ಮಹಿಳೆಯರಿಗೆ ಕಾನೂನು ಅರಿವು ಹಾಗೂ ನೆರವು ಅವಶ್ಯ: ನ್ಯಾಯಾಧೀಶ ವಾಸುದೇವ ಆರ್.ಗುಡಿ

Share

ಹಾವೇರಿ: ನೊಂದ ಹಾಗೂ ಸಂತ್ರಸ್ತ ಮಹಿಳೆಯರಿಗೆ ಕಾನೂನು ಅರಿವಿನ ಜೊತೆಗೆ ನೆರವು ಅತ್ಯಗತ್ಯ ಎಂದು ಜಿಲ್ಲಾ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ವಾಸುದೇವ್ ಆರ್.ಗುಡಿ ಅವರು ಹೇಳಿದರು.

ಜಿಲ್ಲಾ ನ್ಯಾಯವಾದಿಗಳ ಸಂಘ, ಅಭಿಯೋಜನಾ ಇಲಾಖೆ, ಜಿಲ್ಲಾ ಆಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ನಗರದ ಸೇಂಟ್ ಆನ್ಸ್ ಪ್ರೌಢ ಶಾಲೆಯಲ್ಲಿ ಆಯೋಜಿಸಲಾದ ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಕುರಿತು ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರು ಸಮಾಜದ ಹಾಗೂ ಕುಟುಂಬದ ಎಲ್ಲ ಸ್ತರಗಳಲ್ಲೂ ತನ್ನ ಕಾರ್ಯಕ್ಷಮತೆ ಮತ್ತು ಬದ್ಧತೆ ತೋರುತ್ತಾಳೆ. ಯಾವುದೇ ಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥವಾಗಿ ತಾಯಿ ತಂಗಿ ಮಡದಿಯ ಸ್ಥಾನದಲ್ಲಿ ಸೇವೆ ಸಲ್ಲ್ಲಿಸುತ್ತಾಳೆ. ಅಂತ ಹೆಣ್ಣಿನ ಬಗ್ಗೆ ಇರುವ ಕೀಳರಿಮೆ ಹೋಗಲಾಡಿಸಿ ಅವಳ ರಕ್ಷಣೆಗೆ ಎಲ್ಲರೂ ಕಂಕಣಬದ್ಧರಾಗಿ ನಿಲ್ಲಬೇಕಾಗಿದೆ ಎಂದು ಅವರು ತಿಳಿಸಿದರು.

ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀವಿದ್ಯಾ ಅವರು ಮಾತನಾಡಿ, ನಮ್ಮ ದೇಶದಲ್ಲಿ ಮಹಿಳೆಯರಿಗೆ ಮೊದಲಿನಿಂದಲೂ ಒಳ್ಳೆಯ ಸ್ಥಾನಮಾನಗಳಿವೆ. ಬಾಲ್ಯ ವಿವಾಹ ಪದ್ಧತಿ ಕಾನೂನು ರೀತಿ ಅಪರಾಧವಾಗಿದೆ. ವಿದ್ಯಾರ್ಥಿನಿಯರು ತಮಗಿಷ್ಟವಾದ ವಿಷಯಗಳಲ್ಲಿ ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ತಂದೆತಾಯಿಗೆ ಕೀರ್ತಿ ತರಬೇಕು. ಎಂದು ಸಲಹೆ ನೀಡಿದರು.

ಡಿವೈಎಸ್ ಪಿ ಸಂತೋಷ್ ಕುಮಾರ್ ಅವರು ಮಾತನಾಡಿ, ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದೆ. ಅದನ್ನು ತಡೆಗಟ್ಟುವಲ್ಲಿ ವಿಶೇಷ ಕಾನೂನು ರೂಪಿಸಲಾಗಿದೆ. ಅಪರಿಚಿತ ವ್ಯಕ್ತಿಗಳು ನಿಮ್ಮನ್ನು ಹಿಂಬಾಲಿಸುವುದು ಅಥವಾ ಚುಡಾಯಿಸುವುದು ಕಂಡುಬಂದಲ್ಲಿ ಮೊದಲು ಜೋರಾಗಿ ಕೂಗಬೇಕು. ಇದರಿಂದ ನಿಮ್ಮ ಸ್ವಯಂ ರಕ್ಷಣೆಗೆ ಸಹಕಾರಿಯಾಗಲಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಶಿಕ್ಷಣದ ಮಹತ್ವ ಹಾಗೂ ಹೆಣ್ಣಿನ ಭವಿಷ್ಯದ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎ.ಎಂ ವಡಗೇರಿ ಅವರು, ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಪೋಕ್ಸೊ ಕಾಯ್ದೆ ಕುರಿತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪೆನೆಲ್ ವಕೀಲ ಕೆ.ಎಲ್.ಅಂಗರಗಟ್ಟಿ ಅವರು, ಹಾಗೂ ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಲಿಂಗಪತ್ತೆ ಮತ್ತು ಭ್ರೂಣ ಹತ್ಯೆ ತಡೆ ಕಾಯ್ದೆ ಕುರಿತು ಹಿರಿಯ ಸ್ರೀರೋಗ ತಜ್ಞರು ಹಾಗೂ ನಿವೃತ್ತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಆಯ್.ವಾಯ್.ಮಾಳೋದೆ ಅವರು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಸೇಂಟ್ ಆನ್ಸ್ ಪ್ರೌಢ ಶಾಲೆಯ ಪ್ರಾಂಶುಪಾಲರಾದ ಸಿಸ್ಟರ್ ಶೆರ್ಲಿನ್ ಥಾಮಸ್, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ.ಸಿ.ಪಾವಲಿ, ಜಿಲ್ಲಾ ನ್ಯಾಯವಾದಿಗಳ ಸಂಘದ ಕಾರ್ಯದರ್ಶಿ ಪಿ.ಎಂ.ಬೆನ್ನೂರ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಹೆಚ್.ಪಾಟೀಲ್ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಮಲ್ಲಿಕಾರ್ಜುನ ಮಠದ, ಕ್ಷೇತ್ರ ಸಮನ್ವಯೋಜನಾಧಿಕಾರಿ ಭಗವಂತಗೌಡ್ರ ಮತ್ತು ಶಾಲಾ ಸಿಬ್ಬಂದಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ಟೆರೆನ್ಸ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಶಿಕ್ಷಕಿ ರೇಖಾ ಭೈರಕ್ಕನವರ್ ಸ್ವಾಗತ ಕೋರಿದರು.