ಹಾವೇರಿ ಜಿಲ್ಲೆಯಲ್ಲಿ ಮತ್ತೋರ್ವ ಕೋವಿಡ್ 19 ಸೋಂಕಿತ ಗುಣಮುಖ: ಆಸ್ಪತ್ರೆಯಿಂದ ಬಿಡುಗಡೆ

Share

ಹಾವೇರಿ: ಜಿಲ್ಲೆಯ ಪ್ರಥಮ ಕೊರೊನಾ ಪಾಸಿಟಿವ್ ದೃಢಪಟ್ಟ 32 ವರ್ಷದ ವ್ಯಕ್ತಿಯು ಸೋಂಕಿನಿಂದ ಸಂಪೂರ್ಣ ಗುಣಮುಖನಾದ ಹಿನ್ನಲೆಯಲ್ಲಿ ಮಂಗಳವಾರ ಜಿಲ್ಲಾ ಕೋವಿಡ್ 19 ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಪ್ರಭಾರ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಿ.ಆರ್ ಹಾವನೂರ ಮಾತನಾಡಿ, ಮುಂಬೈನಿಂದ ಜಿಲ್ಲೆಗೆ ಆಗಮಿಸಿದ್ದ P- 639 ವ್ಯಕ್ತಿಗೆ ಕೋವಿಡ್ ಸೋಂಕು ಇರುವ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈತನ ಅಂತಿಮ ವರದಿ ನೆಗಟಿವ್ ಬಂದ ಹಿನ್ನೆಲೆಯಲ್ಲಿ ಇಂದು ಬಿಡುಗಡೆ ಮಾಡಲಾಗಿದೆ. ಒಟ್ಟಾರೆ ಆರು ಸೋಂಕಿತರ ಪೈಕಿ ಎರಡು ಜನರು ಗುಣಮುಖ ಹೊಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದ ನಾಲ್ವರು ಚಿಕಿತ್ಸೆಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಯಾವುದೇ ಸಮಸ್ಯೆಯಾಗದಂತೆ ಆರೋಗ್ಯ ಇಲಾಖೆ ಹೆಚ್ಚಿನ ನಿಗಾವಹಿಸಿದೆ ಎಂದರು.

ಇಂದು ಆಸ್ಪತ್ರೆಯಿಂದ ಬಿಡುಗಡೆಯಾದ ವ್ಯಕ್ತಿಯು ಮೂಲತಃ ಸವಣೂರ ತಾಲೂಕಿನ ಕೃಷ್ಣ ನಗರದ ನಿವಾಸಿಯಾಗಿದ್ದಾನೆ. P-639 ವ್ಯಕ್ತಿಯು ಮುಂಬೈನಿಂದ ಜಿಲ್ಲೆಗೆ ಆಗಮಿಸಿದ್ದು, ಮೇ 4 ರಂದು ಈತನಿಗೆ ಸೋಂಕು ದೃಢಪಟ್ಟಿತ್ತು. ಜಿಲ್ಲೆಯ ಮೊದಲ ಕೊರೊನಾ ಪ್ರಕರಣವೂ ಇದಾಗಿತ್ತು. ಈತನೊಂದಿಗೆ ಮುಂಬೈನಿಂದ ಆಗಮಿಸಿದ್ದ 40 ವರ್ಷ ಸಹೋದರನಿಗೂ (P-672) ಸೋಂಕು ದೃಢಪಟ್ಟಿತ್ತು. ಆದರೆ ಇವನಿಗಿಂತ ಮೊದಲೇ ಆತ ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾನೆ. ಒಟ್ಟಾರೆ ಜಿಲ್ಲೆಯಲ್ಲಿ ಈವರೆಗೆ ಆರು ಜನರಿಗೆ ಕೋವಿಡ್ ಸೋಂಕು ದೃಢಗೊಂಡಿದ್ದು, ಈ ಪೈಕಿ ಎರಡು ಜನರು ಬಿಡುಗಡೆಗೊಂಡಿದ್ದಾರೆ. ನಾಲ್ವರು ಸೋಂಕಿತರಿಗೆ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಬಿಡುಗಡೆಗೊಂಡ ಇಬ್ಬರನ್ನು ಗೃಹ ಪ್ರತ್ಯೇಕತೆಯಲ್ಲಿ ಇರಿಸಲಾಗುತ್ತಿದೆ.

ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರಾದ ಡಾ.ಸುರೇಶ ಪೂಜಾರ, ಡಾ.ವಿಶ್ವನಾಥ ಸಾಲಿಮಠ, ದಾದಿಯರು ಇತರೆ ಆರೋಗ್ಯ ಸಿಬ್ಬಂದಿಗಳು ಇದ್ದರು.