‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದ ಅಮೂಲ್ಯ ವಿರುದ್ಧ ಪ್ರಕರಣ ದಾಖಲು

Share

ಬೆಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಟಿಪ್ಪು ಸುಲ್ತಾನ್‌ ಯುನೈಟೆಡ್‌ ಫ್ರಂಟ್‌ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಪ್ರತಿಭಟನೆ ವೇಳೆ ‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ಕೂಗಿದ ಅಮೂಲ್ಯ ಎಂಬ ಯುವತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅವಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಪ್ರತಿಭಟನೆ ಸಭೆ ಆರಂಭವಾಗುತ್ತಿದ್ದಂತೆ ವೇದಿಕೆ ಏರಿದ ಅಮೂಲ್ಯ, ಎರಡು ಬಾರಿ ‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ಕೂಗಿದರು. ತಕ್ಷಣ ಅಲ್ಲೇ ಇದ್ದ ಪೊಲೀಸರು, ಅಮೂಲ್ಯ ಅವರನ್ನು ತಮ್ಮ ವಶಕ್ಕೆ ಪಡೆದುಕೊಂಡರು.

ಅಮೂಲ್ಯ ವಿರುದ್ಧ ದೇಶದ್ರೋಹ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್124(A) ದೇಶದ್ರೋಹ, 153(A) ಎರಡು ಗುಂಪುಗಳ ಮಧ್ಯೆ ಶತೃತ್ವ ಬಿತ್ತುವುದು ಹಾಗೂ 153(B) ಭಾವೈಕ್ಯತೆ, ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ಆರೋಪದ ಅಡಿಯಲ್ಲಿ ಬೆಂಗಳೂರಿನ ಉಪ್ಪಾರಪೇಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ, ‘ರಾಜ್ಯದಲ್ಲಿ ಶಾಂತಿ ಕದಡುವ ಪ್ರಯತ್ನ ನಡೆದಿದೆ. ಇಂತಹ ಹೇಳಿಕೆಗಳಿಂದ ಮನಸ್ಸಿಗೆ ನೋವುಂಟಾಗುತ್ತದೆ. ಪ್ರಕರಣದ ಸಂಪೂರ್ಣ ಮಾಹಿತಿ ಪಡೆಯಲಾಗುತ್ತಿದೆ. ಇಂಥವರ ವಿರುದ್ದ‌ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು, ಎಂದು ತಿಳಿಸಿದರು.