ಬೆಳೆ ಪರಿಹಾರ ವಿತರಣೆಯಲ್ಲಿ ಲೋಪ-ಪ್ರಾದೇಶಿಕ ಅಧಿಕಾರಿಗಳ ಮಟ್ಟದಿಂದ ತನಿಖೆಗೆ ಆದೇಶ: ಬಸವರಾಜ ಬೊಮ್ಮಾಯಿ

Share

ಹಾವೇರಿ: ಅತಿವೃಷ್ಟಿ ಮತ್ತು ನೆರೆಯಿಂದ ಹಾನಿಯಾದ ಬೆಳೆಗಳಿಗೆ ಪರಿಹಾರ ವಿತರಣೆಯಲ್ಲಿ ಗಂಭೀರವಾದ ಲೋಪವಾಗಿದೆ. ಸಮರ್ಪಕವಾಗಿ ರೈತರಿಗೆ ಪರಿಹಾರ ದೊರಕಿಲ್ಲ. ಬೆಳೆ ಪರಿಹಾರದಲ್ಲಿ ಆಗಿರುವ ಲೋಪ ಕುರಿತಂತೆ ಉನ್ನತ ಮಟ್ಟದ ತನಿಖೆ ಅಗತ್ಯವಾಗಿರುವುದರಿಂದ ಬೆಳಗಾವಿ ಪ್ರಾದೇಶಿಕ ಮಟ್ಟದ ಅಧಿಕಾರಿಗಳಿಂದ ಸಮಗ್ರ ತನಿಖೆಗೆ ಒಳಪಡಿಸಲು ಆದೇಶಿಸಲಾಗುವುದು ಎಂದು ಗೃಹ, ಸಹಕಾರ ಮತ್ತು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಪ್ರಸಕ್ತ ಸಾಲಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೆಳೆ ಪರಿಹಾರವಾಗಿ 174.46 ಕೋಟಿ ರೂ.ಗಳನ್ನು 1,00,768 ಜನರಿಗೆ ವಿತರಿಸಿರುವುದಾಗಿ ಮಾಹಿತಿ ಒದಗಿಸಿದ್ದಿರಿ. ಈ ಅನುದಾನದಲ್ಲಿ ಇನ್ನೂ ಹೆಚ್ಚು ಸಂಖ್ಯೆಯ ರೈತರಿಗೆ ವಿತರಿಸಬಹುದಾಗಿತ್ತು. ನನಗೆ ಬಂದಿರುವ ಖಚಿತ ಮಾಹಿತಿಯಂತೆ ಒಂದೇ ಸರ್ವೇನಂಬರಿನ ಒಂದೇ ಮನೆಯ ಮಾವ, ಮಗ, ಸೊಸೆಗೆ ಪರಿಹಾರ ನೀಡಲಾಗಿದೆ. ನಿಜವಾಗಿ ಬೆಳೆ ಕಳೆದುಕೊಂಡ ಕೆಲ ರೈತರಿಗೆ ಪರಿಹಾರ ದೊರಕಿಲ್ಲ. ಬೆಳೆ ಪರಿಹಾರ ವಿತರಣೆಯಲ್ಲಿ ಪುನರಾವರ್ತನೆಯಾಗಿದೆ(ಡುಪ್ಲಿಕೇಷನ್). ಕೆಳ ಹಂತದ ಅಧಿಕಾರಿಗಳಿಂದಲೂ ಬೆಳೆ ಪರಿಹಾರ ವಿತರಣೆಯಲ್ಲಿ ಲೋಪವ್ಯಸಗಿದ್ದಾರೆ. ಈ ಕುರಿತಂತೆ ಸಮಗ್ರ ತನಿಖೆ ಅಗತ್ಯವಿದೆ. ಒಂದೊಮ್ಮೆ ತನಿಖೆಯಲ್ಲಿ ತಪ್ಪೆಸಗಿದ ಅಧಿಕಾರಿಗಳಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಈ ತನಿಖಾ ತಂಡದಲ್ಲಿ ಜಿಲ್ಲೆಯ ಯಾವುದೇ ಅಧಿಕಾರಿ, ನೌಕರರು ಇರಬಾರದು. ಕೇವಲ ಮಾಹಿತಿ ಮಾತ್ರ ತನಿಖಾ ತಂಡಕ್ಕೆ ಒದಗಿಸಬೇಕು. ಪ್ರಾದೇಶಿಕ ಮಟ್ಟದ ಅಧಿಕಾರಿಗಳೇ ತನಿಖೆ ನಡೆಸಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಸೂಚನೆ ನೀಡಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ ಮನವಿಗೆ ಸ್ಪಂದಿಸಿದ ಸಚಿವರು, ಬೆಳೆಪರಿಹಾರಕ್ಕೆ ಅರ್ಹರಾದ ರೈತರ ಮಾಹಿತಿಯನ್ನು ಗ್ರಾಮ ಪಂಚಾಯತಿವಾರು ಪ್ರಕಟಿಸುವಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಸೂಚನೆ ನೀಡಿದರು.

