ಕೊರೋನಾ ವೈರಸ್ ನಿಯಂತ್ರಣ ಸೇವೆ ನಿರತರಿಗೆ ಕೈಮುಗಿದ: ಕೃಷಿ ಸಚಿವ ಬಿ.ಸಿ.ಪಾಟೀಲ

Share

ಹಾವೇರಿ: ಕೊರೋನಾ ವೈರಸ್ ಹರಡದಂತೆ ಹಗಲಿರುಳು ಶ್ರಮಿಸುತ್ತಿರುವ ವೈದ್ಯರಿಗೆ ಹಾಗೂ ಅರೇವೈದ್ಯಕೀಯ ಸಿಬ್ಬಂದಿಗಳಿಗೆ ಕೈಮುಗಿದ ಕೃಷಿ ಸಚಿವರು ಕೃತಜ್ಞತೆ ಸಲ್ಲಿಸಿದ ಅಪರೂಪದ ಪ್ರಸಂಗ ನಗರದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಜರುಗಿತು.
ಹಾವೇರಿ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಕೊರೋನಾ ವೈರಸ್ ಶಂಕಿತರ ಚಿಕಿತ್ಸೆಗಾಗಿ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಮೂರನೇ ಮಹಡಿಯಲ್ಲಿ ಸಿದ್ಧವಾಗಿರುವ 10 ಹಾಸಿಗೆಯ ವಿಶೇಷ ಐಸೋಲೇಷನ್ ಕೊಠಡಿಗಳಿಗೆ ಭೇಟಿ ನೀಡಿ ಗುರುವಾರ ಪರಿಶೀಲನೆ ನಡೆಸಿದರು.

ಆಸ್ಪತ್ರೆಯಿಂದ ತೆರಳುವ ಮುನ್ನ ಆಸ್ಪತ್ರೆ ಮುಂಬಾಗಿಲಿನಲ್ಲಿ ವೈದ್ಯಕೀಯ ಹಾಗೂ ಅರೇವೈದ್ಯಕೀಯ ಸಿಬ್ಬಂದಿಗಳನ್ನು ಉದ್ದೇಶಿಸಿ ಮಾತನಾಡಿ, ನಿಮ್ಮ ಸೇವೆ ಅನುಪಮವಾದದ್ದು. ಹಗಲಿರುಳು ಕೊರೋನಾ ದಂತಹ ಮಾರಕ ವೈರಸ್ಸಿನ ವಿರುದ್ಧ ಜೀವದ ಹಂಗುತೊರೆದು ಕೆಲಸಮಾಡುತ್ತಿರುವ ನಿಮಗೆ ನನ್ನೊಂದು ನಮಸ್ಕಾರ ಎಂದು ಕೈಮುಗಿದರು. ನಿಮ್ಮೊಂದಿಗೆ ನಾನಿದ್ದೇನೆ, ಸರ್ಕಾರವಿದೆ ಧೈರ್ಯವಾಗಿ ಕೆಲಸಮಾಡಿ. ನಿಮ್ಮ ಎಲ್ಲ ಕೆಲಸಗಳಿಗೆ ನಾವು ಬೆಂಬಲವಾಗಿರುತ್ತೇವೆ. ಸಮಾಜ ಬೆಂಬಲವಾಗಿರುತ್ತದೆ ಎಂದು ವೈದ್ಯ ವೃಂದಕ್ಕೆ ಆತ್ಮವಿಶ್ವಾಸ ತುಂಬಿದರು. ಈ ಸಂದರ್ಭದಲ್ಲಿ ವೈದ್ಯವೃಂದ ಭಾವುಕವಾಗಿ ನೈತಿಕ ಬೆಂಬಲ ತುಂಬಿದ ಕೃಷಿ ಸಚಿವರಿಗೆ ಪ್ರತಿನಮಸ್ಕಾರ ಸಲ್ಲಿಸಿದ ಸನ್ನಿವೇಶದಲ್ಲಿ ಭಾಗೀಯಾದ ಎಲ್ಲರ ಮನದಲ್ಲೂ ಅಭಿಮಾನದ ಭಾವ ವ್ಯಕ್ತವಾಯಿತು.

ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯದ ಸಚಿವನಾಗಿರುವ ನಾನು ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಕೊರೋನಾ ಟಾಸ್ಕಫೋರ್ಸ್ ಕಾರ್ಯಾಚರಣೆ, ವೈದ್ಯಕೀಯ ಸಿಬ್ಬಂದಿಗಳ ಸೇವಾ ನಿರ್ವಹಣೆ ಕುರಿತು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚೆ ನಡೆಸಿದ್ದೆ. ಅದರಂತೆ ಹಾವೇರಿ ಜಿಲ್ಲಾ ಆಸ್ಪತ್ರೆಗೆ ಇಂದು ಭೇಟಿ ನೀಡಿ, ವೈದ್ಯಕೀಯ ಸೌಲಭ್ಯ ಹಾಗೂ ವೈದ್ಯರು, ಸ್ವಚ್ಛತಾ ಸಿಬ್ಬಂದಿ ಕಾರ್ಯನಿರ್ವಹಣೆ ಕುರಿತು ಪರಿಶೀಲನೆ ನಡೆಸಿದೆ. ವೈದ್ಯರು, ದಾದಿಯರು ಹಾಗೂ ಸ್ವಚ್ಛತಾ ಸಿಬ್ಬಂದಿ ಬಹಳ ಉತ್ಸುಕತೆಯಿಂದ ಕೆಲಸಮಾಡುತ್ತಿರುವುದು ಕಂಡು ತಮಗೆ ಸಂತವಾಗಿದೆ. ಕೊರೋನಾ ಸೋಂಕು ಪಸರಿಸದಂತೆ ತಡೆಯುವಲ್ಲಿ ಹಾಗೂ ಆಸ್ಪತ್ರೆಯಲ್ಲಿ ಶಂಕಿತರನ್ನು ನೋಡಿಕೊಳ್ಳುತ್ತಿರುವುದಕ್ಕೆ ಕೋಟಿ ನಮನಗಳನ್ನು ಸಲ್ಲಿಸುತ್ತೇನೆ ಎಂದರು.

ಕೊರೋನಾದಂತಹ ಮಹಾಮಾರಿ ರಾಜ್ಯ ಸೇರಿದಂತೆ ರಾಷ್ಟ್ರವನ್ನೇ ತಲ್ಲಣಗೊಳಿಸಿದೆ. ದೇಶವನ್ನು ಲಾಕ್‍ಡೌನ್‍ಗೊಳಿಸಿರುವುದು ಒಳ್ಳೆಯ ಸಂಗತಿ. ಲಾಕ್‍ಡೌನ್ ಇನ್ನಷ್ಟು ಪರಿಣಾಮಕಾರಿಯಾಗಿಬೇಕು. ಈ ನಿಟ್ಟಿನಲ್ಲಿ ಕ್ಷೇತ್ರ ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಾಗವುದು. ಸರ್ಕಾರ ಮತ್ತು ಜಿಲ್ಲಾಡಳಿತದೊಂದಿಗೆ ಜನರು ಸಹಕರಿಸಬೇಕು. ಸಾಮಾಜಿಕ ಅಂತರಕಾಯ್ದುಕೊಳ್ಳಬೇಕು. ಇದು ಕೇವಲ ಪೊಲೀಸ್ ಹಾಗೂ ಅಧಿಕಾರಿಗಳ ಕೆಲಸ ಎಂದು ಭಾವಿಸಬಾರದು. ಕೊರೋನಾ ನಿರ್ಭಂದಕ್ಕೆ ಮನೆಯಿಂದ ಹೊರಬರದ ರೀತಿಯಲ್ಲಿ ಜನರು ತಮ್ಮನ್ನು ತಾವು ನಿರ್ಭಂದಿಸಬೇಕು. ಯಾರೂ ಎದೆಗುಂದದೆ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ಕರೆ ನೀಡಿದಂತೆ ಎಪ್ರಿಲ್ 15ರವರೆಗೆ ಲಾಕ್‍ಡೌನ್‍ಗೆ ಸಹಕರಿಸಬೇಕು ಎಂದು ಮಾಧ್ಯಮಗಳ ಮೂಲಕ ಜನರಿಗೆ ಮನವಿ ಮಾಡಿಕೊಂಡರು.