ಸಂಸ್ಥೆಗಳು ಇವರ ಸಂಯುಕ್ತ ಅಶ್ರಯದಲ್ಲಿ ನಡೆದ ವಿಶ್ವ ವಿಕಲಚೇತನರ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇನ್ನು ಒಂದು ತಿಂಗಳಲ್ಲಿ ಜಿಲ್ಲೆಯ ಎಲ್ಲ ವಿಕಲಚೇತನರಿಗೂ ಸಹ ಸರ್ಕಾರ ನೀಡುತ್ತಿರುವ ಕಾರ್ಡ ವಿತರಿಸಲಾಗುವುದು. ಈ ಕಾರ್ಡನಿಂದ ಸುಲಭವಾಗಿ ಅವರನ್ನು ಗುರುತಿಸಿ ಸೌಲಭ್ಯಗಳನ್ನು ನೀಡಲು ಸಹಕಾರಿಯಾಗಲಿದೆ ಎಂದರು. ಅಲ್ಲದೇ ೨೦೧೬ ರಲ್ಲಿ ವಿಕಲಚೇತನರ ಹಕ್ಕುಗಳ ಕುರಿತು ಸರ್ಕಾರ ಕಾಯ್ದೆ ರೂಪಿಸಿದೆ. ಇದರಲ್ಲಿ ಅವರಿಗೆ ಇರುವ ಹಕ್ಕುಗಳ ವಿವರ ನೀಡಲಾಗಿದ್ದು, ಇದರಿಂದ ಅರ್ಹರೆಲ್ಲರಿಗೂ ಸೌಲಭ್ಯಗಳು ದೊರಕುವಂತಾಗಲಿ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದಲ್ಲಿರುವ ವಿಕಲಚೇತನರು ದುರ್ಬಲರಲ್ಲ ಸಬಲರು, ಅವರಿಗೆ ಕಾನೂನುಗಳಲ್ಲಿರುವ ಹಕ್ಕುಗಳ ಮತ್ತು ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸುವುದರೊಂದಿಗೆ ಸವಲತ್ತುಗಳನ್ನು ತಲುಪಿಸಬೇಕು. ಸರ್ಕಾರದ ಸೌಲಭ್ಯ ತಲುಪಿಸುವ ನಿಟ್ಟಿನಲ್ಲಿ ಇಲಾಖೆಗಳು ಶ್ರಮಿಸಿದಾಗ ಮಾತ್ರ ವಿಕಲಚೇತನರ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದರು.