ನಗರ ಸ್ಥಳೀಯ ಸಂಸ್ಥೆಗಳ ಕುಡಿಯುವ ನೀರಿನ ವೆಚ್ಚ: ಎಸಿಬಿಯಿಂದ ತನಿಖೆಗೆ ಗೃಹ ಸಚಿವರ ಸೂಚನೆ

Share

ಹಾವೇರಿ: ಕಳೆದ ಐದು ವರ್ಷಗಳಲ್ಲಿ ಕುಡಿಯುವ ನೀರಿನ ಪೂರೈಕೆಗಾಗಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು ವೆಚ್ಚಮಾಡಿದ ಹಣದ ಕುರಿತಂತೆ ಭ್ರಷ್ಟಾಚಾರ ನಿಗ್ರಹದಳ ಪೊಲೀಸರಿಂದ (ಎಸಿಬಿ) ಸಮಗ್ರ ತನಿಖೆ ಮಾಡಿಸಲು ಜಿಲ್ಲಾಧಿಕಾರಿಗಳೀಗೆ ಗೃಹ, ಸಹಕಾರಿ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರು ಸೂಚನೆ ನೀಡಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ತ್ರೈಮಾಸಿಕ ಕೆ.ಡಿ.ಪಿ.ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು ಜಿಲ್ಲೆಯ ನಗರಸಭೆ, ಪುರುಸಭೆ, ಪಟ್ಟಣ ಪಂಚಾಯತಿಗಳಲ್ಲಿ ಕುಡಿಯುವ ನೀರಿಗಾಗಿ ಅನಗತ್ಯವಾಗಿ ಹಣ ಪೋಲು ಮಾಡಲಾಗುತ್ತಿದೆ. ಈ ಕುರಿತಂತೆ ಸಮಗ್ರ ತನಿಖೆಯ ಅಗತ್ಯತತೆ ಇದೆ. ತನಿಖೆಗೆ ಎಸಿಬಿಗೆ ನೀಡಲು ಈ ಸಭೆಯಲ್ಲಿ ಠರಾವು ಪಾಸುಮಾಡಿ ನಾಳೆ ಸಂಜೆಯೊಳಗಾಗಿ ಠರಾವಿನ ಕಾಪಿ ನನಗೆ ಕೊಡಿ ಎಂದು ಸೂಚನೆ ನೀಡಿದರು.

ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೈಗೊಳ್ಳಲಾಗುವ ಕಾಮಗಾರಿಗಳು ಅತ್ಯಂತ ಕಳಪೆಯಾಗಿವೆ. ಮೂರನೇ ದರ್ಜೆಯ ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಗೃಹ ಸಚಿವರು ಗುಣಮಟ್ಟದ ಕಾಮಕಾರಿಗೆ ತಾಕೀತು ಮಾಡಿದರು ಹಾಗೂ ನಗರಸಭೆಗಳಿಂದ ಜಿ+1 ಮನೆಗಳ ನಿರ್ಮಾಣ ಕುರಿತಂತೆ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿಗಳು ಹಾಗೂ ಜಿಲ್ಲಾಡಳಿತ ಕೈಗೊಂಡ ನಿರ್ಣಯದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು ಈ ಕುರಿತಂತೆ ರಾಜೀವಗಾಂಧಿ ಹೌಸಿಂಗ್ ನಿಗಮದ ಪ್ರತ್ಯೇಕ ಸಭೆಯನ್ನು ಬೆಂಗಳೂರಿನಲ್ಲಿ ಕರೆಯಲಾಗುವುದು. ಜಿ+1 ಮನೆಗಳ ನಿರ್ಮಾಣ ಕುರಿತಂತೆ ರಾಜ್ಯ ಮಟ್ಟದಲ್ಲೇ ಪರಿಹಾರ ಕಂಡುಕೊಳ್ಳಲಾಗುವುದು. ಜಿಲ್ಲೆಯ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಲು ಸೂಚನೆ ನೀಡಿದರು.

ಗಂಗಾ ಕಲ್ಯಾಣ ಯೋಜನೆಯಡಿ ಪ್ರಗತಿಯ ಕುರಿತಂತೆ ಡಾ.ಅಂಬೇಡ್ಕರ ಅಭಿವೃದ್ಧಿ ನಿಗಮದ ಅಧಿಕಾರಿಯನ್ನು ತೀವ್ರವಾಗಿ ತರಟೆಗೆ ತೆಗೆದುಕೊಂಡ ಸಚಿವರು ಅರ್ಹತೆ ಇರುವ ಇಲಾಖೆಯ ಮಾನದಂಡಕ್ಕೆ ಒಳಪಡುವ ಅರ್ಜಿಗಳನ್ನು ಮಾತ್ರ ಶಾಸಕರ ಸಮಿತಿಗೆ ಶಿಫಾರಸ್ಸು ಮಾಡಲು ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಮಾಹಿತಿ ನೀಡಲು ತಡಕಾಡಿದ ನಿಗಮದ ವ್ಯವಸ್ಥಾಪಕರಿಗೆ ಇಲಾಖೆಯ ಮಾರ್ಗಸೂಚಿಗಳನ್ನು ಓದಿ ಸಭೆಗೆ ಹಾಜರಾಗುವಂತೆ ತಾಕೀತು ಮಾಡಿದರು.

