ಹಾವೇರಿ: 54 ಮಂದಿಗೆ ಕೋವಿಡ್ ಸೋಂಕು ದೃಢ, ನಾಲ್ವರು ಗುಣಮುಖ

Share

ಹಾವೇರಿ: ಜಿಲ್ಲೆಯ ಶಿಗ್ಗಾಂವಿ ತಹಶೀಲ್ದಾರ, ದಿನಪತ್ರಿಕೆಯ ಜಾಹೀರಾತು ಪ್ರತಿನಿಧಿ, ಶ್ರೂಶ್ರೂಷಕ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ಭಾನುವಾರ 54 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ನಾಲ್ವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಇಬ್ಬರು ಮರಣ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 459 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಗೊಂಡಿವೆ. 292 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. 11 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. 156 ಪ್ರಕರಣಗಳು ಸಕ್ರಿಯವಾಗಿವೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ಭಾನುವಾರದ ಪ್ರಕರಣಗಳಲ್ಲಿ ಶಿಗ್ಗಾಂವ ತಾಲ್ಲೂಕಿನಲ್ಲಿ 30, ಹಾವೇರಿ ತಾಲ್ಲೂಕಿನಲ್ಲಿ 9, ರಾಣೇಬೆನ್ನೂರು, ಹಾನಗಲ್ ಹಾಗೂ ಸವಣೂರಿನಲ್ಲಿ ತಲಾ 5 ಪ್ರಕರಣಗಳು ಸೇರಿದಂತೆ 54 ಜನರಿಗೆ ಸೋಂಕು ದೃಢಪಟ್ಟಿದೆ.

ಇಬ್ಬರ ಮರಣ: ಬಂಕಾಪುರ ಪಟ್ಟಣದ 47 ವರ್ಷದ ಪುರುಷ (HVR-436) ಜುಲೈ 18 ರಂದು ತೀವ್ರ ಉಸಿರಾಟದ ಸಮಸ್ಯೆಯಿಂದ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದು, ಕೋವಿಡ್ ಸೋಂಕಿನಿಂದ ಮೃತರಾಗಿದ್ದಾರೆ. ಹಾನಗಲ್ ತಾಲ್ಲೂಕಿನ ಬಸಾಪುರದ 25 ವರ್ಷದ ಪುರುಷ (HVR-395) ತೀವ್ರ ಉಸಿರಾಟದ ಸಮಸ್ಯೆಯಿಂದ ಜುಲೈ 17 ರಂದು ಆಸ್ಪತ್ರೆಗೆ ದಾಖಲಾಗಿದ್ದು, ಜುಲೈ 18 ರಂದು ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿನಿಂದ ಮರಣ ಹೊಂದಿರುತ್ತಾರೆ.

ಸೋಂಕಿತರ ನಿವಾಸದ ಪ್ರದೇಶವನ್ನು ನಿಯಮಾನುಸಾರ ಕಂಟೈನ್‍ಮೆಂಟ್ ಜೋನ್ ಹಾಗೂ ಬಫರ್ ಜೋನ್ ಆಗಿ ಘೋಷಿಸಿ ಆಯಾ ತಾಲೂಕಾ ದಂಡಾಧಿಕಾರಿಗಳನ್ನು ಇನ್ಸಿಡೆಂಟಲ್ ಕಮಾಂಡರ್ ಆಗಿ ನೇಮಿಸಲಾಗಿದೆ.

ನಾಲ್ವರ ಬಿಡುಗಡೆ: ಕೋವಿಡ್‍ನಿಂದ ಗುಣಮುಖರಾಗಿ ಭಾನುವಾರ ಸವಣೂರಿನ ಇಬ್ಬರು ಹಾಗೂ ಶಿಗ್ಗಾಂವ ಹಾಗೂ ಹಾವೇರಿ ತಲಾ ಒಬ್ಬರು (ಪಿ-29537, ಪಿ-45205, ಪಿ-45224, ಪಿ-58368) ಬಿಡುಗಡೆಯಾಗಿದ್ದಾರೆ.