ಎಸಿಬಿ ತನಿಖೆ: ನೆರೆ ಅತಿವೃಷ್ಟಿಯಿಂದ ಹಾನಿಯಾದ ಮನೆಗಳ ಪರಿಹಾರ ವಿತರಣೆಯಲ್ಲಿ ನಾಲ್ಕು ಬಗೆಯ ಲೋಪವಾಗಿದೆ. ಈ ಕುರಿತಂತೆ ವ್ಯಾಪಕವಾದ ದೂರುಗಳು ಬಂದಿವೆ. ಮನೆ ಬಿದ್ದರೂ ಸರ್ವೇಮಾಡಿಲ್ಲ, ಬಿದ್ದಮನೆ ಸರ್ವೇಮಾಡಿದ್ದಾರೆ ಆದರೆ ಕಾರ್ಯಾದೇಶ ಪತ್ರ ನೀಡಿಲ್ಲ, ಮನೆಬಿದ್ದ ಕುರಿತು ಪರಿಶೀಲನೆ ನಡೆಸಿದ್ದಾರೆ ಮನೆ ನಿರ್ಮಾಣಕ್ಕೆ ಕಾರ್ಯಾದೇಶ ನೀಡಿದ್ದಾರೆ, ಆದರೆ ಹಣ ಬಿಡುಗಡೆಯಾಗಿಲ್ಲ ಎಂಬ ದೂರುಗಳು ಸಾಮಾನ್ಯವಾಗಿ ಕೇಳಿಬಂದಿವೆ. ಕೆಲ ಅಧಿಕಾರಿಗಳು ಮನೆಗೆ ಬೆಂಕಿ ಬಿದ್ದಾಗ ಗಳ ಎಳೆಯುವ ಕೆಲಸ ಮಾಡುತ್ತಿದ್ದಾರೆ. ಏಜೆಂಟರ್ ಮೂಲಕ ಮನೆ ಬೀಳದಿದ್ದರೂ ಮನೆ ಬಿದ್ದಿದೆ ಎಂದು ದಾಖಲೆ ಸೃಷ್ಟಿಸಿ ಹಣ ಕೀಳುವ ಕೆಲಸದಲ್ಲಿ ತೊಡಗಿದ್ದಾರೆ. ಬೀಳದ ಮನೆಗೆ ಡ್ಯಾಮೇಜ್ ಮಾಡಿ ವಿವಿಧ ಆಯಾಮದಲ್ಲಿ ಫೋಟೋ ತೆಗೆದು ಪರಿಹಾರ ಪಾವತಿಸಿದ್ದಾರೆ. ಮಳೆಗೆ ಮನೆಗೆ ಪೂರ್ಣ ಮನೆಬಿದ್ದರೂ ಖಾಲಿ ಜಾಗ ಎಂದು ತೋರಿಸುತ್ತಿದ್ದಾರೆ ಇದಕ್ಕೆ ಏನು ಹೇಳಬೇಕು ಎಂದು ಗೊತ್ತಾಗುತ್ತಿಲ್ಲ. ಮಾಳಿಗೆ ಮನೆ ಚಂದ ಇದ್ದರೂ ಮನೆ ಬಿದ್ದಿದೆ ಎಂದು ತೋರಿಸಿ ಹಣ ಕ್ಲೇಮ್ ಮಾಡುತ್ತಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಈ ಕುರಿತಂತೆ ತಹಶೀಲ್ದಾರ ಮತ್ತು ಉಪ ವಿಭಾಗಾಧಿಕಾರಿಗಳು ಮಾಹಿತಿ ನೀಡಲಾಗಿದೆ. ಅನರ್ಹರಿಗೆ ಕೊಡಬೇಡಿ, ಅರ್ಹರನ್ನು ಕೈಬಿಡಬೇಡಿ, ಇದು ಸರ್ಕಾರದ ನಿಲುವಾಗಿದೆ. ಇಡಿ ದೇಶದಲ್ಲಿ ಮನೆ ನಿರ್ಮಾಣಕ್ಕೆ 5 ಲಕ್ಷ ರೂ.ಗಳನ್ನು ಕೊಡುತ್ತಿರುವುದು ಕರ್ನಾಟಕ ಸರ್ಕಾರ ಮಾತ್ರ. ಇದು ಸದುಪಯೋಗವಾಗಬೇಕು ಎಂದು ತಾಕೀತು ಮಾಡಿದರು.

