ದಿನದ 24 ತಾಸು ಸಾರ್ವಜನಿಕರ ದೂರು ಸ್ವೀಕರಿ ಸಮಸ್ಯೆಗೆ ಸ್ಪಂದಿಸಲು ಉಚಿತ ಸಹಾಯವಾಣಿ ಸ್ಥಾಪನೆ: ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ

Share

ಹಾವೇರಿ: ಜಿಲ್ಲೆಯಾದ್ಯಂತ ಮಾರಕ ಕೊರೋನಾ ವೈರಸ್ ನಿಯಂತ್ರಿಸುವ ಹಿನ್ನೆಲೆಯಲ್ಲಿ ಕಫ್ರ್ಯೂ ವಿಧಿಸಲಾಗಿದ್ದು, ಈ ಸಂದರ್ಭದಲ್ಲಿ ಸಾರ್ವಜನಿಕರ ಸಮಸ್ಯೆ ಹಾಗೂ ದೂರುಗಳನ್ನು ಸ್ವೀಕರಿಸಿ ಸ್ಪಂದಿಸುವ ನಿಟ್ಟಿನಲ್ಲಿ ದಿನದ 24 ತಾಸು ಕಾರ್ಯನಿರ್ವಹಿಸಲು ಜಿಲ್ಲಾ ಮಟ್ಟದಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದ ಮೂರನೇ ಮಹಡಿಯಲ್ಲಿ ಸ್ಥಾಪಿಸಿರುವ ನಿಯಂತ್ರಣ ಕೊಠಡಿಯಲ್ಲಿ ಟೋಲ್ ಫ್ರೀ ಸಹಾಯವಾಣಿ 08375-249102, 08375-249103, 08375-249104 ಸಂಖ್ಯೆಗಳ ಪೈಕಿ ಯಾವುದಾದರೂ ಸಂಖ್ಯೆಗೆ ಕರೆಮಾಡಿ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ತಿಳಿಸಬಹುದಾಗಿದೆ. ಸಾರ್ವಜನಿಕ ಸಮಸ್ಯೆಗಳನ್ನು ಸ್ವೀಕರಿಸಿ ಪ್ರತಿ ಕರೆಗಳನ್ನು ದಾಖಲಿಸಲಾಗುವುದು. ಸಂಬಂಧಿಸಿದ ಸಮಸ್ಯೆಗಳ ನಿವಾರಣೆಗೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನಿಯಂತ್ರಣ ಕೊಠಡಿಯ ಕಾರ್ಯನಿರ್ವಹಣೆ ಕುರಿತಂತೆ ಮಾಹಿತಿ ನೀಡಿದ ಅಪರ ಜಿಲ್ಲಾಧಿಕಾರಿಗಳು, ಮೂರು ದೂರವಾಣಿ ಸಂಖ್ಯೆಗಳಿಗೂ ಸಾರ್ವಜನಿಕರು ಕರೆಮಾಡಬಹುದು. ಈ ಉದ್ದೇಶಕ್ಕಾಗಿ ಮೂರು ಟೇಬಲ್‍ಗಳ ವ್ಯವಸ್ಥೆಮಾಡಲಾಗಿದೆ. ಕರೆ ಸ್ವೀಕಾರಕ್ಕೆ ಮೂರು ಪಾಳೆಯಲ್ಲಿ ಆಪರೇಟರ್‍ಗಳನ್ನು ನಿಯೋಜಿಸಲಾಗಿದೆ. ಕರೆ ಸ್ವೀಕರಿ ಪುಸ್ತಕದಲ್ಲಿ ದಾಖಲಿಸಲಾಗುವುದು ಮತ್ತು ಅವರ ಸಮಸ್ಯೆಗಳ ಕುರಿತಂತೆ ಸಂಕ್ಷಿಪ್ತವಾಗಿ ರಿಜಿಸ್ಟರ್‍ನಲ್ಲಿ ದಾಖಲಿಸಲಾಗುವುದು. ನಿಯಂತ್ರಣ ಕೊಠಿಯ ಮೇಲುಸ್ತುವಾರಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಪಾಳೆಯದ ಪ್ರಕಾರ ನಿಯೋಜಿಸಲಾಗಿದೆ. ಈ ಕರೆಗಳನ್ನು ಆಯಾ ತಂಡಗಳಿಗೆ ವರ್ಗಾಯಿಸಿ ಸಮಸ್ಯೆಗಳ ಪರಿಹಾರಕ್ಕೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಕಾನೂನು ಸುವ್ಯವಸ್ಥೆಗೆ ಸಂಬಂಧಪಟ್ಟಂತ ದೂರುಗಳು, ಕೊರೋನಾ ಕುರಿತಂತೆ ಮಾಹಿತಿ ವೈದ್ಯಕೀಯ ಸಮಸ್ಯೆಗಳು, ಚಿಕಿತ್ಸೆಗಳು, ಸಾಮಾನ್ಯ ಸಮಸ್ಯೆಗಳಿಗೆ ಸಂಬಂಧಪಟ್ಟಂತೆ ಉತ್ತರಿಸಲು ವೈದ್ಯಾಧಿಕಾರಿಗಳನ್ನು ಪಾಳೆಯಲ್ಲಿ ನಿಯೋಜಿಸಲಾಗಿದೆ. ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆಗಳ ಸಾಗಾಣಿಕೆ ಸೇರಿದಂತೆ ರೈತರ ಸಮಸ್ಯೆಗಳು, ಪ್ರಶ್ನೆಗಳಿಗೆ ಉತ್ತರ ಹಾಗೂ ಸಂಬಂಧಿಸಿದ ಮಾಹಿತಿಯನ್ನು ಒದಗಿಸಲು ಕ್ರಮವಹಿಸಲಾಗಿದೆ. ಕಾನೂನು ಸುವ್ಯವಸ್ಥೆ, ದಿನಬಳಕೆ ವಸ್ತುಗಳ ಪೂರೈಕೆ, ಸಾಗಾಣಿಕೆಗೆ ಪರವಾಣಿಗೆ ಸೇರಿದಂತೆ ಎಲ್ಲ ತರದ ದೂರು ಹಾಗೂ ಸಮಸ್ಯೆಗಳನ್ನು ನಿಯಂತ್ರಣ ಕೊಠಡಿಯಲ್ಲಿ ಸ್ವೀಕರಿಸಿ ದಾಖಲಿಸಲಾಗುವುದು ಎಂದು ತಿಳಿಸಿದರು.

