ಹಾವೇರಿ ಜಿಲ್ಲಾದ್ಯಂತ ಅಗತ್ಯ ವಸ್ತುಗಳ ಖರೀದಿಗೆ ವೇಳೆ ನಿಗದಿ: ಎಸ್ಪಿ ಕೆ.ಜಿ.ದೇವರಾಜ್

Share

ಹಾವೇರಿ; ಮಹಾಮಾರಿ ಕರೋನಾ (ಕೋವಿಡ್19) ವೈರಸ್ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲಾದ್ಯಂತ ಲಾಕ್ ಡೌನ್ ಆದೇಶ ಕಟ್ಟುನಿಟ್ಟಾಗಿ ಜಾರಿಯಲ್ಲಿದ್ದು, ಬೆಳಿಗ್ಗೆ 6 ರಿಂದ 10 ಗಂಟೆಗಳವರೆಗೆ ಸಾರ್ವಜನಿಕರಿಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ಹಾವೇರಿ ಪೋಲಿಸ್ ವರಿಷ್ಠಾಧಿಕಾರಿ ಕೆ.ಜಿ. ದೇವರಾಜ್ ತಿಳಿಸಿದ್ದಾರೆ.

ಬುಧವಾರ ತಮ್ಮ ಕಚೇರಿಯಲ್ಲಿ ಮಾಧ್ಯಮದವರು ಹಾಗೂ ಪತ್ರಿಕಾ ವಿತರಕರ ಸಮಸ್ಯೆಗಳನ್ನು ಆಲಿಸಿ ನಂತರ ಮಾತನಾಡಿದ ಅವರು, ಸಾರ್ವಜನಿಕರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ನಿಗದಿ ಪಡಿಸಿದ ವೇಳೆಯಲ್ಲಿ ಗುಂಪು ಗುಂಪಾಗಿ ಸೇರದೆ ಮನೆಯಿಂದ ಒಬ್ಬರಂತೆ ಆಗಮಿಸಿ ಅಗತ್ಯ ವಸ್ತುಗಳ ಖರೀದಿಸಬೇಕು. ಇದರಿಂದ ಕರೋನಾ ವೈರಸ್ ಅನ್ನು ತಡೆಗಟ್ಟಲು ಸಾಧ್ಯವಿದೆ‌‌. ಈ ನಿಯಮವನ್ನು ಕಡ್ಡಾಯವಾಗಿ ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು. ನಿಯಮಗಳನ್ನು ಉಲ್ಲಂಘಿಸಿದೆ ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ಮಾಡುವಂತೆ ವ್ಯಾಪಾರಸ್ಥರಿಗೆ ಸೂಚನೆ ನೀಡಲಾಗಿದ್ದು, ಇದಕ್ಕಾಗಿ ಅಂಗಡಿಗಳ ಮುಂದೆ ಒಂದು ಮೀಟರ್ ಅಂತರ ಸೂಚಿಸುವ ಸಣ್ಣ ವೃತ್ತಗಳನ್ನು ಬರೆದು ವೃತ್ತದಲ್ಲಿ ಜನರನ್ನು ನಿಲ್ಲಿಸಿ ಅಗತ್ಯ ವಸ್ತುಗಳನ್ನು ಪೂರೈಸುವಂತೆ ಸೂಚಿಸಲಾಗಿದೆ ಎಂದರು.

ಜಿಲ್ಲಾದ್ಯಂತ ಲಾಕ್ ಡೌನ್ ಜಾರಿ ಇರುವುದರಿಂದ ಮಾಧ್ಯಮದವರು ಹಾಗೂ ಪತ್ರಿಕಾ ವಿತರಕರು ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಅವರಿಗೆ ಎಮಜೆ೯ನ್ಸಿ ಪಾಸ್ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಗಳ ಭೇಟಿಯ ಸಂದರ್ಭದಲ್ಲಿ ಜಿಲ್ಲಾ ವಾರ್ತಾಧಿಕಾರಿ ಡಾ.ರಂಗನಾಥ, ವರದಿಗಾರರಾದ ಗಂಗಾಧರ ಹೂಗಾರ, ವಾಗೀಶ ಪಂಡೀತಾರಾಧ್ಯ ಪಾಟೀಲ, ರಾಜೇಂದ್ರ ರಿತ್ತಿ, ನಾರಾಯಣ ಹೆಗಡೆ, ರಾಜು ನದಾಫ, ಪ್ರಭುಗೌಡ ಪಾಟೀಲ, ನಾಗರಾಜ ಕುರವತ್ತೇರ, ಪರಶುರಾಮ ಕೆರಿ, ಫಕ್ಕೀರಯ್ಯ ಗಣಾಚಾರಿ, ಮಂಜುನಾಥ ರಾಠೋಡ, ಎಚ್.ಕೆ.ನಟರಾಜ್, ಮಂಜುನಾಥ ಭೊವಿ, ವಿತರಕರಾದ ಕರಬಸಪ್ಪ ಹಳದೂರ, ಬೀರಪ್ಪ ಇತರರು ಇದ್ದರು.