ಹೋಮ್ ಕ್ವಾರಂಟೈನ್ ಮನೆಗಳಿಗೆ ಅಂತರ ಕಾಯ್ದುಕೊಳ್ಳಲು ಆರೋಗ್ಯ ಇಲಾಖೆಯಿಂದ ಸ್ಟೀಕರ್

Share

ಹಾವೇರಿ: ವೇಗವಾಗಿ ಹರಡುತ್ತಿರುವ ಕೋವಿಡ್-19 ನಿಯಂತ್ರಣಕ್ಕೆ ತುರ್ತು ಕ್ರಮಗಳನ್ನು ಕೈಗೊಳ್ಳಲು ಮಾನ್ಯ ಮುಖ್ಯಮಂತ್ರಿಗಳು ರಾಜ್ಯಾದ್ಯಂತ ಲಾಕ್‍ಡೌನ್ ಮಾಡಿ ತುರ್ತು ನಿರ್ಧಾರ ಪ್ರಕಟಿಸಿದಂತೆ ಹಾವೇರಿ ಜಿಲ್ಲೆಯಲ್ಲಿ ಕೂಡಾ ಕಠಿಣ ಪರಿಣಾಮಕಾರಿ ಕ್ರಮಕ್ಕೆ ಉಪವಿಭಾಗಾಧಿಕಾರಿಗಳು, ತಹಶೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳು ಜಿಲ್ಲೆಯ ವಿವಿಧೆಡೆ ಸಂಚಾರ ಕೈಗೊಂಡು ಅವಲೋಕನ ನಡೆಸಿದ್ದಾರೆ.

ಸವಣೂರು ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಹಾಗೂ ಹಾವೇರಿ ಉಪವಿಭಾಗಾಧಿಕಾರಿ ಡಾ.ದೀಲಿಷ್ ಸಸಿ ಅವರ ನೇತೃತ್ವದಲ್ಲಿ ವಿವಿಧ ತಾಲೂಕಿನ ತಹಶೀಲ್ದಾರಗಳು, ಪೊಲೀಸ್ ಅಧಿಕಾರಿಗಳು, ತಾಲೂಕಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಸಂಚಾರ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಂದ ಪ್ರತಿ ಗ್ರಾಮಗಳಲ್ಲೂ ಮೆನೆಮನೆಗೆ ತೆರಳಿ ಕರಪತ್ರಗಳ ವಿತರಣೆ, ಕರೊನಾ ನಿಯಂತ್ರಣಕ್ಕೆ ಮುಂಜಾಗ್ರತೆ ಹಾಗೂ ಜಿಲ್ಲೆಯಾದ್ಯಂತ ಜಾರಿಗೊಂಡಿರುವ ಸೆಕ್ಷನ್-144 ಕುರಿತಂತೆ ತಮಟೆ ಹಾಗೂ ಡಂಗುರಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.

ಹೊರರಾಜ್ಯ ಹಾಗೂ ವಿದೇಶಗಳಿಂದ ಹಾವೇರಿ ಜಿಲ್ಲೆಗೆ ಆಗಮಿಸಿದವರ ಆರೋಗ್ಯ ತಪಾಸಣೆ ನಡೆಸಲಾಗಿದ್ದು ಯಾರಿಗೂ ಕರೋನಾದ ಪಾಸಿಟಿವ್ ಲಕ್ಷಣಗಳು ಕಂಡುಬರದಿದ್ದರೂ ಹೋಮ್ ಕ್ವಾರಂಟೈನ್‍ನಲ್ಲಿ ತೀವೃ ನಿಗಾವಹಿಸಲಾಗಿದೆ. ಜಿಲ್ಲೆಯಲ್ಲಿ 153 ಜನ ಹೋಮ್ ಕ್ವಾರಂಟೈನ್‍ನಲ್ಲಿದ್ದು ಈ ವ್ಯಕ್ತಿಗಳು ಹೊರಬರದಂತೆ ಎಚ್ಚರವಹಿಸಲಾಗಿದೆ. ಆ ಕುಟುಂಬದವರ ಮೇಲೂ ನಿಗಾವಹಿಸಲಾಗಿದ್ದು, ಸದರಿ ಹೋಮ್ ಕ್ವಾರಂಟೈನ್‍ನಲ್ಲಿರುವ ಮನೆಗಳಿಗೆ “ದಯವಿಟ್ಟು ಯಾರೂ ಈ ಕೆಳಗಿನ ವಿಳಾಸದಲ್ಲಿ ಅಂತರ ಕಾಯ್ದುಕೊಳ್ಳುವಿಕೆ ಮತ್ತು ಗೃಹಪ್ರತ್ಯೇಕತೆಯಲ್ಲಿ ವಾಸವಿರುವ ವ್ಯಕ್ತಿಗಳು ಹಾಗೂ ಆ ಕುಟುಂಬದವರನ್ನು ಭೇಟಿಯಾಗದಿರಿ” ಎಂಬ ಸ್ಟೀಕರ್‍ಗಳನ್ನು ಆರೋಗ್ಯ ಇಲಾಖೆಯಿಂದ ಅಂಟಿಸಲಾಗುತ್ತದೆ ಹಾಗೂ ಹೋಮ್ ಕ್ವಾರಂಟೈನ್‍ನಲ್ಲಿರುವ ವ್ಯಕ್ತಿಗಳಿಗೆ Proud to protect haverians home quarantined ಎಂದು ಸೀಲ್ ಹಾಕುವ ಕಾರ್ಯ ಕೈಗೊಳ್ಳಲಾಗುತ್ತದೆ. ಇದರಿಂದ ಇತರರಿಗೆ ಯಾರೂ ಹೋಮ್ ಕ್ವಾರಂಟೈನ್‍ನಲ್ಲಿ ಇದ್ದಾರೆ ಎಂಬುದನ್ನು ಗುರ್ತಿಸಲು ಸುಲಭವಾಗಲಿದೆ.

ಕರೋನಾ ತಡೆಗೆ ಅಧಿಕಾರಿಗಳ ತಂಡ ಹಗಲುರಾತ್ರಿ ಶ್ರಮವಹಿಸಿ ಕಾರ್ಯನಿರತವಾಗಿದೆ. ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ. ಸ್ವಯಂ ಪ್ರೇರಣೆಯಿಂದ ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಅನುಸರಿಸಿ ಸಾಮಾಜಿಕ ಅಂತರಕಾಯ್ದುಕೊಳ್ಳುವಿಕೆ ಹಾಗೂ ಮನೆಯಿಂದ ಹೊರಬರದಂತೆ ಎಚ್ಚರಿಕೆ ವಹಿಸಲು ಮನವಿ ಮಾಡಿಕೊಳ್ಳಲಾಗಿದೆ.