ನೆರೆ ಹಾನಿ ಸಂತ್ರಸ್ತರ ಅಹವಾಲು ಸ್ವೀಕರಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

Share

ಹಾವೇರಿ: ಜಿಲ್ಲೆಯಲ್ಲಿ ಅತಿವೃಷ್ಠಿ ಹಾಗೂ ನೆರೆಯಿಂದ ಹಾನಿಯಾಗಿರುವ ನಾಗನೂರ, ಕೂಡಲ, ಕುಣಿಮೆಳ್ಳಿಹಳ್ಳಿ ಹಾಗೂ ಕರ್ಜಗಿ ಗ್ರಾಮಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ  ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂತ್ರಸ್ತರ ಅಹವಾಲು ಸ್ವೀಕರಿಸಿದರು. ಸಂತ್ರಸ್ತರನ್ನು ಸಂತೈಸಿದರು. ತ್ವರಿತವಾಗಿ ಮನೆ ನಿರ್ಮಾಣ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.

ನಾಗನೂರು ಗ್ರಾಮ ಸ್ಥಳಾಂತರಕ್ಕೆ ಮನವಿ:
ನಾಗನೂರು ಗ್ರಾಮದಕ್ಕೆ ಆಗಮಿಸಿದ ಮುಖ್ಯಮಂತ್ರಿಗಳಿಗೆ ಗ್ರಾಮವನ್ನು ಸ್ಥಳಾಂತರಿಸುವಂತೆ ಗ್ರಾಮಸ್ಥರು ಮನವಿ ಮಾಡಿದರು. ವರದಾ ನದಿ ದಂಡೆಯ ಮೇಲೆ ಇರುವ ಗ್ರಾಮದಲ್ಲಿ 525 ಕುಟುಂಬಗಳು ವಾಸವಾಗಿವೆ. ವರದ ನದಿ ದಂಡೆಯ ನಾಗನೂರು ಕೂಡಲ ರಸ್ತೆಯ ಪಶ್ಚಿಮ ಭಾಗದಲ್ಲಿ 350 ಕುಟುಂಬಗಳು ವಾಸವಾಗಿದ್ದು, ನೆರೆ ಸಂದರ್ಭದಲ್ಲಿ ಉಂಟಾದ ಪ್ರವಾದಲ್ಲಿ 117 ಮನೆಗಳಿಗೆ ವರದಾ ನದಿ ನೀರು ನುಗ್ಗಿ ಹಾನಿ ಉಂಟಾಗಿದೆ. 44 ಮನೆಗಳು ಸಂಪೂರ್ಣ ಕುಸಿದಿವೆ. 49 ಮನೆಗಳು ತ್ರೀವ್ರ ಹಾಗೂ 07 ಮನೆಗಳು ಭಾಗಶಃವಾಗಿ ಹಾನಿಗೊಳಗಾಗಿವೆ. ಈ ಹಿಂದೆ 1961, 1983, 1992, 1993, ,2008ರಲ್ಲಿ ಗ್ರಾಮ ನೆರೆಗೆ ಸಿಲುಕಿದೆ. ಶಿಗ್ಗಾಂವಿ ಏತನೀರಾವರಿ ಯೋಜನೆಯಡಿ ವರದ ನದಿಗೆ ಕಟ್ಟಲಾಗಿರುವ ಬ್ಯಾರೇಜ್ ನಿಂದ ಮಳೆಗಾಲದಲ್ಲಿ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗಿ ಜಮೀನಿಗಳಿಗೆ ನೀರು ನುಗ್ಗಿ ಫಸಲುಗಳು ಹಾಳಗುತ್ತವೆ. ಆದ್ದರಿಂದ ಬ್ಯಾರೇಜ್ ಎತ್ತರ ತಗ್ಗಿಸಬೇಕು ಎಂದು ಮನವಿ ಮಾಡಿಕೊಂಡರು.

ಕೂಡಲ ಗ್ರಾಮದಲ್ಲಿ ವರದಾ ನದಿ ಪ್ರಹಾವದಿಂದ ಹಾನಿಗೊಳಗಾದ ಮನೆಗಳ ವೀಕ್ಷಣೆ ಮಾಡಿ ಪರಿಹಾರ ಕೇಂದ್ರದ ಸಂತ್ರಸ್ಥರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಸಂತ್ರಸ್ತರು ಮನೆಗಳನ್ನು ಸ್ಥಳಾಂತರಿಸಿ ತ್ವರಿತವಾಗಿ ಶಾಶ್ವತ ಸೂರು ಕಲ್ಪಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಪರಿಹಾರ ಕೇಂದ್ರದಿಂದ ಕೂಡಲ ಮಠಕ್ಕೆ ತೆರಳಿ ಸ್ವಾಮೀಜಿಗಳೊಂದಿಗೆ ಮಾತುಕತೆ ನಡೆಸಿದರು.

