ಪಡಿತರ ವಿತರಣೆಯಲ್ಲಿ ಅಕ್ರಮವೆಸಗುವ ನ್ಯಾಯಬೆಲೆ ಅಂಗಡಿಗಳ ಲೈಸನ್ಸ್ ರದ್ದು: ಆಹಾರ ಸಚಿವ ಕೆ.ಗೋಪಾಲಯ್ಯ

Share

ಹಾವೇರಿ: ಕರೋನಾ ಸಂಕಷ್ಟ ಕಾಲದಲ್ಲಿ ಯಾರಿಗೂ ಪಡಿತರ ನಿರಾಕರಿಸಬಾರದು. ಅಳತೆ, ತೂಕದಲ್ಲಿ ಮೋಸ ಹಾಗೂ ಪಡಿತರದಾರರಿಂದ ಸೇವಾ ವೆಚ್ಚದ ನೆಪದಲ್ಲಿ ಹಣ ವಸೂಲಿ ಮಾಡುವ ನ್ಯಾಯ ಬೆಲೆ ಅಂಗಡಿಗಳ ಲೈಸನ್ಸ್ ರದ್ದುಗೊಳಿಸಿ ಎಂದು ರಾಜ್ಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಖಾತೆ ಸಚಿವ ಕೆ.ಗೋಪಾಲಯ್ಯ ಅವರು ಜಿಲ್ಲಾಡಳಿತಕ್ಕೆ ಖಡಕ್ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೋನಾ ಸಂದರ್ಭದಲ್ಲಿ ಪಡಿತರ ದಾಸ್ತಾನು, ವಿತರಣೆ ಹಾಗೂ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನಯೋಜನೆ ಅಡಿ ಪಡಿತರ ವಿತರಣೆ ಕುರಿತಂತೆ ಬುಧವಾರ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.

ಗ್ರಾಹಕರಿಂದ ಯಾವುದೇ ಸೇವಾ ವೆಚ್ಚವನ್ನು ನ್ಯಾಯಬೆಲೆ ಅಂಗಡಿ ಮಾಲೀಕರು ವಸೂಲಿ ಮಾಡುವ ಹಾಗಿಲ್ಲ. ಸರ್ಕಾರವೇ ಅವರಿಗೆ ಸೇವಾ ವೆಚ್ಚವನ್ನು ನೀಡುತ್ತಿದೆ. ಪಡಿತರದಾರರಿಂದ ಯಾರಾದರೂ ಒಂದು ಪೈಸೆ ಹಣ ಪಡೆದರೆ ಅಂತವರ ಮೇಲೆ ಕಠಿಣ ಕ್ರಮಕೈಗೊಳ್ಳಿ. ಕಂದಾಯ, ಆಹಾರ ಇಲಾಖೆ ಹಾಗೂ ತೂಕ ಮತ್ತು ಅಳತೆ ಇಲಾಖೆಯ ಅಧಿಕಾರಿಗಳ ಒಳಗೊಂಡಂತೆ ಹತ್ತರಿಂದ ಹದಿನೈದು ತಂಡಗಳನ್ನು ರಚಿಸಿ ಜಿಲ್ಲೆಯ ಎಲ್ಲ 456 ನ್ಯಾಯಬೆಲೆ ಅಂಗಡಿಗಳ ಪಡಿತರ ವಿತರಣೆ ಮೇಲೆ ನಿಗಾವಹಿಸಲು ಸೂಚನೆ ನೀಡಿದರು.

ಏಪ್ರಿಲ್‌ ತಿಂಗಳಲ್ಲಿ ಪಡಿತರ ವಿತರಣೆಯಲ್ಲಿ ಅಕ್ರಮವೆಸಗಿದ ವಿವಿಧ ಜಿಲ್ಲೆಗಳ 146 ನ್ಯಾಯಬೆಲೆ ಅಂಗಡಿಗಳನ್ನು ಅಮಾನತು ಮಾಡಿದ್ದು, ₹ 4 ಲಕ್ಷ ದಂಡ ವಿಧಿಸಲಾಗಿದೆ. ಜಿಲ್ಲೆಯಲ್ಲಿ 9 ನ್ಯಾಯಬೆಲೆ ಅಂಗಡಿಗಳಿಗೆ ನೋಟಿಸ್‌ ನೀಡಿದ್ದು, ಹಾನಗಲ್‌ ತಾಲ್ಲೂಕಿನ ಒಂದು ನ್ಯಾಯಬೆಲೆ ಅಂಗಡಿಯನ್ನು ಅಮಾನತುಗೊಳಿಸಲಾಗಿದೆ. ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನ್ಯಾಯಬೆಲೆ ಅಂಗಡಿಗಳಲ್ಲಿ ಕಡ್ಡಾಯವಾಗಿ ದರ ಪಟ್ಟಿ ಪ್ರಕಟಿಸಬೇಕು. ತೂಕ ಮತ್ತು ಅಳತೆಯಲ್ಲಿ ವ್ಯತ್ಯಾಸವಾಗಬಾರದು ಮತ್ತು ಗ್ರಾಹಕರಿಂದ ಸೇವಾ ತೆರಿಗೆ ತೆಗೆದುಕೊಳ್ಳುವಂತಿಲ್ಲ. ಈ ಬಗ್ಗೆ ದೂರುಗಳು ಬಂದರೆ ಕೂಡಲೇ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು ತಂಡ ರಚನೆ ಮಾಡಿಕೊಂಡು ಪ್ರತಿ ನ್ಯಾಯಬೆಲೆ ಅಂಗಡಿಗೂ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದರು.

ಪಡಿತರ ಕಾರ್ಡಿಗಾಗಿ ಅರ್ಜಿ ಹಾಕಿದ ಬಿಪಿಎಲ್ ಮತ್ತು ಎಪಿಎಲ್ ಕಾರ್ಡುದಾರರಿಗೆ ಪಡಿತರ ನೀಡಬೇಕು. ಅರ್ಜಿ ಹಾಕಿದವರ ಪಟ್ಟಿಯನ್ನು ಆಯಾ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರಕಟಿಸಬೇಕು. ಪ್ರತಿ ಬಿಪಿಎಲ್ ಕುಟುಂಬದ ಪ್ರತಿ ಸದಸ್ಯರಿಗೆ 10 ಕೆ.ಜಿ. ಅಕ್ಕಿ ನೀಡಬೇಕು ಹಾಗೂ ಎಪಿಎಲ್ ಕುಟುಂಬ ರೇಷನ್ ಬೇಡಿಕೆ ಸಲ್ಲಿಸಿದರೆ ಒಂದು ಕೆ.ಜಿ. ಅಕ್ಕಿಗೆ 15 ರೂ.ನಂತೆ ಪಡೆಯಲು ಅವಕಾಶವಿದೆ ಎಂದರು.

ಮೇ ತಿಂಗಳಲ್ಲಿ ರೇಷನ್ ಜೊತೆಗೆ ಒಂದು ಕೆ.ಜಿ ತೊಗರಿ ಬೇಳೆಯನ್ನು ನೀಡಲಾಗುವುದು. ಮೇ ಹಾಗೂ ಜೂನ್‍ವರೆಗೆ ಅಂತ್ಯೋದಯ ಹಾಗೂ ಬಿಪಿಎಲ್ ಕುಟುಂಬಗಳ ಪ್ರತಿ ಸದಸ್ಯರಿಗೆ 10 ಕೆ.ಜಿ. ಅಕ್ಕಿ ಹಾಗೂ ಪ್ರತಿ ಕಾರ್ಡ್ ಒಂದಕ್ಕೆ ಒಂದು ಕೆ.ಜಿ. ತೊಗರಿಬೇಳೆ ಉಚಿತವಾಗಿ ವಿತರಿಸಲಾಗುತ್ತದೆ. ಈ ಎಲ್ಲ ಮಾಹಿತಿಯನ್ನು ಜಿಲ್ಲೆಯ ಎಲ್ಲ ನ್ಯಾಯ ಬೆಲೆ ಅಂಗಡಿಗಳಲ್ಲಿ ಪ್ರಕಟಿಸಲು ಕ್ರಮವಹಿಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ವಿನೋದಕುಮಾರ ಹೆಗ್ಗಳಗಿ ಅವರಿಗೆ ಸೂಚನೆ ನೀಡಿದರು.

