ನೆರೆಹಾನಿ ಕೇಂದ್ರಕ್ಕೆ ನಾಳೆ ವರದಿ : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

????????????????????????????????????

Share

ಹಾವೇರಿ: ಅತಿವೃಷ್ಠಿ ಹಾಗೂ ನೆರೆಯಿಂದಾಗಿ ರಾಜ್ಯದಲ್ಲಿ ಅಂದಾಜು 32 ಸಾವಿರ ಕೋಟಿ ರೂ. ನಷ್ಟವಾಗಿದ್ದು, ನಾಳೆ ಕೇಂದ್ರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದರು.

ಹಾವೇರಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಜಿಲ್ಲೆಯ ನೆರೆ ಹಾಗೂ ಅತಿವೃಷ್ಠಿ ಹಾನಿ ಕುರಿತಂತೆ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಅಭಿವೃದ್ಧಿ ಕಾರ್ಯಕ್ಕೆ ಅನುದಾನ ಬಿಡುಗಡೆ ಮಾಡುವುದು ತಡವಾದರೂ ನೆರೆ ಪರಿಹಾರ ಕಾರ್ಯಕ್ಕೆ ಯಾವುದೇ ತೊಂದರೆಯಾಗದಂತೆ ಅನುದಾನ ಒದಗಿಸಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಉಂಟಾಗಿದ್ದ ಸತತ ಬರಗಾಲದ ನಿರ್ವಹಣೆಯ ಚಿಂತನೆಯಲ್ಲಿ ರಾಜ್ಯ ಸರ್ಕಾರ ಇರುವಾಗಲೇ ಅತಿವೃಷ್ಠಿ ಎದುರಾಗಿದೆ. ಪ್ರವಾಹದಿಂದ ಅಪಾರವಾದ ಹಾನಿಯಾಗಿದ್ದು, ಪ್ರಧಾನಮಂತ್ರಿ ಮೋದಿ ಅವರು ಅತಿವೃಷ್ಠಿ ಪರಿಹಾರ ಕೈಗೊಳ್ಳಬಹುದು, ಯಾವುದೇ ತೊಂದರೆ ಇಲ್ಲ. ಆದರೆ ಬರಹ ಎದುರಿಸುವುದು ಕಷ್ಟ. ಮಳೆಯಿಂದ ರಾಜ್ಯದ ಎಲ್ಲ ಜಲಾಶಯಗಳು ತುಂಬಿವೆ.  ಜನರು ಬರದ ಸಮಸ್ಯೆಯಿಂದ ಪಾರಾಗಿದ್ದಾರೆ ಎಂದು ಹೇಳಿದರು.

ತುರ್ತು ಪರಿಹಾರವಾಗಿ ಸಂತ್ರಸ್ತರಿಗೆ 10 ಸಾವಿರ ರೂ. ಪರಿಹಾರ ನೀಡುವ ಕಾರ್ಯ ಶೇ.93ರಷ್ಟು ಪೂರ್ಣಗೊಂಡಿದೆ. ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಆದ್ಯತೆ ನೀಡಬೇಕಾಗಿದೆ. ಸಂತ್ರಸ್ತರಿಗೆ ಮನೆ ನಿರ್ಮಾಣ ಹಾಗೂ ಬೆಳೆಹಾನಿ ಪರಿಹಾರ, ಮೂಲ ಸೌಕರ್ಯಗಳ ಪುನರ್ ಸ್ಥಾಪನೆಗೆ ಅಗತ್ಯವಾದ ಎಲ್ಲ ಅನುದಾನವನ್ನು ಒದಗಿಸಲಾಗುವುದು. ಇತರ ಕೆಲಸಗಳಿಗಿಂತ ಪರಿಹಾರ, ಪುನರ್ ವಸತಿ  ಕಾರ್ಯಕ್ಕೆ ಆದ್ಯತೆ ನೀಡಿ ಸಂತ್ರಸ್ತರ ಮತ್ತು ರೈತರ ಮಧ್ಯ ಉತ್ತಮ ಸಂಬಂಧ ಇಟ್ಟುಕೊಂಡು ಮಾನವೀಯ ದೃಷ್ಟಿಯಿಂದ ಅಧಿಕಾರಿಗಳು ಕೆಲಸಮಾಡಬೇಕಾಗಿದೆ. ನೆರೆ ಸಂದರ್ಭದಲ್ಲಿ ಅಧಿಕಾರಿಗಳು ಶಕ್ತಿಮೀರಿ ಹಗಲುರಾತ್ರಿ ಕೆಲಸ ಮಾಡಿದ್ದಾರೆ. ಎಲ್ಲ ಅಧಿಕಾರಿಗಳನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.

