ಪೋಲಿಯೋ ಲಸಿಕೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಡಿರುವ ಸುಳ್ಳು ವದಂತಿಗೆ ಕಿವಿ ಕೊಡಬೇಡಿ: -ಡಿ.ಎಚ್.ಓ. ಡಾ.ರಾಜೇಂದ್ರ ದೊಡ್ಡಮನಿ

Share

ಹಾವೇರಿ: ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಒಂದು ಕಳೆದ ಒಂದು ವಾರದಿಂದ ಪೋಲಿಯೋ ಲಸಿಕೆಯಲ್ಲಿ ವೈರಸ್ ಬೆರೆತಿರುವುದರಿಂದ ಯಾರೂ ಪೋಲಿಯೋ ಹಾಕಿಸಬಾರದು ಎಂಬ ಸುಳ್ಳು ಸುದ್ದಿ ಹರಿದಾಡುತ್ತಿದೆ. ಈ ವದಂತಿಯನ್ನು ಯಾರೂ ನಂಬಬಾರದು. ಪೋಲಿಯೋ ಅತ್ಯಂತ ಸುರಕ್ಷಿತ ಲಸಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಡಾ.ರಾಜೇಂದ್ರ ದೊಡ್ಡಮನಿ ಅವರು ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆಡಿಯೋದಲ್ಲಿ ಸತ್ಯಾಂಶವಿಲ್ಲ. ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಬಾರದು, ಈ ಲಸಿಕೆಯಲ್ಲಿ ವೈರಸ್ ಬೆರೆತಿರುವುದರಿಂದ ಪೋಲಿಯೋ ಲಸಿಕೆ ತಯಾರುಮಾಡಿದ ಕಂಪನಿಯ ಮಾಲಿಕರನ್ನು ಬಂಧಿಸಲಾಗಿದೆ ಎಂದು ಸುಳ್ಳು ಸುದ್ದಿ ಹರಡಲಾಗಿದೆ. ಈ ಸುದ್ದಿ ಸುಳ್ಳು ಸುದ್ದಿಯಾಗಿದ್ದು ಯಾವುದೇ ಸತ್ಯಾಂಶವಿಲ್ಲ. 1995 ರಿಂದ ರಾಷ್ಟ್ರೀಯ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮ ಯಶಸ್ವಿಯಾಗಿ ನಡೆದುಕೊಂಡುಬಂದಿದೆ. ಈ ಪ್ರಯತ್ನದಿಂದ 2013ರಲ್ಲಿ ಭಾರತ ದೇಶದವು ಪೋಲಿಯೋ ಮುಕ್ತ ದೇಶವಾಗಿದೆ. ಈ ಪೋಲಿಯೋ ಲಸಿಕೆ ಅತ್ಯಂತ ಸುರಕ್ಷಿತವಾಗಿದ್ದು ಸಾರ್ವಜನಿಕರು ಯಾವುದೇ ಆತಂಕಪಡದೆ ತಮ್ಮ ಮಕ್ಕಳಿಗೆ ಪೋಲಿಯೋ ಲಸಿಕೆಯನ್ನು ತಪ್ಪದೇ ಹಾಕಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.