ಅರ್ಹ ಪದವೀಧರರು ಮತದಾರರ ಪಟ್ಟಿಗೆ ಹೆಸರು ನೋಂದಣಿಗೆ ಸೂಚನೆ

Share

ಹಾವೇರಿ: ಕರ್ನಾಟಕ ಪಶ್ಚಿಮ ಪದವೀಧರ ಮತ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ-2020ರಲ್ಲಿ ಚುನಾವಣೆ ಜರುಗಲಿದೆ. ಈ ಮತ ಕ್ಷೇತ್ರವು ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡಿರುತ್ತದೆ. ಸದರಿ ಚುನಾವಣೆಗಾಗಿ ಮತದಾರರ ಪಟ್ಟಿಯನ್ನು ಸಿದ್ದಪಡಿಸಲಾಗುತ್ತಿದ್ದು ಈ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಣಿ ಮಾಡ ಬಯಸುವ ಅರ್ಹ ಪದವೀಧರರು ಗೊತ್ತುಪಡಿಸಿದ ನಮೂನೆ-18ರಲ್ಲಿ ತಮ್ಮ ಹಕ್ಕುಗಳನ್ನು ಪೂರಕ ದಾಖಲೆಗಳೊಂದಿಗೆ ದಿನಾಂಕ 06-11-2019 ರೊಳಗಾಗಿ ಸಂಬಂಧಪಟ್ಟ ತಹಶೀಲ್ದಾರರಿಗೆ ಅಥವಾ ನಗರಸಭೆಗಳ ಆಯುಕ್ತರಿಗೆ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದ್ದಾರೆ.
ದಿನಾಂಕ:01-11-2019 ಅರ್ಹತಾ ದಿನಾಂಕವಾಗಿದ್ದು, ಸದರಿ ದಿನಾಂಕಕ್ಕಿಂತ ಮೂರು ವರ್ಷಗಳ ಹಿಂದೆ ಪದವೀಧರಾಗಿದ್ದ ಬಗ್ಗೆ ದಾಖಲೆಗಳನ್ನು ಹೊಂದಿರುವವರು ಈ ಮತ ಕ್ಷೇತ್ರದ ಅರ್ಹ ಮತದಾರರು ಎಂದು ಪರಿಗಣಿಸಲ್ಪಡುತ್ತಾರೆ

ಕಳೆದ ಬಾರಿಯ ಚುನಾವಣೆಯಲ್ಲಿ ಮತದಾರರಾಗಿದ್ದರು ಸಹಿತ ಈ ಬಾರಿ ಹೊಸದಾಗಿ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸತಕ್ಕದ್ದು. ನಿಗದಿತ ದಿನಾಂಕದೊಳಗಾಗಿ ಹೆಸರು ನೋಂದಾಯಿಸಲು ತಪ್ಪಿದಲ್ಲಿ ನಂತರ ಬರುವ ಅರ್ಜಿಗಳನ್ನು ಸೇರ್ಪಡೆಗೆ ಪರಿಗಣಿಸಲಾಗುವುದಿಲ್ಲ.

ವಿಶ್ವವಿದ್ಯಾಲಯ ಅಥವಾ ಸಂಬಂಧಪಟ್ಟ ಸಂಸ್ಥೆಯಿಂದ ನೀಡಲಾದ ಪದವಿ ಪ್ರಮಾಣಪತ್ರದ ಧೃಢಿಕರಣಗೊಂಡ ನಕಲು ಪ್ರತಿಗಳು ಅಥವಾ ವಿಶ್ವವಿದ್ಯಾಲಯವು ನೋಂದಾಯಿತ ಪದವೀಧರನೆಂಬುದಾಗಿ ನೀಡಿದ ನೋಂದಣಿ ಕಾರ್ಡಿನ ಧೃಢೀಕೃತ ಪ್ರತಿ, ನೋಂದಾಯಿತ ಪದವೀಧರರ ಪಟ್ಟಿ, ವಕೀಲರ ಪಟ್ಟಿ, ವೈದ್ಯಕೀಯ ವೃತ್ತಿ ನಿರತರ ರಿಜಿಸ್ಟರ್, ಚಾರ್ಟರ್ಡ ಅಕೌಂಟೆಂಟ್‍ರವರುಗಳ ರಿಜಿಸ್ಟರ್, ಇಂಜನೀಯರುಗಳ ಸಂಸ್ಥೆಯಿಂದ ನಿರ್ವಹಿಸಲಾಗುವ ಇಂಜನೀಯರುಗಳ ರಿಜಿಸ್ಟರ್ ಇತ್ಯಾದಿಗಳಲ್ಲಿನ ಸಂಬಂಧಪಟ್ಟ ನಮೂನೆಯ ಪ್ರಮಾಣೀಕೃತ ಪ್ರತಿ ಅಥವಾ ಸಂಬಂಧಪಟ್ಟ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ನೀಡಿರುವ ಧೃಢಿಕೃತ ಅಂಕಪಟ್ಟಿ ಹೊಂದಿರಬೇಕೆಂದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.