ವಿಶ್ವಕಪ್ ಕ್ರಿಕೆಟ್: ಭಾರತಕ್ಕೆ ಶ್ರೀಲಂಕಾ ವಿರುದ್ಧ ಭರ್ಜರಿ ಜಯ

Share

ಇಂಗ್ಲೆಂಡ್: ವಿಶ್ವಕಪ್ ಕ್ರಿಕೆಟ್ ನ ಕೊನೆಯ ಲೀಗ್ ಪಂದ್ಯದಲ್ಲಿ ಶ್ರೀಲಂಕಾ ನೀಡಿದ ಸಾಧಾರಣ ಗುರಿಯನ್ನು ಬೆನ್ನೇರಿದ ಭಾರತ ತಂಡ ಆರಂಭಿಕರಾದ ರಾಹುಲ್‌ ಮತ್ತು ರೋಹಿತ್‌ ಶತಕದ ನೆರವಿನಿಂದ 7 ವಿಕೆಟ್ ಗಳ ಜಯ ಸಾಧಿಸಿತು.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ್ದ ಶ್ರೀಲಂಕಾ, ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 264 ರನ್‌ಗಳ ಸವಾಲಿನ ಗುರಿ ಕಲೆಹಾಕಿತ್ತು.

ಈ ಮೊತ್ತ ಬೆನ್ನತ್ತಿದ ಭಾರತಕ್ಕೆ ರೋಹಿತ್‌–ರಾಹುಲ್‌ ಜೋಡಿ ಭದ್ರ ಬುನಾದಿ ಹಾಕಿಕೊಟ್ಟಿತು. ಶತಕ ಪೂರೈಸುತ್ತಿದ್ದಂತೆ ರೋಹಿತ್‌(103) ಹಾಗೂ ರಾಹುಲ್‌(103) ಇಬ್ಬರೂ ಔಟಾದರು. ನಾಲ್ಕನೇ ಕ್ರಮಾಕದ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌(4) ಬಿರುಸಿನ ಹೊಡೆತಕ್ಕೆ ಕೈ ಹಾಕಿ ದಂಡ ತೆತ್ತರು. ಉಳಿದಂತೆ ಕೊನೆಯಲ್ಲಿ ತಾಳ್ಮೆಯ ಆಟವಾಡಿದ ನಾಯಕ ವಿರಾಟ್‌ ಕೊಹ್ಲಿ 41 ಎಸೆತಗಳಲ್ಲಿ 34 ರನ್‌ಗಳಿಸಿ ಹಾರ್ದಿಕ್‌ ಪಾಂಡ್ಯ(7) ಜೊತೆಗೆ ಗೆಲುವಿನ ದಡ ಸೇರಿಸಿದರು.

ಅಂತಿಮವಾಗಿ ಭಾರತ, 43.3 ಓವರ್‌ಗಳಲ್ಲಿ ಮೂರು ವಿಕೆಟ್‌ ನಷ್ಟಕ್ಕೆ 265ರನ್‌ ಗಳಿಸಿ ಗೆಲುವಿನ ನಗೆ ಬೀರಿತು. ಭಾರತ ತಂಡದ ಆರಂಭಿಕ ಜೋಡಿ ರೋಹಿತ್‌ ಶರ್ಮಾ ಹಾಗೂ ಕೆ.ಎಲ್‌ ರಾಹುಲ್‌ ಅವರು ಮೊದಲ ವಿಕೆಟ್‌ ಜೊತೆಯಾಟದಲ್ಲಿ 189 ರನ್ ಕಲೆಹಾಕಿದರು.