ನೊಂದಾಯಿತ ಕಟ್ಟಡ ಕಾರ್ಮಿಕರ ಖಾತೆಗೆ ತ್ವರಿತವಾಗಿ ಹಣ ಜಮಾಕ್ಕೆ ಉಸ್ತುವಾರಿ ಕಾರ್ಯದರ್ಶಿ ಸೂಚನೆ

Share

ಹಾವೇರಿ: ಕೋವಿಡ್ ಲಾಕ್‍ಡೌನ್ ಹಿನ್ನೆಲೆಯಲ್ಲಿ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಲು ಸರ್ಕಾರ ಘೋಷಿಸಿರುವ ಎರಡು ಸಾವಿರ ರೂ. ನೆರವಿನ ಹಣವನ್ನು ತ್ವರಿತವಾಗಿ ನೊಂದಾಯಿತ ಅರ್ಹ ಎಲ್ಲ ಕಾರ್ಮಿಕರ ಖಾತೆಗೆ ಜಮಾ ಮಾಡಲು ಜಿಲ್ಲಾ ಕಾರ್ಮಿಕ ಅಧಿಕಾರಿಗೆ ಕರ್ನಾಟಕ ಸರ್ಕಾರದ ಸಾರ್ವಜನಿಕ ಜಮೀನುಗಳ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಜೈನ್ ಅವರು ಸೂಚನೆ ನೀಡಿದರು.

ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳು, ಹಾಗೂ ಲಾಕ್‍ಡೌನ್‍ನಿಂದ ತೊಂದರೆಗೊಳಗಾದವರಿಗೆ ಪರಿಹಾರ ಕಾರ್ಯಗಳ ಕುರಿತಂತೆ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ನೊಂದಾಯಿತ ಅರ್ಹ ಕಾರ್ಮಿಕರಿಗೆ ಎರಡು ಸಾವಿರ ರೂ. ನೆರವಿನ ಹಣ ಸಂಕಷ್ಟ ಕಾಲದಲ್ಲಿ ಜಮಾವಾಗಬೇಕು. ವಿಳಂಬವಾಗಬಾರದು. ಈ ವಿಷಯಕ್ಕೆ ಸಂಬಂಧಿಸಿದಂತೆ ಕಾರ್ಮಿಕ ಆಯುಕ್ತರೊಂದಿಗೆ ಸಮನ್ವಯ ಸಾಧಿಸಿ ಖಾತೆಗೆ ಹಣ ಜಮಾಮಾಡಿಸಿ ಎಂದು ಸಲಹೆ ನೀಡಿದರು.

ಜಿಲ್ಲೆಯಲ್ಲಿ ನೊಂದಾಯಿತ 38 ಸಾವಿರ ಕಾರ್ಮಿಕರ ಪೈಕಿ ನಾಲ್ಕು ಸಾವಿರ ಕಾರ್ಮಿಕರಿಗೆ ಈಗಾಗಲೇ ಹಣ ಜಮೆಯಾಗಿದೆ. ಜಿಲ್ಲಾ ಕಚೇರಿಯಿಂದ ಎಲ್ಲರ ಮಾಹಿತಿಯನ್ನು ಕೇಂದ್ರ ಕಚೇರಿಗೆ ಒದಗಿಸಲಾಗಿದೆ. ಬಾಕಿ 34 ಸಾವಿರ ಫಲಾನುಭವಿಗಳ ಖಾತೆಗೆ ನೆರವಿನ ಹಣ ಜಮೆ ಮಾಡಲು ಖಾತೆದಾರರ ಆಧಾರ್ ಜೋಡಣೆ ಹಾಗೂ ಪರಿಶೀಲನೆ ಕಾರ್ಯ ನಡೆಯುತ್ತಿದೆ. ಪರಿಶೀಲನೆ ಕಾರ್ಯ ಪೂರ್ಣಗೊಂಡ ನಂತರ ಕೇಂದ್ರ ಕಚೇರಿಯಿಂದಲೇ ನೇರವಾಗಿ ಕಾರ್ಮಿಕರ ಖಾತೆಗೆ ಹಣ ಜಮೆಯಾಗಲಿದೆ ಎಂದು ಕಾರ್ಮಿಕ ಅಧಿಕಾರಿ ಲಲಿತಾ ಸಾತೇನಹಳ್ಳಿ ಅವರು ಮಾಹಿತಿ ನೀಡಿದರು.

