ಮಿಂಚಿನ ಮತದಾರರ ನೋಂದಣಿ-ಯುವ ಮತದಾರರನ್ನು ನೋಂದಾಯಿಸಿ ಕಾಲೇಜು ಪ್ರಾಚಾರ್ಯರಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಸೂಚನೆ

Share

ಹಾವೇರಿ: ಜಿಲ್ಲೆಯಾದ್ಯಂತ ಯುವ ಹಾಗೂ ಭಾವಿ ಮತದಾರರ ನೋಂದಣಿಗಾಗಿ ಭಾರತ ಚುನಾವಣಾ ಆಯೋಗದ ಸೂಚನೆಯಂತೆ ಜನವರಿ ೬, ೭ ಹಾಗೂ ೮ ರಂದು ಮಿಂಚಿನ ನೋಂದಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿರುವ ಎಲ್ಲ ಕಾಲೇಜುಗಳ ಪ್ರಾಚಾರ್ಯರು ೧೮ ವರ್ಷ ತುಂಬಿದ ಎಲ್ಲ ವಿದ್ಯಾರ್ಥಿಗಳನ್ನು ಮತದಾರರಾಗಿ ನೋಂದಾವಣಿಗೆ ವಿಶೇಷ ಆದ್ಯತೆ ನೀಡುವಂತೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯೊ ಅವರು ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮತದಾರರ ಮಿಂಚಿನ ನೋಂದಣಿ ಕುರಿತಂತೆ ಸೋಮವಾರ ಜಿಲ್ಲೆಯ ವಿವಿಧ ಕಾಲೇಜುಗಳ ಪ್ರಾಚಾರ್ಯರ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಅವರು ಜಿಲ್ಲೆಯಲ್ಲಿ ಯುವ ಮತದಾರರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ೧೮ ರಿಂದ ೨೦ ವರ್ಷ ವಯೋಮಾನದ ಮತದಾರರ ನೋಂದಣಿ ಸಂಖ್ಯೆ ಹೆಚ್ಚಾಗಬೇಕಾಗಿದೆ. ಈ ನಿಟ್ಟಿನಲ್ಲಿ ಕಾಲೇಜುಗಳಲ್ಲಿ ಮಿಂಚಿನ ಮತದಾರರ ನೋಂದಣಿ ಮೂಲಕ ಅರ್ಹ ಎಲ್ಲ ವಿದ್ಯಾರ್ಥಿಗಳನ್ನು ಮತದಾರರಾಗಿ ನೋಂದಾಯಿಸಿಕೊAಡು ಪ್ರಾಚಾರ್ಯರಿಗೆ ಕರೆ ನೀಡಿದರು.

ವಿದ್ಯಾರ್ಥಿಗಳಲ್ಲದೇ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಯುವ ಮತದಾರರು ಹಾಗೂ ಈವರೆಗೆ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳದವರನ್ನು ನೋಂದಾಯಿಸಿಕೊಳ್ಳಲು ಬಿ.ಎಲ್.ಓ.ಗಳು ಆದ್ಯತೆ ನೀಡಬೇಕು. ಮಿಂಚಿನ ನೋಂದಣಿಯ ದಿನವಾದ ಜನವರಿ ೬ ರಿಂದ ೮ರವರೆಗೆ ಮೂರು ದಿನಗಳ ಕಾಲ ಎಲ್ಲ ಬಿ.ಎಲ್.ಓ.ಗಳು ಬೆಳಿಗ್ಗೆ ೮ ರಿಂದ ಸಂಜೆ ೬ ಗಂಟೆವರೆಗೆ ಉಪಸ್ಥಿತರಿದ್ದು ಮತದಾರರ ನೋಂದಣಿಗೆ ಆದ್ಯತೆ ನೀಡುವಂತೆ ಸೂಚನೆ ನೀಡಿದರು.

ಮತದಾರರ ನೋಂದಣಿಗೆ ೧೮ ವರ್ಷ ಪೂರ್ಣಗೊಂಡಿರಬೇಕು, ೧೮ ರಿಂದ ೨೦ ವರ್ಷ ವಯೋಮಾನದ ಮತದಾರರಾಗಿ ನೋಂದಾಯಿಸಿಕೊಳ್ಳದವರನ್ನು ಮತದಾರರಾಗಿ ಸೇರ್ಪಡೆಗೊಳಿಸುವ ಕಾರ್ಯವನ್ನು ಕೈಗೊಳ್ಳಬೇಕು. ಈ ಕುರಿತಂತೆ ತಾಲೂಕಾ ಹಾಗೂ ಜಿಲ್ಲಾ ಮಟ್ಟದಲ್ಲಿ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಮತದಾರರ ಜಾಗೃತಿ ಕಾರ್ಯಕ್ರಮದ ಮೂಲಕ ಮಿಂಚಿನ ಮತದಾರರ ನೋಂದಣಿ ಕುರಿತಂತೆ ವ್ಯಾಪಕ ಪ್ರಚಾರ ಕೈಗೊಳ್ಳಬೇಕು, ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.

ಕಾಲೇಜುಗಳಿಗೆ ಭೇಟಿ ನೀಡಿ ಯುವ ಮತದಾರರ ನೋಂದಣಿ ಮಾಡಿಕೊಳ್ಳಬೇಕು. ಈಗಾಗಲೇ ಕಾಲೇಜುಗಳಲ್ಲಿ ನಿಯೋಜಿತಗೊಂಡ ನೋಡಲ್ ಅಧಿಕಾರಿಗಳು ಅರ್ಜಿ ನಮೂನೆ 6ನ್ನು ವಿತರಿಸಿ ಮಾಹಿತಿ ಒದಗಿಸಬೇಕು. ಜನವರಿ ೮ ರೊಳಗೆ ಹೊಸ ಮತದಾರರ ನೋಂದಣಿಗೆ ಕ್ರಮವಹಿಸುವಂತೆ ಸೂಚಿಸಿದರು.

ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ, ವಾರ್ತಾಧಿಕಾರಿ ಬಿ.ಆರ್.ರಂಗನಾಥ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ವಿನೋದಕುಮಾರ ಹೆಗ್ಗಳಗಿ, ಜಿ.ಪಂ.ಸಹಾಯಕ ಕಾರ್ಯದರ್ಶಿ ಜಾಫರ ಸುತಾರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಜಮಖಾನೆ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಜೀವ ಕೂಲೇರ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಗುಡ್ಡಪ್ಪ, ಪೌರಾಯುಕ್ತ ಬಸವರಾಜ ಜಿದ್ದಿ, ಅಗ್ನಿಶಾಮ ಇಲಾಖೆ ಅಧಿಕಾರಿ ಸೋಮಶೇಖರ ಅಗಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ಪಾಟೀಲ, ಪೊಲೀಸ್ ಆರ್.ಟಿ.ಓ. ಅಧಿಕಾರಿಗಳು, ವಿವಿಧ ಕಾಲೇಜುಗಳ ಪ್ರಾಚಾರ್ಯರು ಉಪಸ್ಥಿತರಿದ್ದರು.