ಯುಟಿಪಿ ಕಾಮಗಾರಿ ಅವ್ಯವಹಾರ ತನಿಖೆಗೆ ಸರ್ಕಾರಕ್ಕೆ ಶಿಫಾರಸ್ಸು: ಜಿ.ಪಂ.ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ

Share

ಹಾವೇರಿ: ತುಂಗಾ ಮೇಲ್ದಂಡೆ ಯೋಜನೆಯಡಿ ಚಿಕ್ಕೇರೂರು ಭಾಗದಲ್ಲಿ ಕಿರುಗಾಲುವೆ ನಿರ್ಮಾಣ ಮಾಡದೆ ಸಾವಿರಾರು ಎಕರೆ ನೀರು ಹರಿಸಲಾಗದೆ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಸದರಿ ಯೋಜನೆಗೆ ಪುನಾರ್ವತಿತವಾಗಿ ಅನುದಾನ ಮಂಜೂರು ಮಾಡಿಕೊಂಡು ಇಲಾಖೆಯ ಅಭಿಯಂತರರು ಅವ್ಯವಹಾರ ನಡೆಸಿದ್ದಾರೆ. ಎಸಿಬಿ ಸೇರಿದಂತೆ ಸೂಕ್ತ ಏಜೆನ್ಸಿಯೊಂದನ್ನು ನೇಮಕಮಾಡಿ ತನಿಖೆ ನಡೆಸಲು ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ ಸಭೆಯಲ್ಲಿ ತಿಳಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಜರುಗಿದ ಮಾಸಿಕ ಕೆ.ಡಿ.ಪಿ.ಸಭೆಯಲ್ಲಿ ಪ್ರವಾಹ ಪರಿಹಾರ ಕಾರ್ಯಕ್ರಮಗಳು ವಿವಿಧ ಇಲಾಖೆಯಡಿ ಕೈಗೊಂಡ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.

ಯುಟಿಪಿ ಕಾಮಗಾರಿಗಳ ವಿವರವನ್ನು ಅಭಿಯಂತರರಿಂದ ಪಡೆದ ಅವರು ತ್ವರಿತವಾಗಿ ಕಿರುಗಾಲುವೆಗಳನ್ನು ನಿರ್ಮಾಣ ಮಾಡಿ ರೈತರ ಹೊಲಗಳಿಗೆ ನೀರು ಹರಿಸುವಂತೆ ತಾಕೀತು ಮಾಡಿದರು.

ಅತಿವೃಷ್ಟಿ ಹಾಗೂ ನೆರೆ ಪರಿಹಾರ ಕಾಮಗಾರಿಗಳಿಗೆ ಸರ್ಕಾರದಿಂದ ಈವರೆಗೆ ಅನುದಾನ ಬಿಡುಗಡೆಯಾಗಿರುವುದಿಲ್ಲ. ತಕ್ಷಣವೇ ಅನುದಾನ ಒದಗಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು

ಮಳೆಯಿಂದ ಹಾನಿಗೊಳಗಾದ 600ಕ್ಕೂ ಅಧಿಕ ಶಾಲೆಗಳ ಕೊಠಡಿಗೆ ತೀವ್ರತರ ಹಾನಿಗೊಳಗಾಗಿವೆ. ತರಗತಿಗಳು ನಡೆಸಲು ಕಷ್ಟವಾಗಿವೆ. ತಕ್ಷಣವೇ ದುರಸ್ತಿಗೆ ಸರ್ಕಾರ ಹಣ ಒದಗಿಸಬೇಕು. ಬೆಳೆ ಪರಿಹಾರ, ಭೂಮಿಹಾನಿ ಪರಿಹಾರ, ತೋಟಗಾರಿಕೆ ಬೆಳೆಗಳ ಪರಿಹಾರ, ರಸ್ತೆ, ಸೇತುವೆ ಸೇರಿದಂತೆ ಮೂಲ ಸೌಕರ್ಯಗಳಿಗೆ ಹಾನಿಯಾಗಿದೆ. ಸಾವಿರಾರು ಮನೆಗಳು ಕುಸಿದು ಹೋಗಿವೆ. ಆದರೆ ಸರ್ಕಾರದಿಂದ ಈವರೆಗೆ ಅನುದಾನ ಬಿಡುಗಡೆಯಾಗಿರುವುದಿಲ್ಲ. ತ್ವರಿತವಾಗಿ ಅನುದಾನ ಬಿಡುಗಡೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಈ ದಿನದ ಕೆ.ಡಿ.ಪಿ. ಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಈ ಕುರಿತಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ತಿಳಿಸಿದರು.

ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ ಒಳಗೊಂಡಂತೆ ವಿವಿಧ ಇಲಾಖೆಗಳಲ್ಲಿ ಗಣಕಯಂತ್ರ ಚಾಲಕರು, ತಾಂತ್ರಿಕ ಸಿಬ್ಬಂದಿ ಹಾಗೂ ಡಿ ಗ್ರೂಪ್ ನೌಕರರ ಸೇವೆಯನ್ನು ಹೊರಗುತ್ತಿಗೆ ಆಧಾರದ ಮೇಲೆ ಪಡೆಯಲು ಅವಕಾಶವಿದೆ. ಉದ್ಯೋಗ ಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕಾಮಗಾರಿ ಚುರುಕುಗೊಳಿಸಲು ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಗಳ ನೇಮಕಾತಿ ಮಾಡಿಕೊಳ್ಳುವಂತೆ ಸೂಚನೆ ನೀಡಿದರು.

