ವಿ.ಆರ್.ಡಿ.ಎಲ್. ಪ್ರಯೋಗಾಲಯ ಶೀಘ್ರ ಆರಂಭ: ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ

Share

ಹಾವೇರಿ: ಜಿಲ್ಲಾ ಆಸ್ಪತ್ರೆಯಲ್ಲಿ ನಿರ್ಮಾಣವಾಗುತ್ತಿರುವ ವೈರಾಣು ಸಂಶೋಧನೆ ಮತ್ತು ರೋಗ ನಿರ್ಣಯ ಪ್ರಯೋಗಾಲಯದ (ವಿ.ಆರ್.ಡಿ.ಎಲ್.) ಸ್ಥಾಪನಾ ಕಾರ್ಯ ಅಂತಿಮ ಹಂತದಲ್ಲಿದ್ದು, ಶೀಘ್ರವೇ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾಹಿತಿ ನೀಡಿದ ಅವರು ಜಿಲ್ಲೆಯಲ್ಲಿ ಸ್ಥಾಪನೆಗೊಳ್ಳುತ್ತಿರುವ ವಿ.ಆರ್.ಡಿ.ಎಲ್. ಪ್ರಯೋಗಾಲಯ ಬಹುಉಪಯೋಗಿಯಾಗಿದ್ದು, ಕೋವಿಡ್ ವೈರಾಣು ಪತ್ತೆಪರೀಕ್ಷೆ ಜೊತೆಗೆ ಇತರ ಕಾಯಿಲೆ ಪತ್ತೆಗೂ ಈ ಪ್ರಯೋಗಾಲಯ ಬಳಕೆ ಮಾಡಬಹುದಾಗಿದೆ. ಈ ಪ್ರಯೋಗಾಲಯ ಸ್ಥಾಪನೆಯಿಂದ ಜಿಲ್ಲೆಯ ವೈದ್ಯಕೀಯ ಸೌಲಭ್ಯ ಉನ್ನತೀಗೊಂಡಂತಾಗುವುದು ಎಂದರು.

ವಿ.ಆರ್.ಡಿ.ಎಲ್. ಪ್ರಯೋಗಾಲಯ ಅಂದಾಜು 1.3 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುತ್ತಿದೆ. ಜಿಲ್ಲಾ ಆಸ್ಪತ್ರೆಯಲ್ಲಿ 25 ಚ.ಮೀ. ಜಾಗೆಯಲ್ಲಿ ಸಿವಿಲ್ ಕಾಮಗಾರಿಗಳು ಪೂರ್ಣಗೊಂಡಿವೆ. ಲ್ಯಾಬರೋಟರಿ ಉಪಕರಣಗಳು ಒಂದೆರಡು ದಿನದಲ್ಲಿ ಜಿಲ್ಲೆಗೆ ಆಗಮಿಸಲಿದ್ದು, ಈ ಉಪಕರಣಗಳ ಜೋಡಣೆ ಕಾರ್ಯ ಕೈಗೊಂಡು ಸಾರ್ವಜನಿಕ ಸೇವೆಗೆ ತೆರವುಗೊಳಿಸಲಾಗುವುದು. ಈಗಾಗಲೇ ಲ್ಯಾಬರೋಟರಿಯಲ್ಲಿ ಕಾರ್ಯನಿರ್ವಹಿಸಲು ವೈದ್ಯಕೀಯ ಮತ್ತು ಅರೇವೈದ್ಯಕೀಯ ಲ್ಯಾಬ್ ಟೆಕ್ನಿಷಿಯನ್ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಜಿಲ್ಲಾ ಆಸ್ಪತ್ರೆ ಮೈಕ್ರೋಬೈಲಾಜಿಸಿಷ್ಟ್ ಓರ್ವ ವೈದ್ಯರನ್ನು ಹಾಗೂ ಎರಡು ಜನ ಲ್ಯಾಬ್ ಟೆಕ್ನಿಷಿಯನ್‍ಗಳನ್ನು ಬೆಂಗಳೂರಿನ ಕಿದ್ವಾಯ್ ಮೆಮೋರಿಯಲ್ ಕ್ಯಾನ್ಸರ್ ಆಸ್ಪತ್ರೆಗೆ ಕಳುಹಿಸಿ ತರಬೇತಿ ಕೊಡಿಸಲಾಗಿದೆ ಎಂದು ತಿಳಿಸಿದರು.