ಮನೆ ಸರ್ವೇಯಲ್ಲಿ ಯಾವುದೇ ಲೋಪವಾಗದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಪ್ರತಿ ತಾಲೂಕಿಗೆ ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಿ ಪರಿಶೀಲಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು. ಈ ಮಾತಿಗೆ ಗರಂ ಆದ ಸಚಿವರು ನೋಡಲ್ ಅಧಿಕಾರಿಗಳ ವರದಿಗಳನ್ನು ನನಗೆ ಕಳುಹಿಸಿಕೊಡಿ. ಯಾವುದೇ ಲೋಪವಾಗಿಲ್ಲ ಎಂದು ಅವರು ವರದಿ ನೀಡಿದರೆ ಭ್ರಷ್ಟಾಚಾರ ನಿಗ್ರಹದಳದಿಂದ (ಎಸಿಬಿ)ತನಿಖೆಗೆ ಕೊಡುವೆಂದು ಎಚ್ಚರಿಸಿದರು.

ಬೋಗಸ್ ದೂರುಗಳನ್ನು ಪರಿಗಣಿಸಬೇಡಿ, ಆದರೆ ಏಜೆಂಟರ್ ಮೂಲಕ ಬೋಗಸ್ ಮನೆಗಳಿಗೆ ಪರಿಹಾರ ಕೊಟ್ಟರೆ ನಾನು ಸಹಿಸುವುದಿಲ್ಲ. ಕೇಂದ್ರ ಸ್ಥಾನಬಿಟ್ಟು ಮನೆ ಕಳೆದುಕೊಂಡ ತಾಲೂಕಿನ ಜನತೆಗೆ ಮಾಹಿತಿ ನೀಡಿ. ಆಯಾ ತಾಲೂಕಾ ಕಚೇರಿಗಳಲ್ಲಿ ದೂರು ಸ್ವೀಕಾರ ಸಭೆ ನಡೆಸಿ. ನೆರೆ ಪರಿಹಾರ ವಿತರಣೆಯಲ್ಲಿ ಲೋಪವಾಗಿದೆ ಎಂದು ಗಂಭೀರವಾದ ದೂರುಗಳು ಬಂದರೇ ಸ್ಥಳದಲ್ಲೇ ತನಿಖೆ ಮಾಡಿ ಕ್ರಮಕೈಗೊಳ್ಳಿ ಎಂದು ಜಿಲ್ಲಾಧಿಕಾರಿಗಳಿಗೆ ಗೃಹ ಸಚಿವರು ಸೂಚನೆ ನೀಡಿದರು.

ಸಭೆಯಲ್ಲಿ ಮನೆ ಪರಿಹಾರ ಕುರಿತಂತೆ ಶಾಸಕರಾದ ನೆಹರು ಓಲೇಕಾರ, ವಿರುಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಸ್.ಕೆ.ಕರಿಯಣ್ಣನವರ ಒಳಗೊಂಡಂತೆ ಸಭೆಯಲ್ಲಿದ್ದ ಎಲ್ಲ ಶಾಸಕರು ಮನೆ ಸರ್ವೇ ಕಾರ್ಯದಲ್ಲಿ ಲೋಪವಾಗಿರುವ ಕುರಿತಂತೆ ಗಮನ ಸೆಳೆದರು.

