ಮಹಾರಾಷ್ಟ್ರದಲ್ಲಿ ಬೀದಿ ವ್ಯಾಪಾರ ಮಾಡುತ್ತಿದ್ದ ಹಾವೇರಿ ಜಿಲ್ಲೆಯ ನಾಲ್ವರಿಗೆ ಕೋವಿಡ್ 19 ಸೋಂಕು ದೃಢ: ಸೋಂಕಿತರ ಸಂಖ್ಯೆ 10 ಏರಿಕೆ

Share

ಹಾವೇರಿ: ಮಾಹಾರಾಷ್ಟ್ರ ರಾಜ್ಯದಿಂದ ಸೇವಾ ಸಿಂಧು ಪಾಸ್ ಪಡೆದು ಜಿಲ್ಲೆಗೆ ಆಗಮಿಸಿದ್ದ ರಾಣೇಬೆನ್ನೂರು ತಾಲೂಕು ತುಮ್ಮಿನಕಟ್ಟಿ ಗ್ರಾಮದ ನಾಲ್ವರಿಗೆ ಗುರುವಾರ ಕೋವಿಡ್ 19 ಸೋಂಕು ಇರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.

ತುಮ್ಮಿನಕಟ್ಟಿ ಗ್ರಾಮದ 2 ವರ್ಷದ ಗಂಡು ಮಗು (P-2494), 34 ವರ್ಷದ ಪುರುಷ (P-2495), 28 ವರ್ಷದ ಮಹಿಳೆ (P-2496) ಹಾಗೂ 22 ವರ್ಷದ ಪುರುಷನಿಗೆ (P-2497) ಗುರುವಾರ ಕೋವಿಡ್ ಸೋಂಕು ದೃಢಪಟ್ಟಿದೆ. ಈವರೆಗೆ ಜಿಲ್ಲೆಯಲ್ಲಿ ಒಟ್ಟು 10 ಕೋವಿಡ್ 19 ಪ್ರಕರಣಗಳು ಪತ್ತೆಯಾಗಿದ್ದು, ಮೂವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮಹಾರಾಷ್ಟ್ರ ರಾಜ್ಯದ ಥಾಣೆ ಜಿಲ್ಲೆಯ ಪಾಂಡಪಾಡ್ವಾದ ಕಲ್ವಾದಲ್ಲಿ ಬೀದಿ ವ್ಯಾಪಾರ ಮಾಡಿಕೊಂಡಿದ್ದ ಇವರು ಸೇವಾ ಸಿಂಧು ಆಪ್‍ನಲ್ಲಿ ನೊಂದಣಿ ಮಾಡಿಸಿಕೊಂಡು ಎರಡು ಬಸ್‍ಗಳಲ್ಲಿ ಮೇ 16 ರಂದು ಮಹಾರಾಷ್ಟ್ರದಿಂದ ಹೊರಟು ಮೇ 17 ರಂದು ಬೆಳಗಾವಿಯ ಕೊಂಗನೊಳ್ಳಿ ಚೆಕ್ ಪೋಸ್ಟ್ ಮಾರ್ಗದಿಂದ ಪ್ರಯಾಣ ಬೆಳೆಸಿ ರಾತ್ರಿ 9-15ಕ್ಕೆ ಹಾವೇರಿ ಜಿಲ್ಲೆ ತಡಸ ಚೆಕ್‍ಪೋಸ್ಟ್‍ಗೆ ಆಗಮಿಸಿದ್ದರು. ಎರಡು ಬಸ್‍ನಲ್ಲಿದ್ದ ಎಲ್ಲ 89 ಜನರನ್ನು ತಡಸ ಚೆಕ್‍ಪೋಸ್ಟ್‍ನಲ್ಲಿ ಆರೋಗ್ಯ ತಪಾಸಣೆ ನಡೆಸಿ ನೇರವಾಗಿ ರಾಣೇಬೆನ್ನೂರು ತಾಲೂಕು ಮಾಕನೂರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 29 ಜನರನ್ನು, ಸರ್ಕಾರಿ ಗಿರಿಜನ ಆಶ್ರಮ ಶಾಲೆಯಲ್ಲಿ 19 ಜನರನ್ನು ಹಾಗೂ ಈಶ್ವರ ನಗರದ ದಿ.ದೇವರಾಜು ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ 41 ಜನರನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿತ್ತು.

ಮೇ 24 ರಂದು ಮಾಕನೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಇರಿಸಿದ್ದ 29 ಜನರ ಗಂಟಲು ದ್ರವ್ಯ ಮಾದರಿಯನ್ನು ಲ್ಯಾಬ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಪೈಕಿ ಮೇ 28 ರಂದು ಬೆಳಿಗ್ಗೆ 10 ಗಂಟೆಗೆ ನಾಲ್ಕು ಜನರಿಗೆ ಕೋವಿಡ್ ಸೋಂಕು ದೃಢಗೊಂಡಿರುವ ವರದಿ ಬಂದಿದೆ. ಜಿಲ್ಲಾ ನಿಗದಿತ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ P-2495 ಮತ್ತು P-2496 ಗಂಡ, ಹೆಂಡತಿ ಹಾಗೂ P-2494 ಮಗು ಒಂದೇ ಕುಟುಂಬದವಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಮಾಕನೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ 100 ಮೀಟರ್ ವ್ಯಾಪ್ತಿಯನ್ನು ಕಂಟೈನ್ ಮೆಂಟ್ ಝೋನ್ ಎಂದು ಘೋಷಿಸಲಾಗಿದೆ ಹಾಗೂ ಬಫರ್ ಝೋನ್ ಎಂದು ಗುರುತಿಸಲಾಗಿದೆ. ಈ ಕಂಟೈನ್‍ಮೆಂಟ್ ಹಾಗೂ ಬಫರ್ ಝೋನ್ ಪ್ರದೇಶಕ್ಕೆ ಇನ್ಸಿಡೆಂಟ್ ಕಮಾಂಡರ್ ಆಗಿ ರಾಣೇಬೆನ್ನೂರ ತಹಶೀಲ್ದಾರ್ ಹಾಗೂ ತಾಲ್ಲೂಕು ದಂಡಾಧಿಕಾರಿ ಬಸವನಗೌಡ ಕೊಟೂರ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.