ಜಿಲ್ಲೆಯಾದ್ಯಂತ ಜ. 19 ರಿಂದ 22ರವರೆಗೆ ಪಲ್ಸ್ ಪೋಲಿಯೋ ಕಾರ್ಯಕ್ರಮ

Share

ಹಾವೇರಿ: ಜಿಲ್ಲೆಯಾದ್ಯಂತ ಜನವರಿ 19ರ ಭಾನುವಾರ ಜಿಲ್ಲೆಯಾದ್ಯಂತ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಯಾವುದೇ ಮಗು ಪೋಲಿಯೋ ಹನಿಯಿಂದ ಹೊರ ಉಳಿಯದಂತೆ ವ್ಯವಸ್ಥಿತವಾಗಿ ಪಲ್ಸ್ ಪೋಲಿಯೋ ಕಾರ್ಯಕ್ರಮ ಯಶಸ್ವಿಗೊಳಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜರುಗಿದ ಪಲ್ಸ್ ಪೋಲಿಯೋ ಕಾರ್ಯಕ್ರಮದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜನವರಿ 19 ರಂದು ಬೂತ್ ಮಟ್ಟದಲ್ಲಿ ಹಾಗೂ ಜನವರಿ 20,21 ಹಾಗೂ 22 ರಂದು ಮನೆ ಮನೆಗೆ ಭೇಟಿ ನೀಡಿ ಪೋಲಿಯೋ ಹನಿ ಹಾಕಲಾಗುವುದು. ಜಿಲ್ಲೆಯ ಸೊನ್ನೆಯಿಂದ 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪೋಲಿಯೋ ಹನಿ ಹಾಕಲಾಗುವುದು. ಎಲ್ಲ ಮಕ್ಕಳಿಗೂ ಪೋಲಿಯೋ ಹನಿ ಹಾಕಿಸುವಂತೆ ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಜಿಲ್ಲೆಯ ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿದ್ದಾರೆ.

ಪಲ್ಸ್ ಪೋಲಿಯೋ ಕಾರ್ಯಕ್ರಮದ ಕುರಿತು ಶಾಲಾ ಮಕ್ಕಳಿಂದ ಜಾಥಾ ಆಯೋಜಿಸಿ ಜಾಗೃತಿ ಮೂಡಿಸಬೇಕು ಹಾಗೂ ಐದುವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿ ಹಾಕಿಸುವಂತೆ ತಿಳುವಳಿಕೆ ನೀಡಬೇಕು. ಯಾವುದೇ ವದಂತಿಗಳಿಗೆ ಕಿವಿಕೊಡದಂತೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಪಲ್ಸ್ ಪೋಲಿಯೋಕ್ಕೆ ಯಾವುದೇ ವಿದ್ಯುತ್ ವ್ಯತ್ಯಯವಾಗದಂತೆ ಕ್ರಮವಹಿಸಬೇಕು, ಸಂತೆ, ಜಾತ್ರೆ ಹಾಗೂ ಬಸ್ ನಿಲ್ದಾಣಗಳಲ್ಲಿ ಪಲ್ಸ್ ಪೋಲಿಯೋಕ್ಕೆ ಯಾವುದೇ ಅಡಚಣೆಯಾಗದಂತೆ ಪೊಲೀಸ್ ಇಲಾಖೆ ಸಹಕರಿಸುವಂತೆ ನಿರ್ದೇಶನ ನೀಡಿದರು.

ಪಂಚಾಯತ್ ರಾಜ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ನಗರಸಭೆ, ಪಟ್ಟಣ ಪಂಚಾಯತ್, ರೋಟರಿ ಹಾಗೂ ಇತರೆ ಸಂಘ ಸಂಸ್ಥೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದರು.

