ಹಾವೇರಿ ಜಿಲ್ಲೆಯ ಮ‌ೂರನೇ ಕೋವಿಡ್ ಸೋಂಕಿತ ಗುಣಮುಖ: ಆಸ್ಪತ್ರೆಯಿಂದ ಬಿಡುಗಡೆ

Share

ಹಾವೇರಿ: ಜಿಲ್ಲೆಯ ಶಿಗ್ಗಾಂವ ತಾಲೂಕಿನ ಅಂದಲಗಿ ಗ್ರಾಮದ 25 ವರ್ಷದ ಕೊರೊನಾ ಸೋಂಕಿತ ಸಂಪೂರ್ಣ ಗುಣಮುಖವಾದ ಹಿನ್ನಲೆ ಬುಧವಾರ ಜಿಲ್ಲಾ ಕೋವಿಡ್19 ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.

ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದ ಆಸ್ಪತ್ರೆಯ ವೈದ್ಯ ಡಾ. ವಿಶ್ವನಾಥ ಸಾಲಿಮಠ ಸುದ್ದಿಗಾರರೊಂದಿಗೆ ಮಾತನಾಡಿ, ಮೂರನೇ ಕೊರೊನಾ ಸೋಂಕಿತ P- 853 ಸಂಖ್ಯೆಯ ವ್ಯಕ್ತಿಯು ಮಾವಿನ ಹಣ್ಣಿ ವ್ಯಾಪಾರಿಯಾಗಿದ್ದ. ಈತನು ಮುಂಬೈ ಮಾರುಕಟ್ಟೆಗೆ ಹೋದ ಸಮಯದಲ್ಲಿ ಕೊರೊನಾ ಸೋಂಕಿಗೆ ಒಳಗಾಗಿದ್ದ. ಬಳಿಕ ಸೋಂಕಿತನನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಈಗ ಸೋಂಕಿತ ಸಂಪೂರ್ಣ ಗುಣಮುಖನಾಗಿದ್ದು, ಪ್ರಯೋಗಾಲಯದ ವರದಿ ಆಧಾರಿಸಿ ಬಿಡುಗಡೆ ಮಾಡಲಾಗುತ್ತಿದೆ ಎಂದರು.

ಈವರೆಗೆ ಜಿಲ್ಲೆಯಲ್ಲಿ ಆರು ಕೋವಿಡ್19 ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ ಈಗಾಗಲೇ ಇಬ್ಬರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಇಂದು ಮತ್ತೊಬ್ಬ ವ್ಯಕ್ತಿ ಗುಣಮುಖರಾಗಿದ್ದು, ಬಿಡುಗಡೆ ಮಾಡಲಾಗುತ್ತಿದೆ ಎಂದು ಹೇಳಿದರು.

ಇತ್ತೀಚೆಗೆ ಬರುತ್ತಿರುವ ಪ್ರಕರಣಗಳಲ್ಲಿ ಕೋವಿಡ್ ಲಕ್ಷಣಗಳು ಕಾಣಿಸಿಕೊಳ್ಳದ ವ್ಯಕ್ತಿಗಳು ಜಾಸ್ತಿ ಇದ್ದಾರೆ. ಆದ್ದರಿಂದ ಅವರೆಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಈ ರೋಗದಿಂದ ದೂರವಿರಬೇಕು ಎಂದು ಸಲಹೆ ನೀಡಿದರು.

ಜಿಲ್ಲಾಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಪೂಜಾರ ಮಾತನಾಡಿ, ಸರಕಾರದ ಮಾರ್ಗ ಸೂಚಿಯಂತೆ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.