ಶಾಲಾ ಮಕ್ಕಳಿಗೆ ಎರಡನೇ ಜೊತೆ ಸಮವಸ್ತ್ರವನ್ನು ಶೀಘ್ರವೇ ವಿತರಿಸಬೇಕು. ಉದ್ಯೋಗ ಖಾತ್ರಿಯಡಿ ಶಾಲೆಗಳಲ್ಲಿ ಸಮುದಾಯ ಶೌಚಾಲಯಗಳನ್ನು ನಿರ್ಮಿಸಬೇಕು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ರಾಯಲ್ಟಿ ನಿಧಿಯಿಂದ ಶಾಲೆಗಳಿಗೆ ಕುಡಿಯುವ ನೀರು, ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ಖಾಲಿ ಇರುವ ವೈದ್ಯರ ಹುದ್ದೆಯನ್ನು ಶೀಘ್ರವೇ ಭರ್ತಿಮಾಡಿಕೊಳ್ಳಬೇಕು. ಹಾನಗಲ್‍ಗೆ ಬ್ಲಡ್ ಎನಲೈಜರ್ ಪೂರೈಸಿಬೇಕು. ಖಾಲಿ ಇರುವ ಅನಸ್ಥಿಯಾ ವೈದ್ಯರನ್ನು ಭರ್ತಿಮಾಡಬೇಕು, ಔಷಧಿ ಕೊರತೆಯಾಗದಂತೆ ಕ್ರಮವಹಿಸಬೇಕು. ಹುಚ್ಚುನಾಯಿ ಕಡಿತಕ್ಕೆ ಸ್ಥಳೀಯ ಆಸ್ಪತ್ರೆಗಳಲ್ಲೇ ಔಷಧಿ ದೊರಕುವಂತೆ ಕ್ರಮವಹಿಸಬೇಕು, ಜನೌಷಧಿ ಕೇಂದ್ರಗಳನ್ನು ಆಸ್ಪತ್ರೆಯಿಂದ ವೈದ್ಯರು ತೆರಳುವವರೆಗೂ ಮುಚ್ಚಬಾರದು. ತುಮ್ಮಿನಕಟ್ಟೆ ಆರೋಗ್ಯ ಕೇಂದ್ರದಲ್ಲಿ ಕುಟುಂಬ ಕಲ್ಯಾಣ ಯೋಜನೆ ಶಸ್ತ್ರ ಚಿಕಿತ್ಸೆಯನ್ನು ಆರಂಭಿಸಬೇಕು, ಹೊರಗುತ್ತಿಗೆಯಿಂದ ನೇಮಕವಾದ 126 ಡಿ ಗ್ರೂಪ್ ನೌಕರರಿಗೆ ವೇತನಪಾತಿಸಬೇಕು ಎಂದು ಸೂಚನೆ ನೀಡಿದರು.

ಅಂಗನವಾಡಿ ಶಿಕ್ಷಕಿಯರ ನೇಮಕ, ಅಂಗನವಾಡಿ ಕಟ್ಟಡಗಳ ನಿರ್ಮಾಣ ಕುರಿತಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು ಈ ಸಮಸ್ಯೆಗಳ ಕುರಿತಂತೆ ಚರ್ಚಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಂಬಂಧಿಸಿದಂತೆ ಪ್ರತ್ಯೇಕ ಸಭೆ ಕರೆಯಲು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ಕೈಗಾರಿಕೆಗೆ ಉತ್ತೇಜನ, ಹೂಡಿಕೆಗಾದರರ ಆಕರ್ಷಣೆ, ಮೂಲ ಸೌಕರ್ಯಗಳ ಕಲ್ಪಿಸುವ ಕುರಿತಂತೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳ ಪ್ರತ್ಯೇಕ ಸಭೆ ನಿಗಧಿಪಡಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ಉದ್ಯೋಗ ಖಾತ್ರಿ ಯೋಜನೆಯಡಿ ನಿಗಧಿತ ಮಾನವ ದಿನಗಳನ್ನು ತಲುಪಲು ವಯಕ್ತಿಕ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು. ರೈತರ ಕಣ, ಬಂಡಿಂಗ್ ನಿರ್ಮಾಣಕ್ಕೆ ನೆರವು ಒದಗಿಸಬೇಕು, ಶೇ.60-40ರ ಅನುಪಾತದಲ್ಲಿ ಹಣ ಬಳಕೆಮಾಡಬೇಕು. ಎಲ್ಲ ಪಂಚಾಯತಿಗಳಲ್ಲಿ ಕಾರ್ಯಕ್ರಮ ಹಾಕಿಕೊಳ್ಳುವಂತೆ ಸೂಚನೆ ನೀಡಿದರು.

