100ನೇ ಟೆಸ್ಟ್​​ನಲ್ಲಿ ದಾಖಲೆ ಬರೆಯಲು ಸಜ್ಜಾದ ಕೊಹ್ಲಿ!

Share

ಮುಂಬೈ, ಮಾರ್ಚ್ 2:  ಎಲ್ಲಾ ಮಾದರಿಯ ನಾಯಕತ್ವ ಜವಾಬ್ದಾರಿಯಿಂದ ಕೆಳಗಿಳಿದಿರುವ ವಿರಾಟ್ ಕೊಹ್ಲಿ, ಸದ್ಯ ವಿಶ್ವ ಕ್ರಿಕೆಟ್‌ನ ಬೆಸ್ಟ್​ ಪ್ಲೇಯರ್​ ಎನ್ನಿಸಿಕೊಂಡಿದ್ದಾರೆ. ಆಕ್ರಮಣಕಾರಿ ಆಟದ ಮೂಲಕ ವಿರಾಟ್​ ತಮ್ಮ ಹೆಸರಿಗೆ ಈಗಾಗಲೇ ಸಾಕಷ್ಟು ದಾಖಲೆಗಳನ್ನು ಬರೆದುಕೊಂಡಿದ್ದಾರೆ. ಇದೀಗ 100ನೇ ಟೆಸ್ಟ್ ಪಂದ್ಯದಲ್ಲಿ ಕೂಡ ವಿರಾಟ್ ಕೊಹ್ಲಿ ಮತ್ತೊಂದು ವಿಶೇಷ ಸಾಧನೆ ಮಾಡುವ ಅವಕಾಶವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಹೌದು, ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್​ ವಿರಾಟ್‌ ವೃತ್ತಿ ಬದುಕಿನ 100ನೇ ಟೆಸ್ಟ್‌ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಇನ್ನು ವಿರಾಟ್​ ವೃತ್ತಿ ಜೀವನದ ಈ ಐತಿಹಾಸಿಕ ಪಂದ್ಯದಲ್ಲಿ ಇನ್ನೊಂದು ದಾಖಲೆ ಬರೆಯಲು ಸಜ್ಜಾಗಿದ್ದಾರೆ.

ರನ್​ ಮಷಿನ್​ ವಿರಾಟ್​ ಕೊಹ್ಲಿ ಈ ಪಂದ್ಯದಲ್ಲಿ ಇನ್ನು 38 ರನ್​ ಬಾರಿಸಿದರೆ ಟೆಸ್ಟ್​ ಕ್ರಿಕೆಟ್​ನಲ್ಲಿ 8000 ರನ್​ ಬಾರಿಸಿದ ಆಟಗಾರರ ಪಟ್ಟಿಗೆ ಸೇರಲಿದ್ದಾರೆ. ಈ ಪಟ್ಟಿಯಲ್ಲಿ ಈಗಾಗಲೇ ಸಚಿನ್​​ ತೆಂಡೂಲ್ಕರ್​, ಸೌರವ್​ ಗಂಗೂಲಿ, ರಾಹುಲ್​ ದ್ರಾವಿಡ್​, ಸೇರಿದಂತೆ ವಿವಿಎಸ್​ ಲಕ್ಷ್ಮಣ ಇದ್ದಾರೆ. ಸದ್ಯ ಈ ಸಾಲಿಗೆ ಸೇರಿಕೊಳ್ಳುವ ಅವಕಾಶ ವಿರಾಟ್​ಗೆ ಒಲಿದಿದ್ದು, 100ನೇ ಪಂದ್ಯದಲ್ಲಿ ವಿರಾಟ್​ ಇನ್ನೊಂದು ದಾಖಲೆ ಬರೆಯುತ್ತಾರೆಯೇ ಎಂದು ಕಾದು ನೋಡಬೇಕು.

ಮಾರ್ಚ್‌ 4ರಿಂದ ಶುರುವಾಗಲಿರುವ ಪಂದ್ಯಕ್ಕೆ ಬಿಸಿಸಿಐ ಪ್ರೇಕ್ಷಕರಿಗೆ ಪ್ರವೇಶವಿಲ್ಲ ಎಂದಿತ್ತು. ಮಂಡಳಿಯ ಈ ನಿರ್ಧಾರ ಆಕ್ರೋಶಕ್ಕೆ ಕಾರಣವಾಗುತ್ತಿದ್ದಂತೆ ಶೇ.50 ರಷ್ಟು ಪ್ರೇಕ್ಷಕರಿಗೆ ಅನುಮತಿ ನೀಡೋದಾಗಿ ತಿಳಿಸಿದ್ದು, ವಿರಾಟ್​ 100ನೇ ಪಂದ್ಯವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.