ಹಿರೇಕೆರೂರು, ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ: ಜಿಲ್ಲೆಯಲ್ಲಿ ಶನಿವಾರದಿಂದಲೇ ನೀತಿ ಸಂಹಿತೆ ಜಾರಿ

Share

ಹಾವೇರಿ: ಜಿಲ್ಲೆಯ ರಾಣೇಬೆನ್ನೂರು ಹಾಗೂ ಹಿರೇಕೆರೂರು ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗಿದ್ದು, ಸೆ 23ರ ಸೋಮವಾರದಿಂದ ಅಧಿಸೂಚನೆ ಹೊರಡಿಸಲಾಗುವುದು. ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಶನಿವಾರದಿಂದಲೇ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿಗೆ ಬಂದಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದರು.

ಉಪ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಸೆಪ್ಟೆಂಬರ್ 23 ರ ಸೋಮವಾರ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಅಧಿಸೂಚನೆ ಹೊರಡಿಸಲಾಗುವುದು. ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದೆ.

ಸೆಪ್ಟೆಂಬರ್ 30ರ ಸೋಮವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಅಕ್ಟೋಬರ್ 1ರ ಮಂಗಳವಾರ ನಾಮಪತ್ರ ಪರಿಶೀಲನೆ ನಡೆಯಲಿದೆ. ಅಕ್ಟೋಬರ್ 3ರ ಗುರುವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನ, ಅಕ್ಟೋಬರ್ 21 ರಂದು ಸೋಮವಾರ ಮತದಾನ ಜರುಗಲಿದೆ. ಅಕ್ಟೋಬರ್ 24ರ ಗುರುವಾರ ಮತ ಎಣಿಕೆ ಕಾರ್ಯ ನಡೆಯಲಿದೆ, ಅಕ್ಟೋಬರ್ 27 ರಂದು ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಮಾಹಿತಿ ನೀಡಿದರು.

86-ಹಿರೇಕೆರೂರು ಮತ ಕ್ಷೇತ್ರದಲ್ಲಿ 94,238 ಪುರುಷರು ಹಾಗೂ 88554 ಜನ ಮಹಿಳೆಯರು ನಾಲ್ಕು ಜನ ಇತರರು ಸೇರಿದಂತೆ 1,82,796 ಮತದಾರರು ಹಾಗೂ 87-ರಾಣೇಬೆನ್ನೂರ ಕ್ಷೇತ್ರದಲ್ಲಿ 1,18,396 ಪುರುಷರು ಹಾಗೂ 1,14,076 ಮಹಿಳೆಯರು ಹಾಗೂ 13 ಜನ ಇತರರು ಒಳಗೊಂಡಂತೆ 2,32,485 ಮತದಾರರಿದ್ದಾರೆ. ಹಿರೇಕೆರೂರು ಕ್ಷೇತ್ರದಲ್ಲಿ 229 ಮತಗಟ್ಟೆಗಳು, ರಾಣೇಬೆನ್ನೂರಿನಲ್ಲಿ 266 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಪ್ರತಿ ಮತಗಟ್ಟೆಗೆ ತಲಾ ನಾಲ್ಕು ಸಿಬ್ಬಂದಿಗಳಂತೆ ಹಾಗೂ ಶೇ.10 ರಷ್ಟು ಹೆಚ್ಚುವರಿ ಸಿಬ್ಬಂದಿಗಳನ್ನು ಕಾಯ್ದಿರಿಸಿ ನೇಮಕ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಹಿರೇಕೆರೂರು ಮತ ಕ್ಷೇತ್ರದ ಚುನಾವಣಾಧಿಕಾರಿಗಳಾಗಿ ಆಹಾರ ಮತ್ತು ನಾಗರಿಕ ಸಬರಾಜು ಇಲಾಖೆಯ ಉಪನಿರ್ದೇಶಕ ವಿನೋದಕುಮಾರ ಹೆಗ್ಗಳಗಿ ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ತಹಶೀಲ್ದಾರ ಆರ್.ಎಚ್.ಭಾಗವಾನ ಹಾಗೂ ರಾಣೇಬೆನ್ನೂರ ಮತ ಕ್ಷೇತ್ರದ ಚುನಾವಣಾಧಿಕಾರಿಯಾಗಿ ತುಂಗಾ ಮೇಲ್ದಂಡೆ ಯೋಜನೆ ಪ್ರಭಾರ ಭೂಸ್ವಾಧೀನಾಧಿಕಾರಿ ಅಬೀದ್ ಗದ್ಯಾಳ, ಸಹಾಯಕ ಚುನಾವಣಾಧಿಕಾರಿಯಾಗಿ ತಹಶೀಲ್ದಾರ ಸಿ.ಎಸ್.ಕುಲಕರ್ಣಿ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

ಮತದಾರರ ಪಟ್ಟಿ: ಉಪ ಚುನಾವಣೆ ನಡೆಯುವ ಎರಡು ಮತ ಕ್ಷೇತ್ರಗಳಲ್ಲಿ ಮತದಾನ ಚಲಾವಣೆಮಾಡಲು 01-01-2019 ಅರ್ಹತಾ ದಿನಾಂಕವಾಗಿದೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಳಸಿದ ಮತದಾರರ ಪಟ್ಟಿಯನ್ನು ಬಳಸಲಾಗುವುದು. ಮತದಾನ ಜಾಗೃತಿಗಾಗಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಧ್ಯಕ್ಷತೆಯಲ್ಲಿ ಸ್ವೀಪ್ ಸಮಿತಿಯನ್ನು ರಚಿಸಲಾಗಿದೆ ಎಂದು ತಿಳಿಸಿದರು.