ಮೆಕ್ಕೆಜೋಳ ಖರೀದಿಗೆ ಮನವಿ: ಕರೋನಾದ ಸಂಕಷ್ಟ ಕಾಲದಲ್ಲಿ ಮೆಕ್ಕೆಜೋಳ ಧಾರಣೆ ಕುಸಿತದಿಂದ ಜಿಲ್ಲೆಯ ರೈತರು ತೊಂದರೆಯಲ್ಲಿದ್ದಾರೆ. ಈಗಾಗಲೇ ಕೇಂದ್ರಕ್ಕೆ ಪತ್ರ ಬರೆದು ಬೆಂಬಲ ಬೆಲೆಯಡಿ ಮೆಕ್ಕೆಜೋಳ ಖರೀದಿಗೆ ಮನವಿ ಮಾಡಿಕೊಳ್ಳಲಾಗಿದೆ. ಪ್ರಸ್ತುತ ಭತ್ತ, ರಾಗಿ, ಜೋಳ ಖರೀದಿಗೆ ಅನುಮತಿ ದೊರೆತಿದೆ. ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಬೆಂಬಲ ಬೆಲೆಯಡಿ ಮೆಕ್ಕೆಜೋಳ ಖರೀದಿಸಲು ಮನವಿ ಮಾಡಿಕೊಳ್ಳುವುದಾಗಿ ಭರವಸೆ ನೀಡಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ವಿನೋದಕುಮಾರ ಹೆಗ್ಗಳಗಿ ಅವರು ಸಭೆಗೆ ಮಾಹಿತಿ ನೀಡಿ, ಕರೋನಾ ಸೋಂಕು ಹಿನ್ನೆಲೆಯಲ್ಲಿ ಪಡಿತರ ಚೀಟಿದಾರರಿಗೆ ಆಹಾರ ಭದ್ರತೆ ಒದಗಿಸಲು 3.58 ಲಕ್ಷ ಕುಟುಂಬಗಳಿಗೆ ಪಡಿತರ ವಿತರಿಸಿದೆ. ಈವರೆಗೆ ಶೇ.95ರಷ್ಟು ಪಡಿತರ ಕಾರ್ಡುಗಳಿಗೆ ಪಡಿತರ ವಿತರಣೆ ಪೂರ್ಣಗೊಂಡಿದೆ ಎಂದರು.

ಬೆಂಬಲ ಬೆಲೆಯಡಿ ಭತ್ತ ಪೂರೈಸಲು 800 ರೈತರು ನೊಂದಾಯಿಸಿಕೊಂಡಿದ್ದು, ಈವರೆಗೆ 655 ರೈತರಿಂದ 2085.682 ಮೆಟ್ರಿಕ್ ಟನ್ ಭತ್ತ ಖರೀದಿಮಾಡಲಾಗಿದೆ. ಈ ಪೈಕಿ 561 ರೈತರಿಗೆ 3.20 ಕೋಟಿ ರೂ. ಹಣ ಪಾವತಿಮಾಡಲಾಗಿದೆ. ಬಾಕಿ ರೈತರಿಂದ ಭತ್ತ ಖರೀದಿಯ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ವಿವರಿಸಿದರು.

ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ ಜಿಲ್ಲೆಗೆ 4280 ಫಲಾನುಭವಿಗಳ ಗುರಿ ನಿಗಧಿ ಮಾಡಿದೆ. ಎಲ್ಲ ಫಲಾನುಭವಿಗಳಿಗೂ ಸಿಲೆಂಡರ್ ವಿತರಿಸಲಾಗಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ 1,28,881 ಫಲಾನುಭವಿಗಳೀಗೆ ಸಿಲೆಂಡರ್ ವಿತರಣೆಯ ಗುರಿ ನಿಗಧಿಪಡಿಸಿದ್ದು, ಈವರೆಗೆ 51,299 ಫಲಾನುಭವಿಗಳು ಸಿಲೆಂಡರ್ ನೊಂದಾಯಿಸಿಕೊಂಡಿದ್ದಾರೆ. ಈ ಪೈಕಿ 49,490 ಫಲಾನುಭವಿಗಳಿಗೆ ರಿಫಿಲ್ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಜಿ.ಪಂ.ಅಧ್ಯಕ್ಷ ಬಸನಗೌಡ ದೇಸಾಯಿ, ಶಾಸಕರಾದ ಸಿ.ಎಂ.ಉದಾಸಿ, ನೆಹರು ಓಲೇಕಾರ, ವಿರುಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಗುತ್ತೂರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ದೇಸಾಯಿ, ಉಪವಿಭಾಗಾಧಿಕಾರಿಗಳಾದ ಡಾ.ದಿಲೀಷ್ ಶಶಿ ಹಾಗೂ ಅನ್ನಪೂರ್ಣ ಮುದಕಮ್ಮನವರ, ತೂಕ ಮತ್ತು ಅಳತೆ ನಿಯಂತ್ರಣಾಧಿಕಾರಿ ಇದ್ದರು.