ಇದಲ್ಲದೆ ಹೋಂ ಕ್ವಾರೆಂಟನ್‍ನಲ್ಲಿರುವವರ ಯೋಗಕ್ಷೇಮ, ಅವರ ವೈದ್ಯಕೀಯ ಉಪಚಾರ, ವೈದ್ಯರ ಭೇಟಿ ಕುರಿತಂತೆ ನಿಯಂತ್ರಣ ಕೊಠಡಿಯಿಂದಲೇ ಅವರ ಮನೆಗಳಿಗೆ ಕರೆಮಾಡಿ ಮಾಹಿತಿ ಪಡೆಲಾಗುತ್ತದೆ. ಅವರ ಊಟೋಪಚಾರ, ಆರೋಗ್ಯದ ಬಗ್ಗೆ ನಿಯಮಿತವಾಗಿ ವೈದ್ಯರ ಭೇಟಿ ಕುರಿತಂತೆ ನೇರವಾಗಿ ಮಾತನಾಡಿ ಮಾಹಿತಿ ಪಡೆಯಲು ಆಯುಷ್ ವೈದ್ಯರುಗಳನ್ನು ಪಾಳೆಯದ ಪ್ರಕಾರ ನಿಯೋಜಿಸಲಾಗಿದೆ ಎಂದು ತಿಳಿಸಿದರು.

ಚೆಕ್‍ಪೋಸ್ಟ್‍ಗಳ ಕಾರ್ಯನಿರ್ವಹಣೆ, ಫಿವರ್ ಕ್ಲೀನಿಕ್‍ಗಳಲ್ಲಿ ತಪಾಸಣೆ ಕುರಿತಂತೆ ನಿಯಂತ್ರಣ ಕೊಠಡಿ ಮೂಲಕವೇ ಮಾಹಿತಿ ಪಡೆಯಲಾಗುವುದು. ಸ್ವೀಕರಿಸಿದ ಕರೆ, ಯಾವ ಇಲಾಖೆಗೆ ಸಂಬಂಧಿಸಿದ್ದು, ಆ ಸಮಸ್ಯೆ ನಿವಾರಣೆ ಕುರಿತಂತೆ ಫಾಲೋಪ್ ಸಹ ಇರುತ್ತದೆ. ಇಂದಿನಿಂದ ಕಾರ್ಯ ಆರಂಭಿಸಿದ್ದು ಇನ್ನೆರಡು ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿದೆ. ಶನಿವಾರದಿಂದ ಆರಂಭಗೊಂಡಿದ್ದು ಇಂದು ಮಧ್ಯಾಹ್ನ 12 ಗಂಟೆಯಿಂದಲೇ ಕರೆಗಳ ಸ್ವೀಕಾರ ಆರಂಭವಾಗಿದೆ. ನಿಯಂತ್ರಣ ಕೊಠಡಿಯ ಯೋಜನಾ ನಿರ್ದೇಶಕರು, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ, ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕರ ನೇತೃತ್ವದಲ್ಲಿ ನಿರ್ವಹಣಾ ಸಮಿತಿ ರಚಿಸಲಾಗಿದೆ. ಈ ಸಮಿತಿಯು ಪ್ರತಿ ದಿನದ ದೂರುಗಳನ್ನು ಅಪರ ಜಿಲ್ಲಾಧಿಕಾರಿಗಳಿಗೆ ವರದಿ ಮಾಡಲು ಆದೇಶಿಸಲಾಗಿದೆ ಎಂದು ತಿಳಿಸಿದರು.