ಶಿಕ್ಷಕರು ಸಕ್ರಿಯವಾಗಿ ಭಾಗವಹಿಸಬೇಕು, ಪೋಲಿಯೋ ದಿನ ಎಲ್ಲ ಶಾಲೆಗಳನ್ನು ತೆರೆದಿರಬೇಕು. ಪಟ್ಟಣಗಳಲ್ಲಿ ಧ್ವನಿವರ್ಧಕಗಳ ಮೂಲಕ ಜಾಗೃತಿ ಮೂಡಿಸಬೇಕು. ಗ್ರಾಮ ಮತ್ತು ನಗರ ಪ್ರದೇಶಗಳಲ್ಲಿ ಮಕ್ಕಳು ಪೋಲಿಯೋ ಹನಿ ಹಾಕಿಸುವಂತೆ ಸಂಬಂಧಿಸಿದ ಅಧಿಕಾರಿಗಳು ಜಾಗೃತಿ ಮೂಡಿಸಬೇಕು ಎಂದು ಸೂಚನೆ ನೀಡಿದರು.

ಆರ್.ಸಿ.ಎಚ್.ಅಧಿಕಾರಿ ಡಾ.ಜಯಾನಂದ ಅವರು ಮಾತನಾಡಿ, ಜನವರಿ 19 ರಂದು ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ನಡೆಯಲಿದೆ. ಜಿಲ್ಲೆಯಾದ್ಯಂತ 0-5 ವರ್ಷದೊಳಗಿ£ 1,68,040 ಮಕ್ಕಳನ್ನು ಗುರುತಿಸಲಾಗಿದೆ. ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ 894 ಬೂತ್‍ಗಳು, ಏಳು ಮೊಬೈಲ್ ಬೂತ್, 29 ಸಾಗಣೆ ಬೂತ್ ಸೇರಿ 930 ಬೂತ್‍ಗಳನ್ನು ರಚಿಸಲಾಗಿದೆ. 186 ಮೇಲ್ವಿಚಾರಕರು, 1860 ವ್ಯಾಕ್ಸಿನೇಟರ್, 236 ಕಿರಿಯ ಆರೋಗ್ಯ ಸಹಾಯಕರು, 1466 ಆಶಾ ಹಾಗೂ 1918 ಅಂಗನವಾಡಿ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ. ಹಾವೇರಿ ತಾಲೂಕಿಗೆ 16, ಬ್ಯಾಡಗಿಗೆ ಎಂಟು, ರಾಣೇಬೆನ್ನೂರ ತಾಲೂಕಿಗೆ 20, ಹಿರೇಕೆರೂರು ತಾಲೂಕಿಗೆ 14, ಸವಣೂರ ತಾಲೂಕಿಗೆ ಒಂಭತ್ತು, ಶಿಗ್ಗಾಂವ ತಾಲೂಕಿಗೆ 11 ಹಾಗೂ ಹಾನಗಲ್ ತಾಲೂಕಿಗೆ 15 ಸೇರಿ 93 ವಾಹನಗಳನ್ನು ಪಲ್ಸ್ ಕಾರ್ಯಕ್ರಮಕ್ಕೆ ಅಗತ್ಯವಾಗಿದೆ. ಈಗಾಗಲೇ ಪೊಲೀಯೋ ವ್ಯಾಕ್ಸಿನ್‍ಗಳನ್ನು ಈಗಾಗಲೇ ಅಗತ್ಯ ದಾಸ್ತಾನು ಮಾಡಿಕೊಳ್ಳಲಾಗಿದೆ. ಜಿಲ್ಲೆಯ 90 ಕೇಂದ್ರಗಳಲ್ಲಿ ವ್ಯಾಕ್ಸಿನ್‍ಗಳನ್ನು ವಿತರಿಸಿ ದಾಸ್ತಾನುಮಾಡಿಕೊಳ್ಳಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ನಾಗರಾಜ ನಾಯಕ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ, ವಿವಿಧ ಆರೋಗ್ಯ ಇಲಾಖಾ ಅಧಿಕಾರಿಗಳು, ವೈದ್ಯರು, ನಗರ ಸ್ಥಳೀಯ ಮತ್ತು ಗ್ರಾಮೀಣ ಸಂಸ್ಥೆಗಳ ಅಧಿಕಾರಿಗಳು, ತಹಶೀಲ್ದಾರಗಳು ಉಪಸ್ಥಿತರಿದ್ದರು.