ಕೃಷಿ ಚಟುವಟಿಕೆಗಳು ಆರಂಭಗೊಂಡಿವೆ. ಈ ಚಟುವಟಿಕೆಗಳಿಗೆ ಬೇಕಾದ ರಸಗೊಬ್ಬರ, ಬಿತ್ತನೆ ಬೀಜ, ಕೃಷಿ ಉಪಕರಣಗಳ ವ್ಯವಸ್ಥೆ, ಕೃಷಿ ಚಟುವಟಿಕೆಗೆ ಅಗತ್ಯವಾದ ಸೇವೆಗಳಿಗೆ ತೊಂದರೆಯಾಗದಂತೆ ಕ್ರಮವಹಿಸಬೇಕು. ಕಳಪೆ ಬಿತ್ತನೆ ಬೀಜ ದಾಸ್ತಾನು ಮಾಡಿದ ಕೋಲ್ಡ್ ಸ್ಟೋರೇಜ್ ಸೀಜ್ ಮಾಡಲಾಗಿದೆ. ಈ ಬೀಜಗಳನ್ನು ಬೇರೆಡೆ ಸ್ಥಳಾಂತರಿಸಿ ಕೋಲ್ಡ್ ಸ್ಟೋರೆಜ್‍ಗಳನ್ನು ಖಾಲಿಮಾಡಿಕೊಡಲು ಕೃಷಿ ಜಂಟಿ ನಿರ್ದೇಶಕರಿಗೆ ಸೂಚನೆ ನೀಡಿದರು.

ಮೆಕ್ಕೆಜೋಳ, ಹತ್ತಿ, ಶೇಂಗಾ ಸೇರಿದಂತೆ ರೈತರ ಉತ್ಪನ್ನಗಳ ಮಾರಾಟಕ್ಕೆ ಯಾವುದೇ ತೊಂದರೆಯಾಗಬಾರದು. ಜಿಲ್ಲೆಯ ಎಲ್ಲ ಕೃಷಿ ಉತ್ಪನ್ನ ಮಾರುಕಟ್ಟೆ ನಿರಂತರ ಚಟುವಟಿಕೆಯಲ್ಲಿರಬೇಕು. ರೈತರ ನೆರವಿಗೆ ತೆರೆದಿರಬೇಕು ಎಂದು ಸೂಚನೆ ನೀಡಿದರು.

ಲಾಕ್‍ಡೌನ್ ಅವಧಿಯಲ್ಲಿ ಜನರಿಗೆ ಬೇಕಾದ ದಿನಸಿ, ತರಕಾರಿ ಅಗತ್ಯ ವಸ್ತುಗಳ ಪೂರೈಕೆಗೆ ಕೈಗೊಂಡಿರುವ ಕ್ರಮಗಳ ಕುರಿತಂತೆ ಪರಿಶೀಲನೆ ನಡೆಸಿದರು. ಕ್ವಾರೆಂಟೈನ್ ಮಾಹಿತಿ, ಮನೆ ಮನೆ ಆರೋಗ್ಯ ತಪಾಸಣೆ, ತುರ್ತು ಹೆಲ್ತ್‍ಚೆಕಪ್ ಮಾಹಿತಿ, ಜಿಲ್ಲೆಯಿಂದ ಲ್ಯಾಬ್‍ಗೆ ಕಳುಹಿಸಲಾದ ರಕ್ತ ಮತ್ತು ಗಂಟಲು ದ್ರವ್ಯದ ಮಾದರಿಗಳ ಸಂಗ್ರಹ ಹಾಗೂ ಲ್ಯಾಬ್‍ಗೆ ಕಳುಹಿಸಲು ಕೈಗೊಂಡಿರುವ ಕ್ರಮಗಳ ಕುರಿತಂತೆ ಮಾಹಿತಿ ಪಡೆದುಕೊಂಡರು. ತ್ವರಿತವಾಗಿ ಸ್ಕ್ರೀನಿಂಗ್ ಕಾರ್ಯವನ್ನು ಪೂರ್ಣಗೊಳಿಸಲು ಸಲಹೆ ನೀಡಿದರು.

ಚೆಕ್‍ಪೋಸ್ಟ್ ಚಟುವಟಿಕೆ ಕುರಿತಂತೆ ಮಾಹಿತಿ ಪಡೆದ ಅವರು, ಪ್ರತಿ ವಾಹನಗಳ ಮೇಲೆ ತೀವ್ರ ನಿಗಾವಹಿಸಬೇಕು. ಎಲ್ಲ ವಾಹನಗಳನ್ನು ತಪಾಸಣೆ ಮಾಡಬೇಕು. ಗಡಿ ಭಾಗದಿಂದ ಸುಲಭವಾಗಿ ಒಳಗೆ ಪ್ರವೇಶಮಾಡಬಾರದು. ಈ ಕುರಿತಂತೆ ಕ್ರಮ ವಹಿಸಲು ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ್, ಸಿಇಒ ರಮೇಶ ದೇಸಾಯಿ, ಹೆಚ್ಚುವರಿ ಜಿಲ್ಲಾಧಿಕಾರಿ ಯೋಗೇಶ್ವರ ಸೇರಿದಂತೆ ಇತರರು ಇದ್ದರು.