ಆರೋಗ್ಯ ಇಲಾಖೆಯಲ್ಲಿ ಹೊರಗುತ್ತಿಗೆಯಲ್ಲಿ ನೇಮಕಾತಿಕೊಳ್ಳುವಾಗ ಜಿಲ್ಲೆಯ ಅಭ್ಯರ್ಥಿಗಳನ್ನಷ್ಟೇ ಆಯ್ಕೆಮಾಡಬೇಕು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ನೇಮಕ ಮಾಡುವಾಗ ಸ್ಥಳೀಯ ವಾರ್ಡಿನ ಅಭ್ಯರ್ಥಿಗಳನ್ನೇ ಪರಿಗಣಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸರ್ಕಾರಿ ವೈದ್ಯರ ಖಾಸಗಿ ಸೇವೆಗೆ ಕಡಿವಾಣ ಹಾಕಬೇಕು. ಖಾಸಗಿ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ವೈದ್ಯರ ವಿರುದ್ಧ ಕ್ರಮಕೈಗೊಳ್ಳಲು ಸರ್ಕಾರ ಪ್ರಸ್ತಾವನೆ ಸಲ್ಲಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚನೆ ನೀಡಿದರು ಹಾಗೂ ತುರ್ತು ಚಿಕಿತ್ಸೆಗಾಗಿ ಡಾವಣಗೆರೆ ಆಸ್ಪತ್ರೆಗೆ ಕರೆದೊಯ್ಯುವ ರೋಗಿಗಳಿಗೆ ಅಂಬ್ಯುಲೆನ್ಸ್ ಸೇವೆಯನ್ನು ಒದಗಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚನೆ ನೀಡಿದರು.

ಸಮಾಜ ಕಲ್ಯಾಣ, ಹಿಂದುಳಿದ, ಅಲ್ಪಸಂಖ್ಯಾತ ಇಲಾಖೆಯ ಮೊರಾರ್ಜಿ ಶಾಲೆ ಸೇರಿದಂತೆ ವಿವಿಧ ಹಾಸ್ಟೇಲ್‍ಗಳಲ್ಲಿ ಖಾಲಿ ಉಳಿದಿರುವ ಸೀಟುಗಳಿಗೆ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಿಸಲು ವ್ಯವಸ್ಥೆ ಮಾಡಬೇಕು. ಗ್ರಂಥಾಲಯ ಇಲ್ಲದ ಹಾಸ್ಟೇಲ್‍ಗಳ ಮೇಲ್ಛಾವಣಿಗಳಲ್ಲಿ ಪ್ರತ್ಯೇಕ ಕೊಠಡಿಗಳನ್ನು ನಿರ್ಮಿಸಿ ವಾಚನಾಲಯ ಸೌಕರ್ಯಗಳನ್ನು ವಿದ್ಯಾರ್ಥಿಗಳಿಗೆ ಕಲ್ಪಿಸಲು ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿಶ್ವಕರ್ಮ, ದೇವರಾಜ ಅರಸು, ಹಿಂದುಳಿದ ವರ್ಗ ಸೇರಿದಂತೆ ವಿವಿಧ ಅಭಿವೃದ್ಧಿ ನಿಗಮಗಳಡಿ ಫಲಾನುಭವಿಗಳನ್ನು ತ್ವರಿತವಾಗಿ ಆಯ್ಕೆ ಮಾಡಿ ಸೌಲಭ್ಯಗಳನ್ನು ಒದಗಿಸಬೇಕು. ಶಾಸಕರಿಲ್ಲದ ಕ್ಷೇತ್ರಗಳಲ್ಲಿ ಆಯ್ಕೆ ಪ್ರಕ್ರಿಯೆ ಕುರಿತಂತೆ ಸರ್ಕಾರದಿಂದ ತ್ವರಿತವಾಗಿ ಮಾರ್ಗಸೂಚಿ ಪಡೆದು ಫಲಾನುಭವಿಗಳ ಆಯ್ಕೆಗೆ ಕ್ರಮವಹಿಸುವಂತೆ ವಿವಿಧ ನಿಗಮಳ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತೋಟಗಾರಿಕೆ ಇಲಾಖೆಯಿಂದ ಪಾಲಿಥಿನ್ ಹೌಸ್ ಯೋಜನೆಯಡಿ ಭಾರಿ ಅವ್ಯವಹಾರವಾಗಿದೆ. ಒಂದೇ ಸರ್ವೇ ನಂಬರಿನ ಒಂದೇ ಕುಟುಂಬದ ಐದರಿಂದ ಹತ್ತು ಜನರಿಗೆ ಈ ಯೋಜನೆಯಡಿ ಸೌಲಭ್ಯ ನೀಡಲಾಗಿದೆ. ಇದರಿಂದ ಅನೇಕ ರೈತರು ವಂಚಿತರಾಗಿದ್ದಾರೆ. ಈ ಕುರಿತಂತೆ ತನಿಖೆ ನಡೆಸಿ ವರದಿ ಸಲ್ಲಿಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲು ತೋಟಗಾರಿಕೆ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಜಿ.ಪಂ.ಉಪಾಧ್ಯಕ್ಷೆ ಗಿರಿಜವ್ವ ಬ್ಯಾಲದಹಳ್ಳಿ, ಜಿ.ಪಂ.ಯೋಜನಾಧಿಕಾರಿ ಮಣ್ಣವಡ್ಡರ, ಜಿ.ಪಂ.ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ದುಗ್ಗತ್ತಿ, ನೀಲವ್ವ ನಾಗಪ್ಪ ಚವ್ಹಾಣ, ಮಾರುತಿ ರಾಮಪ್ಪ ರಾಠೋಡ ಉಪಸ್ಥಿತರಿದ್ದರು.