ಕುಣಿಮೆಳ್ಳಿಹಳ್ಳಿ ಗ್ರಾಮದ ಬಳಿ ಪ್ರವಾಹದಿಂದ ಹಾನಿಯಾದ ವರದಾ ನದಿಯ ಹಳೆಯ ಸೇತುವೆಯನ್ನು ಮುಖ್ಯಮಂತ್ರಿಗಳು ವೀಕ್ಷಿಸಿ ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿದರು. ನಂತರ ಕರ್ಜಗಿಗೆ ತೆರಳಿ  ಅತಿವೃಷ್ಟಿಯಿಂದ ಹೊಡೆದಹೊದ ಕರ್ಜಗಿ-ಚಿಕ್ಕಮಗದೂರು ಬ್ಯಾರೇಜ್ ಭೇಟಿ ನೀಡಿ ವೀಕ್ಷಣೆ ನೆಡೆಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ತಡೆಗೋಡೆ ನಿರ್ಮಾಣಕ್ಕೆ ಮನವಿ ಮಾಡಿಕೊಂಡರು.

ಕೇಂದ್ರದ ನೆರವಿನ ನಿರೀಕ್ಷೆ: ನೆರೆಯಿಂದ ಹಾನಿಯಾದ ಕುಣಿಮೆಳ್ಳಿಹಳ್ಳಿ, ವರದಾ ನದಿಯ ಹಳೆಯ ಸೇತುವೆ ಬಳಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿ ಕೆಲಸಕ್ಕೆ ತೊಂದರೆಯಾದರೂ ಪರಿಹಾರ ಕೆಲಸಕ್ಕೆ ಯಾವುದೇ ಹಿನ್ನೆಡೆಯಾಗದಂತೆ ಆದ್ಯತೆ ಮೇಲೆ ಕ್ರಮಕೈಗೊಳ್ಳಲಾಗುವುದು. ಹೆಚ್ಚಿನ ನೆರೆ ಪರಿಹಾರ, ಪುನರ್ ವಸತಿ, ಪುನರ್ ನಿರ್ಮಾಣಕ್ಕೆ  ಕೇಂದ್ರದ ನೆರವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದರು.

ಈಗಾಗಲೇ ಕೇಂದ್ರ ಪ್ರಕೃತಿ ವಿಕೋಪ ಅಧ್ಯಯನ ತಂಡ ರಾಜ್ಯಕ್ಕೆ ಆಗಮಿಸಿ ಅತಿವೃಷ್ಠಿ ಹಾಗೂ ನೆರೆಯಿಂದ ಹಾನಿಯಾದ ಪ್ರದೇಶಗಳನ್ನು ಪರಿಶೀಲಿಸಿ ತೆರಳಿದೆ ಎಂದು ತಿಳಿಸಿದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ನೆರೆಯಿಂದ ಹಾನಿಯಾಗಿರುವ ಜಿಲ್ಲೆಯ 20 ರಿಂದ 25 ಹಳ್ಳಿಗಳನ್ನು ಶಾಶ್ವತ ಸ್ಥಳಾಂತರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಅವರು ಪರಿಶೀಲನೆಯಲ್ಲಿ ಭಾಗವಹಿಸಿದ್ದಾರೆ. ಸ್ಥಳಾಂತರಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್, ಶಾಸಕರಾದ ಸಿ.ಎಂ.ಉದಾಸಿ, ನೆಹರು ಓಲೇಕಾರ, ಜಿ.ಪಂ ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ, ಉಪಾಧ್ಯಕ್ಷರಾದ ಗಿರಿಜವ್ವ ಬ್ಯಾಲದಹಳ್ಳಿ,  ಜಿಲ್ಲಾಧಿಕಾರಿ ಕೃಷ್ಣಾ ಬಾಜಪೇಯಿ ಸೇರಿದಂತೆ ಜಿ.ಪಂ, ತಾ.ಪಂ ಸದಸ್ಯರು ಇತರೆ ಅಧಿಕಾರಿಗಳು ಇದ್ದರು.