ಸಾರಿಗೆ ಸಂಸ್ಥೆಗೆ ಇಲೆಕ್ಟ್ರಿಕಲ್ ಬಸ್ ಖರೀದಿಗೆ ಸಿದ್ಧ: ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ

Share

ಹುಬ್ಬಳ್ಳಿ: ಇಲೆಕ್ಟ್ರಿಕಲ್ ಬಸ್ ಗಳನ್ನು ಪೂರೈಸಲು ಯಾವುದಾದರೂ ಉದ್ಯಮಗಳು ಮುಂದೆ ಬಂದರೆ ರಾಜ್ಯದ ಸಾರಿಗೆ ಸಂಸ್ಥೆಗೆ ಖರೀದಿಸಲು ಒಡಂಬಡಿಕೆ ಮಾಡಿಕೊಳ್ಳಲು ಸಾಧ್ಯವಿರುವುದಾಗಿ ಎಂದು ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.

ಇನ್ ವೆಸ್ಟ್ ಕರ್ನಾಟಕ ಹುಬ್ಬಳ್ಳಿಗೆ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದ ಅವರು, ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಅಸಮತೋಲನ ನಿವಾರಣೆಗೆ ಈ ಸಮಾವೇಶ ಸಹಕಾರಿಯಾಗಲಿದೆ. ವಿದೇಶಿ ಗುಣಮಟ್ಟಕ್ಕೆ ಪೈಪೋಟಿ ನೀಡುವಂತಹ ಸಾಧನೆಗಳನ್ನು ನಮ್ಮ ಉದ್ಯಮಿಗಳು ಮಾಡಬೇಕು ಎಂದರು.

ಕೇಂದ್ರ ರೇಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಮಾತನಾಡಿ, ಕರ್ನಾಟಕದಲ್ಲಿ ರೇಲ್ವೇ ಇಲಾಖೆಯು ಬರುವ ಹತ್ತು ವರ್ಷಗಳಲ್ಲಿ 1.50 ಲಕ್ಷ ಕೋಟಿ ಬಂಡವಾಳ ಹೂಡಿಕೆ ಮಾಡಲಾಗಿದೆ. ಇದೇ ವರ್ಷದಲ್ಲಿ 20 ಸಾವಿರ ಕೋಟಿ ರೂ.ಹೂಡಿಕೆ ಮಾಡಲಾಗುತ್ತಿದೆ.ಬೆಳಗಾವಿ ಧಾರವಾಡ ನೇರ ರೈಲು ಮಾರ್ಗ ನಿರ್ಮಾಣಕ್ಕೆ 998 ಕೋಟಿ ರೂ. ಮೀಸಲಿಡಲಾಗಿದೆ. ಹುಬ್ಬಳ್ಳಿ ವಿಜಯಪುರ ಮಧ್ಯೆ ಫೆ.16 ರಿಂದ ಇಂಟರ್ ಸಿಟಿ ರೈಲು ಪ್ರಾರಂಭಿಸಲಾಗುತ್ತಿದೆ. ಹುಬ್ಬಳ್ಳಿ ಧಾರವಾಡ ಬೆಳಗಾವಿ ತ್ರಿವಳಿ ನಗರಗಳು ಕೈಗಾರಿಕಾ ಕಾರಿಡಾರ್ ಆಗಿ ಅಭಿವೃದ್ಧಿ ಹೊಂದಿದರೆ ಈ ಭಾಗದ ಚಿತ್ರಣ ಬದಲಾಗಲಿದೆ. ಜಗತ್ತಿಗೆ ಐಟಿ ಬಿಟಿ ನೀಡಿದ ಕರ್ನಾಟಕದಲ್ಲಿ, ಕೈಗಾರಿಕೆಗಳಿಗೆ ಮಾನವ ಸಂಪನ್ಮೂಲ ನೀಡುವ, ಕೌಶಲ್ಯಾಭಿವೃದ್ಧಿ ಸಂಸ್ಥೆಗಳ ಅವಶ್ಯಕತೆ ಇದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಗದೀಶ ಶೆಟ್ಟರ್ ಮಾತನಾಡಿ, ಸಮಾವೇಶದಲ್ಲಿ ಭಾಗವಹಿಸಿ ಉದ್ಯಮಿಗಳು ಸ್ವಯಂ ಪ್ರೇರಿತರಾಗಿ ಸುಮಾರು 70 ಸಾವಿರ ಕೋಟಿ ರೂ.ಬಂಡವಾಳ ಹೂಡಿಕೆಗೆ ಮುಂದಾಗಿರುವುದು. ಸಮಾವೇಶವನ್ನು ನಿರೀಕ್ಷೆಗೂ ಮೀರಿ ಯಶಸ್ಸುಗೊಳಿಸಿದೆ. ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಹಗಲಿರುಳು ಶ್ರಮವಹಿಸಿ ದುಡಿದಿದ್ದಾರೆ, ಮಾಧ್ಯಮಗಳು ಸಹಕಾರ ಒದಗಿಸಿ ನೈತಿಕ ಪ್ರೋತ್ಸಾಹ ನೀಡಿವೆ ಎಂದು ಸಚಿವ ಶೆಟ್ಟರ್ ಮುಕ್ತ ಕಂಠದಿಂದ ಶ್ಲಾಘನೆ ಮಾಡಿದರು.

ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ ಜೋಶಿ ಮಾತನಾಡಿದರು.

ಕೆ ಎಲ್ ಇ ತಾಂತ್ರಿಕ ವಿವಿ ಉಪಕುಲಪತಿ ಡಾ.ಅಶೋಕ ಶೆಟ್ಟರ್ ಸಮಾವೇಶದ ದಿನದ ಕಲಾಪಗಳ ವರದಿ ಮಂಡಿಸಿದರು. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಗೌರವ ಗುಪ್ತಾ, ಕೈಗಾರಿಕಾ ಅಭಿವೃದ್ಧಿ ಆಯುಕ್ತೆ ಗುಂಜನ್ ಕೃಷ್ಣ ವೇದಿಕೆಯಲ್ಲಿ ಇದ್ದರು. ಜಿಲ್ಲಾಧಿಕಾರಿ ದೀಪಾ ಚೋಳನ್ ವಂದಿಸಿದರು.