ಲೋಕೋಪಯೋಗಿ ಇಲಾಖೆ ರಸ್ತೆಗಳ ಕಳಪೆ ಕಾಮಗಾರಿ ನಡೆಯುತ್ತಿವೆ, ನಿರ್ಮಾಣ ಮಾಡಿದ ಆರು ತಿಂಗಳಲ್ಲಿ ಹಾಳಾಗುತ್ತಿರುವುದಾಗಿ ಶಾಸಕರು ಗಮನ ಸೆಳೆದಾಗ ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು. ಕಾಮಗಾರಿ ಸ್ಥಳದಲ್ಲಿ ಕಡ್ಡಾಯವಾಗಿ ಇಂಜನೀಯರ್‍ಗಳು ಉಪಸ್ಥಿತರಿರಬೇಕು ಎಂದು ಸೂಚಿಸಿದ ಸಚಿವರು ಜಿಲ್ಲಾ ಮುಖ್ಯ ರಸ್ತೆ ಯೋಜನೆಯ ವಿಳಂಬಕ್ಕೆ ಲಿಖಿತ ರೂಪದಲ್ಲಿ ವಿವರಣೆ ನೀಡಲು ಕಾರ್ಯನಿರ್ವಾಹಕ ಅಭಿಯಂತರರಿಗೆ ಸೂಚನೆ ನೀಡಿದರು.

ಬಜೆಟ್ ಅನುಷ್ಠಾನ ಕಾಲದಲ್ಲಿ ಹೆಚ್ಚುವರಿ ಅವಧಿಯಲ್ಲಿ ಕೆಲಸ ನಿರ್ವಹಿಸಿ ಕಾಲಮಿತಿಯೊಳಗೆ ಇಲಾಖೆಗೆ ನಿಗಧಿಪಡಿಸಿದ ಅನುದಾನವನ್ನು ಖರ್ಚುಮಾಡಬೇಕು. ಬಡವರಿಗಾಗಿ ರೂಪಿಸಲಾದ ಸಾಮಾಜಿಕ ಭದ್ರತಾ ಯೋಜನೆಗಳನ್ನು ಸಕಾಲದಲ್ಲಿ ಜನರಿಗೆ ತಲುಪಬೇಕು. ಸುಳ್ಳು ಹೇಳದೇ ಸತ್ಯಕ್ಕೆ ಹತ್ತಿರವಾಗಿ ಪ್ರಾಮಾಣಿಕವಾಗಿ ಜಿಲ್ಲೆಯ ಅಭಿವೃದ್ಧಿಗಾಗಿ ಕೆಲಸಮಾಡಬೇಕು. ಯಾವುದೇ ಅಧಿಕಾರಿಗಳು ನಿಯೋಜನೆಯ ಮೇಲೆ ಬೇರೆ ಜಿಲ್ಲೆಗೆ ತೆರಳಬಾರದು. ವರ್ಗಾವಣೆಯಾದರೆ ನನ್ನ ಅನುಮತಿ ಇಲ್ಲದೆ ಬಿಡುಗಡೆ ಮಾಡದಂತೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ವಿವಿಧ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು. ಸಭೆಯಲ್ಲಿ ರಾಜ್ಯ ಉಗ್ರಾಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ, ಜಿ.ಪಂ.ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ, ಶಾಸಕರಾದ ಸಿ.ಎಂ.ಉದಾಸಿ, ನೆಹರು ಓಲೇಕಾರ, ವಿರುಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ಉಪಾಧ್ಯಕ್ಷೆ ಶ್ರೀಮತಿ ಗಿರಿಜವ್ವ ಬ್ಯಾಲದಹಳ್ಳಿ, ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಮೇಶ ದೇಸಾಯಿ, ಸ್ಥಾಯಿ ಸಮಿತಿ ಅಧ್ಯಕ್ಷರುಗಳು, ಕೆಡಿಪಿ ನಾಮನಿರ್ದೇಶನ ಸದಸ್ಯರು, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.