ಸಮರೋಪಾದಿಯಲ್ಲಿ ಅತಿವೃಷ್ಟಿ ಪರಿಹಾರ ಕಾರ್ಯಕ್ಕೆ ಅಧಿಕಾರಿಗಳಿಗೆ ಸೂಚನೆ: ಗೃಹ ಸಚಿವ ಬಸವರಾಜ ಬೊಮ್ಮಾಯಿ

Share

ಹಾವೇರಿ: ನೆರೆಯಿಂದ ತತ್ತರಿಸಿದ ಜಿಲ್ಲೆಯಲ್ಲಿ ಮತ್ತೆ ಅತಿವೃಷ್ಟಿಯಿಂದ ತೀವ್ರತರವಾದ ಹಾನಿಯಾಗಿದ್ದು, ಸಮರೋಪಾದಿಯಲ್ಲಿ ಪರಿಹಾರ ಕಾರ್ಯಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿವಿಧ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಅತಿವೃಷ್ಟಿ ಪರಿಸ್ಥಿತಿಯನ್ನು ನಿಭಾಯಿಸಲು ಸೂಚಿಸಲಾಗಿದೆ. ಆಗಸ್ಟ್ ಮಾಹೆಯಲ್ಲಿ ಉಂಟಾದ ನೆರೆ ಪರಿಸ್ಥಿತಿಯಲ್ಲಿ ಸಂತ್ರಸ್ತರಿಗೆ ನೀಡಿದ ಪರಿಹಾರದ ಹಣವನ್ನು ಅತಿವೃಷ್ಠಿ ಸಂತ್ರಸ್ತರಿಗೂ ನೀಡಲು ಸರ್ಕಾರ ತೀರ್ಮಾನ ಕೈಗೊಂಡಿದೆ ಎಂದು ಹೇಳಿದರು.

ಹಿಂದೆಂದೂ ಕಾಣದ ಪ್ರಕೃತಿ ವಿಕೋಪ ಎದುರಾಗಿದೆ. ಇದರಿಂದ ಹಾವೇರಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ. ಆಗಸ್ಟ್ ತಿಂಗಳಲ್ಲಿ ನೆರೆ ಬಂದಾಗ ಘೋಷಣೆ ಮಾಡಿದ್ದ ಪರಿಹಾರದ ಮಾರ್ಗಸೂಚಿಗಳು ಈಗ ಹಾನಿಯಾದವರಿಗೂ ಅನಿಸುತ್ತದೆ ಎಂದು ಸಿಎಂ ಸೂಚನೆ ಕೊಟ್ಟಿದ್ದಾರೆ. ಇತ್ತೀಚೆಗೆ ಬಿದ್ದ ಮಳೆಯಿಂದ ಬೆಳೆಹಾನಿ ಹೆಚ್ಚಾಗಿದೆ. ಶೇಂಗಾ, ಸೋಯಾಬಿನ್, ಭತ್ತ, ಹತ್ತಿ, ಗೋವಿನಜೋಳದ ಫಸಲು ಬರುವ ಆಸೆ ಇತ್ತು, ಅದೂ ಹಾನಿಯಾಗಿದೆ. ಮನೆ ಬಿದ್ದವರ ಸಮೀಕ್ಷೆ ಮಾಡಿ ಮಾಹಿತಿ ಸಂಗ್ರಹಿಸಿ ಅಪ್‍ಲೋಡ್ ಮಾಡಲಾಗುತ್ತಿದೆ. ಬೆಳೆಹಾನಿ ಸಮೀಕ್ಷೆ ನಡೆಸುವಂತೆ ಸೂಚನೆ ನೀಡಲಾಗಿದೆ. ಬೆಂಗಳೂರಿನಲ್ಲಿ ಸೆ. 24ರಂದು ಹಿರಿಯ ಅಧಿಕಾರಿಗಳ ಸಭೆ ನಡೆಸಿ ಜಿಲ್ಲೆಯಲ್ಲಿ ಮನೆ ಬಿದ್ದವರಿಗೆ ಬೇಗ ಹಣ ಬಿಡುಗಡೆ ಮಾಡುವಂತೆ ಸೂಚನೆ ನೀಡಲಾಗಿದ್ದು, ಸಂತ್ರಸ್ತರಿಗೆ ಯಾವುದೇ ತೊಂದರೆಯಾಗದಂತೆ ಪರಿಹಾರ ಕಾರ್ಯ ಮಾಡ್ತಿವಿ. ಯುದ್ಧೋಪಾದಿಯಲ್ಲಿ ಕೆಲಸ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಆಗಸ್ಟ್‍ನಲ್ಲಿ ಆಗಿರುವ ಬೆಳೆಹಾನಿ ಸಮೀಕ್ಷೆಯಾಗಿದೆ. ಈಗ ಆಗಿರುವ ಹಾನಿ ಕುರಿತು ಮತ್ತೆ ಸಮೀಕ್ಷೆ ನಡೆಸಿ ಪರಿಹಾರ ಕೊಡಲಾಗುವುದು. ಕೆಲ ಕೆಳಹಂತದ ಅಧಿಕಾರಿಗಳು ನೆರೆ ಬಂದಾಗ ನಿರ್ಲಕ್ಷ್ಯ ಮಾಡಿರುವುದು ಕಂಡುಬಂದಿದ್ದು, ಅವರ ಮೇಲೆ ಕ್ರಮಕೈಗೊಳ್ಳಲು ಸೂಚನೆ ನೀಡಲಾಗಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಬೇರೆ-ಬೇರೆ ಇಲಾಖೆಗಳು ಸಮನ್ವತೆಯಿಂದ ಕೆಲಸ ಮಾಡುವಂತೆ ಸೂಚಿಸಲಾಗಿದೆ.

