ಲಾಕ್‍ಡೌನ್ ನಂತರ ರೈತರಿಗೆ ನೂತನ ಪ್ಯಾಕೇಜ್ ನಿರೀಕ್ಷೆ: ಸಂಸದ ಶಿವಕುಮಾರ ಉದಾಸಿ

Share

ಹಾವೇರಿ: ಕೋವಿಡ್ ಲಾಕ್‍ಡೌನ್‍ನಿಂದ ತೊಂದರೆಗೊಳಗಾದ ರೈತಾಪಿ ಜನರಿಗೆ ಹೊಸ ಪ್ಯಾಕೇಜ್ ಘೋಷಣೆ ಕುರಿತಂತೆ ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗಮನ ಸೆಳೆಯಲಾಗಿದೆ. ಮೇ 3ರ ನಂತರ ನೂತನ ಪ್ಯಾಕೇಜ್ ಘೋಷಣೆ ನಿರೀಕ್ಷಿಸಲಾಗಿದೆ ಎಂದು ಸಂಸದ ಶಿವಕುಮಾರ ಉದಾಸಿ ಅವರು ತಿಳಿಸಿದರು.

ಹಾವೇರಿ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಶುಕ್ರವಾರ ಮಾತನಾಡಿದ ಅವರು, ಗೋವಿನಜೋಳ ಬೆಂಬಲಬೆಲೆಯಡಿ ಖರೀದಿ ಮಾಡುವ ಕುರಿತಂತೆ ಈಗಾಗಲೇ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವರಿಗೆ ಮನವಿ ಮಾಡಿಕೊಳ್ಳಲಾಗಿದೆ. ಗೋವಿನಜೋಳ ಹೆಚ್ಚು ಬೆಳೆಯುವ ರಾಜ್ಯದ ಹಾವೇರಿ, ದಾವಣಗೆರೆ, ಗದಗ, ಧಾರವಾಡ, ಶಿವಮೊಗ್ಗ ಜಿಲ್ಲೆಗಳ ರೈತರಿಂದ ಬೆಂಬಲಬೆಲೆಯಡಿ ಖರೀದಿಗೆ ವಿಶೇಷ ಪ್ಯಾಕೇಜ್‍ಗೆ ಮನವಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿಯಡಿ ಮೊದಲ ಪ್ಯಾಕೇಜ್‍ನಲ್ಲಿ 71,331 ಮಾನವ ದಿನಗಳನ್ನು ಸೃಜಿಸಲಾಗಿದೆ. ಈಗಾಗಲೇ 53 ಸಾವಿರ ಜನರಿಗೆ ಉದ್ಯೋಗ ನೀಡಿ ಕೂಲಿ ಪಾವತಿಸಲಾಗಿದೆ. ಶೇ.94.94 ರಷ್ಟು ಕಾರ್ಡುದಾರರಿಗೆ ಪಡಿತರ ವಿತರಿಸಲಾಗಿದೆ. 39,878 ಜನರಿಗೆ ಉಜ್ವಲ ಸಿಲೆಂಡರ್ ವಿತರಿಸಲಾಗಿದೆ. ಲಾಕ್‍ಡೌನ್ ಬಿಗಿಗೊಳಿಸಿ ಅನಗತ್ಯವಾಗಿ ಓಡಾಡುವ ವಾಹನಗಳಿಗೆ ಪೊಲೀಸ್ ಲಾಠಿಯ ಬದಲು ದಂಡ ವಿಧಿಸುವ ಕಾರ್ಯಾಚರಣೆ ಕೈಗೊಂಡಿದ್ದರಿಂದ ಜಿಲ್ಲೆಯಲ್ಲಿ ಈವರೆಗೆ 1041 ವಾಹನಗಳನ್ನು ಸೀಜ್ ಮಾಡಲಾಗಿದೆ. 37,96,100 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ವಿವರಿಸಿದರು.

ಲಾಕ್‍ಡೌನ್ ಅವಧಿಯಲ್ಲಿ ಉದ್ಯೋಗ ಅರಸಿ ಬೇರೆ ರಾಜ್ಯ ಮತ್ತು ಜಿಲ್ಲೆಗಳಿಂದ ಹಾವೇರಿ ಜಿಲ್ಲೆಯಲ್ಲಿ ಉಳಿದಿರುವ ಕಾರ್ಮಿಕರು ಹಾಗೂ ಹಾವೇರಿ ಜಿಲ್ಲೆಯಿಂದ ಬೇರೆ ಬೇರೆ ರಾಜ್ಯ ಮತ್ತು ಜಿಲ್ಲೆಗಳಲ್ಲಿ ಉಳಿದುಕೊಂಡಿರುವ ಕಾರ್ಮಿಕರು ತಮ್ಮ ತಮ್ಮ ಸ್ವಂತ ಗ್ರಾಮಕ್ಕೆ ತೆರಳುವ ಅಪೇಕ್ಷೆ ಹೊಂದಿದ್ದಾರೆ. ಮೇ 3ರ ನಂತರ ಸಾಮಾಜಿಕ ಅಂತರ ಕಾಯ್ದುಕೊಂಡು ಅವರವರ ಗ್ರಾಮಗಳಿಗೆ ಕಳುಹಿಸುವ ಕುರಿತಂತೆ ಚರ್ಚಿಸಲಾಗುತ್ತದೆ. ರೈಲು, ಬಸ್ಸುಗಳಲ್ಲಿ ಸಾಮಾಜಿಕ ಅಂತರದಲ್ಲಿ ಆಸನ ವ್ಯವಸ್ಥೆಮಾಡಿ ಅವರವರ ಊರಿಗೆ ಕಳುಹಿಸುವುದು, ತಮ್ಮ ಗ್ರಾಮ ತಲುಪಿದ ಮೇಲೆ ನಿಯಮಾನುಸಾರ ಗೃಹಪ್ರತ್ಯೇಕತೆಯಲ್ಲಿ ಇರಿಸುವ ಕುರಿತಂತೆ ತೀರ್ಮಾನಿಸಲಾಗುವುದು ಎಂದು ಹೇಳಿದರು.