ನೀತಿ ಸಂಹಿತೆ: ಸೆಪ್ಟೆಂಬರ್ 21ರ ಶನಿವಾರದಿಂದಲೇ ನೀತಿ ಸಂಹಿತೆ ಜಾರಿಗೆ ಬಂದಿದೆ. ಜಿಲ್ಲೆಯಾದ್ಯಂತ ನೀತಿ ಸಂಹಿತೆ ಅನ್ವಯಿಸುತ್ತದೆ. ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಕಟ್ಟೆಚ್ಚರ ವಹಿಸಲಾಗುವುದು. ಈ ಉದ್ದೇಶಕ್ಕಾಗಿ ಫ್ಲೈಯಿಂಗ್ ಸ್ಕ್ವಾಡ್, ಸ್ಟ್ಯಾಟಿಕ್ ಕಣ್ಗಾವಲು ತಂಡ, ವಿಡಿಯೋ ಕಣ್ಗಾವಲು ತಂಡ, ಚುನಾವಣಾ ವೆಚ್ಚ ಪರಿಶೀಲನಾ ತಂಡ, ಸೆಕ್ಟರ್ ಆಫೀಸರ್ ನೇಮಕ ಮಾಡಲಾಗುವುದು ಎಂದು ತಿಳಿಸಿದರು.

ಕಂಟ್ರೋಲ್ ರೂಂ: ಚುನಾವಣಾ ದೂರುಗಳು ಹಾಗೂ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಜರುಗಿದರೆ ಸಾರ್ವಜನಿಕರ ಅನುಕೂಲಕ್ಕಾಗಿ ಸಹಾಯವಾಣಿಯನ್ನು ಸ್ಥಾಪಿಸಲಾಗಿದೆ. ಟೋಲ್ ಫ್ರೀ ನಂಬರ್ 1950 ಸಂಖ್ಯೆಗೆ ಜಿಲ್ಲಾ ವ್ಯಾಪ್ತಿಯವರು ನೇರವಾಗಿ ಮಾತನಾಡಬಹುದು. ಹೊರಗಿನ ಜಿಲ್ಲೆಯವರು 08375-1950 ಸಂಖ್ಯೆಗೆ ಡಯಲ್‍ಮಾಡಿ ಮಾಹಿತಿ ನೀಡಬಹುದು ಎಂದು ವಿವರಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜೆ.ದೇವರಾಜ್ ಅವರು ಮಾಹಿತಿ ನೀಡಿ, ಶಾಂತಿಯುತ ನಿರ್ಭಯವಾದ ಚುನಾವಣೆಗೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುವುದು. ಜನರ ವಿಶ್ವಾಸ ಪಡೆದುಕೊಂಡು ಪಾರದರ್ಶಕವಾಗಿ ಚುನಾವಣೆ ನಡೆಯಲು ಪೊಲೀಸ್ ಇಲಾಖೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ. ಹಿರೇಕೆರೂರಲ್ಲಿ ಆರು, ರಾಣೇಬೆನ್ನೂರಿನಲ್ಲಿ ಎರಡು ದುರ್ಬಲ ಮತಗಟ್ಟೆ ಎಂದು ಗುರುತಿಸಲಾಗಿದೆ. ಸ್ಥಿರಕಣ್ಗಾವಲು ತಂಡ, ಫ್ಲೈಯಿಂಗ್ ಸ್ಕ್ವಾಡ್‍ಗಳನ್ನು ರಚಿಸಿ ಸೂಕ್ತ ಕಣ್ಗಾವಲು ಇರಿಸಲಾಗುವುದು ಎಂದು ಅವರು ತಿಳಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ವಿನೋದಕುಮಾರ ಹೆಗ್ಗಳಗಿ ಹಾಗೂ ರಾಣೇಬೆನ್ನೂರು ಮತ ಕ್ಷೇತ್ರದ ಚುನಾವಣಾಧಿಕಾರಿ ಅಬೀದ್ ಗದ್ಯಾಳ, ಚುನಾವಣಾ ತಹಶೀಲ್ದಾರ ಪ್ರಶಾಂತ ನಾಲವಾರ, ಉಪ ಚುನಾವಣಾದಿಕಾರಿಗಳಾದ ಹಿರೇಕೆರೂರು ತಹಶೀಲ್ದಾರ ಆರ್.ಎಚ್.ಭಾಗವಾನ್, ರಾಣೇಬೆನ್ನೂರ ತಹಶೀಲ್ದಾರ ಸಿ.ಎಸ್.ಕುಲಕರ್ಣಿ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಇದ್ದರು.