ಶಾಲಾ ಮಕ್ಕಳ ಶೈಕ್ಷಣಿಕ ದೃಷ್ಟಿಯಿಂದ ಶಾಲೆಗಳ ಕಟ್ಟಡ ದುರಸ್ಥಿ, ಪುನರ್ ನಿರ್ಮಾನ ಕಾರ್ಯವನ್ನು ಕೈಗೊಳ್ಳಬೇಕು ಹಾಗೂ ಸಂತ್ರಸ್ತರ ಮನೆ ನಿರ್ಮಾಣಕ್ಕೂ ಆದ್ಯತೆ ನೀಡಬೇಕು. ಈಗಾಗಲೇ ಜಿಲ್ಲೆಗೆ 20 ಕೋಟಿ ರೂ. ಹೆಚ್ಚುವರಿ ಅನುದಾನ ಒದಗಿಸಲಾಗಿದೆ. ಪರಿಹಾರ ಮತ್ತು ಪುನರ್ ವಸತಿಗೆ ಅನುದಾನ ಕೊರೆತ ಇಲ್ಲ. ಎಷ್ಟು ಅನುದಾನ ಬೇಕೋ ಅಷ್ಟು ಅನುದಾನವನ್ನು ನೀಡಲಾಗುವುದು ಎಂದು ಹೇಳಿದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಮನವಿ ಮಾಡಿಕೊಂಡು ನೆರೆಯಿಂದ ಪದೆ ಪದೇ ಸಮಸ್ಯೆ ಎದುರಿಸುತ್ತಿರುವ 19 ಗ್ರಾಮಗಳನ್ನು ಶಾಶ್ವತವಾಗಿ ಸ್ಥಳಾಂತರಿಸಬೇಕಾಗಿದೆ ಹಾಗೂ ವರದಾ ನದಿ ದಡದ 19 ಗ್ರಾಮಗಳಲ್ಲಿ ತಡೆಗೋಡೆ ನಿರ್ಮಿಸಬೇಕಾಗಿದೆ. ಮನೆ ನಿರ್ಮಾಣ, ದುರಸ್ಥಿ, ಬೆಳೆಹಾನಿ ಹಾಗೂ ಮೂಲ ಸೌಕರ್ಯಗಳಿಗೆ ಅಗತ್ಯ ಅನುದಾನ ಒದಗಿಸುವಂತೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿದರು. ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಜಿಲ್ಲೆಯ ಅತಿವೃಷ್ಠಿ ಹಾಗೂ ನೆರೆ ಹಾವಳಿಯ ವಿವರವನ್ನು ಸಭೆಗೆ ಮಂಡಿಸಿದರು.

ಕಂದಾಯ ಸಚಿವ ಆರ್.ಅಶೋಕ್, ಶಾಸಕರುಗಳಾದ ಸಿ.ಎಂ.ಉದಾಸಿ. ನೆಹರು ಓಲೇಕಾರ, ವಿರುಪಾಕ್ಷಪ್ಪ ಬಳ್ಳಾರಿ, ಜಿ.ಪಂ.ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ, ಉಪಾಧ್ಯಕ್ಷೆ ಗಿರಿಜವ್ವ ಬ್ಯಾಲದಹಳ್ಳಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ವಿಶಾಲ್ ಇತರರು ಇದ್ದರು.