ರೈತರ ಸಾಲದ ಕಂತುಗಳನ್ನು ಮೂರು ತಿಂಗಳು ಮುಂದೂಡುವ ಕುರಿತಂತೆ ಈಗಾಗಲೇ ಚಚಿಸಲಾಗಿದೆ. ಲಾಕ್‍ಡೌನ್‍ನಿಂದ ಮೆಣಸಿನಕಾಯಿ ವ್ಯಾಪಾರಿಗಳು, ದಲ್ಲಾಳಿಗಳಿಗೆ ಉಂಟಾಗಿರುವ ತೊಂದರೆ ಕುರಿತಂತೆ ಈಗಾಗಲೇ ಚರ್ಚಿಸಲಾಗಿದೆ. ಬ್ಯಾಂಕ್‍ಗಳೊಂದಿಗೆ ಚರ್ಚಿಸಿ ಓಓಡಿ ನೀಡುವಂತೆ ಸಲಹೆ ಮಾಡಲಾಗಿದೆ. ಬ್ಯಾಡಗಿ ಮಾರುಕಟ್ಟೆಗೆ ಹೊರರಾಜ್ಯಗಳಿಂದ ಬರುವ ಚಾಲಕರು, ಹಮಾಲರಿಗೆ ವೈದ್ಯಕೀಯ ತಪಾಸಣೆಯನ್ನು ತೀವ್ರಗೊಳಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಹಾವೇರಿ ಜಿಲ್ಲೆಯಲ್ಲಿ ಈವರೆಗೆ ಕರೋನಾ ಸೋಂಕು ಹರಡಿರುವುದಿಲ್ಲ. ಮಾರ್ಗಸೂಚಿಯಂತೆ ಹಾವೇರಿ ಜಿಲ್ಲೆ ಗ್ರೀನ್ ವಲಯದಲ್ಲಿದೆ. ಇದಕ್ಕೆ ಕಾರಣರಾದ ಜಿಲ್ಲಾಡಳಿತದ ಎಲ್ಲ ಅಧಿಕಾರಿಗಳು, ಪೊಲೀಸರು, ವೈದ್ಯರು, ದಾದಿಯರು, ಅಂಗನವಾಡಿ, ಆಶಾ ಕಾರ್ಯಕರ್ತರು, ಎಲ್ಲ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಜಿಲ್ಲೆಯ ಜನರಿಗೆ ಅಭಿನಂದಿಸುತ್ತೇನೆ ಎಂದು ಹೇಳಿದರು.

ಪಿಎಂ ಕೇರ್ಸ್ ನೆರವು ನೀಡಿ: ಕೋವಿಡ್ ವಿರುದ್ಧ ಹೋರಾಡಲು ಸಾಮೂಹಿಕವಾಗಿ ಕೈಜೋಡಿಸಬೇಕು, ನೆರವು ನೀಡಬೇಕು. ಪ್ರತಿಯೊಬ್ಬರು ಕನಿಷ್ಠ 10 ರೂ.ಗಳನ್ನು ನೆರವು ನೀಡಬೇಕು. ಈ ನೆರವಿನ ಹಣವನ್ನು ಕೋವಿಡ್ ಹೋರಾಟದ ಔಷಧಿ ಹಾಗೂ ಸಾರ್ವಜನಿಕ ತುರ್ತು ಆರೋಗ್ಯ ಸೇವೆಗೆ ಬಳಸಲಾಗುವುದು. ಈವರೆಗೆ 6500 ಕೋಟಿ ರೂ. ದೇಶದಲ್ಲಿ ಸಂಗ್ರಹವಾಗಿದೆ ಎಂದು ತಿಳಿಸಿದರು.

ಆರೋಗ್ಯ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ: ಕೋವಿಡ್ ಸುರಕ್ಷತೆಗಾಗಿ ಎಲ್ಲರೂ ಆರೋಗ್ಯ ಸೇತು ಆ್ಯಪ್‍ನ್ನು ಡೌನ್‍ಲೋಡ್ ಮಾಡಿಕೊಳ್ಳಬೇಕು. ಇದರಿಂದ ತಾವು ಕೋವಿಡ್‍ನಿಂದ ತಾವು ಎಷ್ಟು ಸುರಕ್ಷಿತ ಹಾಗೂ ಮಾರ್ಗಸೂಚಿಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮನವಿ ಮಾಡಿಕೊಂಡರು.

ಮಾಧ್ಯಮಗೋಷ್ಠಿಯಲ್ಲಿ ಶಾಸಕರಾದ ನೆಹರು ಓಲೇಕಾರ, ವಿರುಪಾಕ್ಷಪ್ಪ ಬಳ್ಳಾರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಜಿಲ್ಲಾ ಪಂಚಾಯತ್ ಸದಸ್ಯ ಸಿದ್ಧರಾಜ ಕಲಕೋಟಿ ಇದ್ದರು.