ಎ ಮತ್ತು ಬಿ ವರ್ಗದ ಆರು ಸಾವಿರ ಮನೆಗಳ ಪೈಕಿ ಎರಡು ನೂರು ಮನೆಗಳ ನಿರ್ಮಾಣ ಕಾರ್ಯ ಆರಂಭವಾಗಿರುವುದಾಗಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಜನವರಿ 20ರೊಳಗೆ ಎಲ್ಲ ಮನೆಗಳು ಆರಂಭವಾಗಬೇಕು. ಈ ಕುರಿತಂತೆ ತಹಶೀಲ್ದಾರಗಳು ಕ್ರಮವಹಿಸುವಂತೆ ತಾಕೀತು ಮಾಡಿದರು ಹಾಗೂ ನೆರೆ ಮತ್ತು ಅತಿವೃಷ್ಟಿಯಿಂದ ತಗ್ಗು ಪ್ರದೇಶದಲ್ಲಿರುವ ಮನೆಗಳು ಕುಸಿತಕ್ಕೊಳಗಾಗಿವೆ. ಪುನಃ ಅದೇ ಸ್ಥಳದಲ್ಲಿ ಮನೆ ನಿರ್ಮಾಣ ಮಾಡುವ ಬದಲು ಬೇರೆಡೆ ಸ್ಥಳಾಂತರಿಸಿ ಮನೆ ನಿರ್ಮಾಣ ಮಾಡುವ ಕುರಿತಂತೆ ತಕ್ಷಣ ಕ್ರಮ ವಹಿಸಲು ಹಾನಗಲ್ ಶಾಸಕರಾದ ಸಿ.ಎಂ.ಉದಾಸಿ ಹಾಗೂ ಶಾಸಕರಾದ ನೆಹರು ಓಲೇಕಾರ ಹಾಗೂ ರಾಜ್ಯ ಉಗ್ರಾಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ ಅವರು ಮನವಿ ಮಾಡಿಕೊಂಡರು. ಜಾಗ ಬದಲಾವಣೆಮಾಡಿ ಮನೆ ನಿರ್ಮಾಣ ಮಾಡುವ ಕುರಿತಂತೆ ಮುಖ್ಯಮಂತ್ರಿಗಳ ಹಂತದಲ್ಲಿ ಚರ್ಚೆಯಾಗಿದೆ. ಶೀಘ್ರವಾಗಿ ಆದೇಶ ಹೊರಡಿಸಲಾಗುವುದು ಎಂದು ಹೇಳಿದರು.

ಮಳೆಯಿಂದ ಹಾನಿಯಾದ ಶಾಲೆ ಮತ್ತು ಅಂಗನವಾಡಿ ಕಟ್ಟಡಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಕೆರೆಹಾನಿ ದುರಸ್ತಿ, ರಸ್ತೆ ಮತ್ತು ಮೂಲಭೂತ ಸೌಕರ್ಯಗಳನ್ನು ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು. ಬರುವ ಫೆಬ್ರುವರಿ 2020ರೊಳಗೆ ಕಾಮಗಾರಿ ಮುಗಿಸಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ರಾಜ್ಯ ಉಗ್ರಾಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ, ಜಿ.ಪಂ.ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ, ಶಾಸಕರಾದ ಸಿ.ಎಂ.ಉದಾಸಿ, ನೆಹರು ಓಲೇಕಾರ, ವಿರುಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ಉಪಾಧ್ಯಕ್ಷೆ ಗಿರಿಜವ್ವ ಬ್ಯಾಲದಹಳ್ಳಿ, ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಮೇಶ ದೇಸಾಯಿ, ಸ್ಥಾಯಿ ಸಮಿತಿ ಅಧ್ಯಕ್ಷರುಗಳು, ಕೆಡಿಪಿ ನಾಮನಿರ್ದೇಶನ ಸದಸ್ಯರು, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.