ಸರ್ಕಾರಿ ವಾಹನಗಳು, ಅಗತ್ಯ ವಾಹನಗಳಿಗೆ ಮಾತ್ರ ಡಿಸೇಲ್- ಪೆಟ್ರೋಲ್ ಪೂರೈಸಿ : ಕೃಷಿ ಸಚಿವ ಬಿ.ಸಿ.ಪಾಟೀಲ

Share

ಹಾವೇರಿ : ಸರ್ಕಾರಿ ವಾಹನಗಳು ಹಾಗೂ ಅಗತ್ಯ ಸೇವೆಗೆ ಅನುಮತಿ ಪಡೆದ ವಾಹನಗಳನ್ನು ಹೊರತುಪಡಿಸಿ ಇತರ ವಾಹನಗಳಿಗೆ ಡಿಸೇಲ್ ಹಾಗೂ ಪೆಟ್ರೋಲ್ ಪೂರೈಸದಂತೆ ಬಂಕ್‍ಗಳಿಗೆ ಸೂಚನೆ ನೀಡುವುದರೊಂದಿಗೆ ಪ್ರತಿ ಬಂಕ್‍ಗಳಿಗೂ ಓರ್ವ ಪೊಲೀಸರನ್ನು ನಿಯೋಜಿಸಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಸಲಹೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಕೊರೋನಾ (ಕೋವಿಡ್ -19) ವೈರಸ್ ತಡೆ ಕುರಿತಂತೆ ಅಧಿಕಾರಿಗಳ ಸಭೆ ನಡೆಸಿದ ನಡೆಸಿ ಮಾತನಾಡಿದ ಅವರು, ಜಿಲ್ಲೆ ಸೇರಿದಂತೆ ದೇಶದಾದ್ಯಂತ ಲಾಕ್‍ಡೌನ್ ಇದ್ದರೂ ಕೆಲವರು ಉದ್ದೇಶಪೂರ್ವಕವಾಗಿ ಸುತ್ತಾಡುವುದು, ಬೈಕ್‍ನಲ್ಲಿ ತಿರುಗಾಡುವುದು ವರದಿಗಳಾಗಿವೆ. ಇಂತಹವರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕಿದೆ. ಅನಾವಶ್ಯಕವಾಗಿ ಯಾರೂ ಮನೆಯಿಂದ ಹೊರಗೆ ಬರಬೇಡಿ ಎಂದರು.

ದಿನಬಳಕೆ ವಸ್ತುಗಳ ನಿರ್ಭಂಧ ಬೇಡ : ಹಾಲು, ಹಣ್ಣು, ತರಕಾರಿ, ದಿನಬಳಕೆ ವಸ್ತುಗಳಿಗೆ ಯಾವುದೇ ಕೊರತೆಯಾಗುವುದಿಲ್ಲ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಬೇರೆ ಜಿಲ್ಲೆ ಹಾಗೂ ತಾಲೂಕುಗಳಿಂದ ತರಕಾರಿ ಸೇರಿದಂತೆ ಆಹಾರಪದಾರ್ಥಗಳು, ದಿನಸಿಗಳನ್ನು ತರಲು ಅವಕಾಶಕಲ್ಪಿಸಿ ದಿನಬಳಕೆ ವಸ್ತಗಳನ್ನು ಸಾಗಾಣಿಕೆಮಾಡುವ ವಾಹನಗಳನ್ನು ಗುರುತಿಸಿ ಪರವಾನಿಗೆ ನೀಡಿ ಯಾವುದೇ ಅಡೆತಡೆಗಳು ಇರದಂತೆ ಆಹಾರ ಸಾಮಗ್ರಿಗಳನ್ನು ಪೂರೈಸಿ ಎಂದು ಸಲಹೆ ನೀಡಿದರು.