ಪೊಲೀಸರಿಗೆ ನೂತನ ವಸತಿ ಸಂಕೀರ್ಣ: ಹಾವೇರಿಯ ಕೆರಿಮತ್ತಿಹಳ್ಳಿ ಪೊಲೀಸ್ ವಸತಿಗೃಹಗಳಿಗೆ ನೀರು ನುಗ್ಗುತ್ತಿದ್ದು, ಅಲ್ಲಿ ಯಾವುದೇ ನಿರ್ಣಯ ಕೈಗೊಂಡರೂ ಉಪಯೋಗ ಇಲ್ಲ, ಹೀಗಾಗಿ ಬೇರೆ ಸ್ಥಳದಲ್ಲಿ ಪೊಲೀಸರಿಗೆ ವಸತಿ ಸಂಕೀರ್ಣ ಕಟ್ಟಿ ವಸತಿ ಸೌಲಭ್ಯ ಕಲ್ಪಿಸಲಾಗುವುದು. ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರಗಳಲ್ಲಿ ಹಳೆಯ ವಸತಿಗೃಹಗಳಿದ್ದು ಅವುಗಳನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಿಸಲು ಸರ್ವೇ ಮಾಡುವಂತೆ ಪೊಲೀಸ್ ಹೌಸಿಂಗ್ ಕಾರ್ಪೋರೇಷನ್‍ನವರಿಗೆ ಸೂಚನೆ ನೀಡಿದ್ದೇನೆ. ಬಜೆಟ್‍ನಲ್ಲಿ ಹೆಚ್ಚಿನ ಅನುದಾನ ಕೊಟ್ಟು 2020-21 ಒಳಗಡೆ ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಕಳಸಾ ಬಂಡೂರಿ: ಮಹದಾಯಿ ಯೋಜನೆಗೆ ಕೇಂದ್ರ ಪರಿಸರ ಇಲಾಖೆಯಿಂದ ಅನುಮತಿ ಸಿಕ್ಕಿರುವುದು ದೊಡ್ಡ ಹೆಜ್ಜೆಯಾಗಿದ್ದು, ಇದರಿಂದ ಆತಂಕ ದೂರವಾಗಿದೆ. ಅರಣ್ಯ ಇಲಾಖೆಯ ಅನುಮತಿ ಪಡೆದುಕೊಳ್ಳಬೇಕಿದ್ದು, ಅದನ್ನು ಆದಷ್ಟು ಬೇಗ ಪಡೆಯಲಾಗುವುದು .ಮಹದಾಯಿ ಯೋಜನೆ 2006ರಿಂದ ಮೂಲಭೂತವಾಗಿ ಪರಿಸರ ಇಲಾಖೆಯ ಅನುಮೋದನೆಗೆ ನಿಂತಿತ್ತು. ಕೇಂದ್ರ ಸರ್ಕಾರ ನಮ್ಮ ಅರ್ಜಿ, ಅಹವಾಲು ಸ್ವೀಕರಿಸಿ ಗೋವಾದ ಅರ್ಜಿ ತಿರಸ್ಕರಿಸಿ ಕುಡಿಯುವ ನೀರಿನ ಅವಶ್ಯಕತೆಗೆ ಕೇಂದ್ರ ಪರಿಸರ ಇಲಾಖೆಗೆ ಅನುಮತಿ ಕೊಟ್ಟಿದೆ. ಇದರಿಂದ ಆತಂಕ ದೂರವಾಗಿದೆ ಎಂದು ತಿಳಿಸಿದರು.