ಹಾವೇರಿ ಜಿಲ್ಲೆ ಕೋವಿಡ್ 19 ಸೋಂಕು ಮುಕ್ತ

Share

ಹಾವೇರಿ: ಜಿಲ್ಲೆಯಲ್ಲಿ ಪತ್ತೆಯಾದ 21 ಜನರ ಪೈಕಿ ಈಗಾಗಲೇ 14 ಜನ ಗುಣಮುಖರಾಗಿ ಮನೆಗೆ ತೆರಳಿದ್ದು, ಶುಕ್ರವಾರ ಏಳು ಜನ ಗುಣಮುಖರಾಗಿ ಮನೆಗೆ ತೆರಳುತ್ತಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಯಾವುದೇ ಕೋವಿಡ್ ಸಕ್ರಿಯ ಪ್ರಕರಣಗಳು ಉಳಿದಿಲ್ಲ. ಈ ಕಾರಣದಿಂದ ಜಿಲ್ಲೆ ಮತ್ತೆ ಹಸಿರು ವಲಯದಲ್ಲಿ ಗುರುತಿಸಿಕೊಂಡಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಜುಲೈ ತಿಂಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಳವಾಗಲಿವೆ ಎಂಬ ವರದಿಯ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲಾಡಳಿತದಿಂದ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಜಿಲ್ಲೆಯಲ್ಲಿ ಅಂದಾಜು 3307 ಜನರಿಗೆ ಸೋಂಕು ಕಾಣಬಹುದು ಎಂದು ಅಂದಾಜಿಸಲಾಗಿದೆ. ಇಷ್ಟು ಸಂಖ್ಯೆಯಲ್ಲಿ ಸೋಂಕು ಕಾಣಿಸಿದರೂ ಇದನ್ನು ನಿಭಾಯಿಸಲು ಜಿಲ್ಲಾಡಳಿತ ಸಮರ್ಥವಾಗಿದೆ. ಈಗಾಗಲೇ 20 ಕೇಂದ್ರಿಕೃತ ಐ.ಸಿ.ಯು ವಾರ್ಡ್‍ಗಳಿವೆ, 14 ವೆಂಟಿಲೇಟರ್ ವ್ಯವಸ್ಥೆ ಇದೆ, ಆರು ವೆಂಟಿಲೇಟರ್ ಪೂರೈಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಕೋವಿಡ್ ಪ್ರಕರಣದಲ್ಲಿ ವೆಂಟಿಲೇಟರ್ ಬಳಕೆ ಕೊನೆಯ ಹಂತದ್ದಾಗಿದೆ. ಜಿಲ್ಲೆಯಲ್ಲಿ ಈವರೆಗೆ ವೆಂಟಿಲೇಟರ್ ಬಳಸುವ ಪ್ರಕರಣ ಉದ್ಬವಿಸಿಲ್ಲ. 50 ಬೆಡ್ಡೆಡ್ ಹಾಸಿಗೆ ವ್ಯವಸ್ಥೆ ಇದೆ. ಹಿರೇಕೆರೂರು, ಸವಣೂರು, ಶಿಗ್ಗಾಂವಗಳಲ್ಲಿ 30 ಬೆಡ್ಡೆಡ್ ಆಕ್ಸಿಜನ್ ವ್ಯವಸ್ಥೆ ಇರುವ ವಾರ್ಡ್‍ಗಳು ಸಿದ್ಧವಾಗಿವೆ. ಜಿಲ್ಲೆಯಲ್ಲಿ ಒಟ್ಟಾರೆ 150 ಹಾಸಿಗೆ ಉತ್ತಮ ಸೌಲಭ್ಯವಿದೆ. 250 ರಿಂದ 500 ಕೇಸ್‍ಗಳು ಬಂದರೂ ಚಿಕಿತ್ಸೆ ನೀಡುವ ಸೌಲಭ್ಯವಿದೆ. ಕೋವಿಡ್ ಸಂದರ್ಭದಲ್ಲಿ ಈವರೆಗೆ ಜಿಲ್ಲೆಯ ವೈದ್ಯಕೀಯ ಸೌಕರ್ಯಗಳು ಉತ್ತಮಗೊಂಡಿವೆ. ಈಗಾಗಲೇ ಮನೆ ಮನೆ ಸರ್ವೇ, ಕ್ವಾರಂಟೈನ್ ಅವಧಿಗಳು ಮುಕ್ತಾಯ ಹಂತದಲ್ಲಿವೆ. ಈ ಹಂತದಲ್ಲಿ ಸೋಂಕು ಹೆಚ್ಚಾಗಿ ಕಂಡುಬಂದಿಲ್ಲ. ಈ ಹಿನ್ನೆಲೆಯಲ್ಲಿ ಜುಲೈ ಮಾಹೆಯಲ್ಲಿ ನಮ್ಮಲ್ಲಿ ಸೋಂಕು ಹೆಚ್ಚಳವಾಗುವ ಲಕ್ಷಣಗಳಿಲ್ಲ. ಆದಾಗ್ಯೂ ಜುಲೈ ಮಾಹೆಯಲ್ಲಿ ಪ್ರಕರಣಗಳು ಹೆಚ್ಚಾಗುವ ಸಂಭವವಿದ್ದರೆ ಸರ್ಕಾರದ ಮಾರ್ಗಸೂಚಿಯಂತೆ ಖಾಸಗಿ ಹೋಟೆಲ್, ಸರ್ಕಾರಿ ಸಮುದಾಯ ಭವನವನ್ನು ಕ್ವಾರಂಟೈನ್‍ಗೆ ಗುರುತಿಸಿ ಕಾಯ್ದಿರಿಸಿಕೊಳ್ಳುವ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.