ಜಿಲ್ಲೆಯ ಮೂರು ಕೇಂದ್ರಗಳಲ್ಲಿ ಬೆಂಬಲ ಬೆಲೆ ಭತ್ತ ಖರೀದಿ ಆರಂಭ

Share

ಹಾವೇರಿ: ಪ್ರಸಕ್ತ ಸಾಲಿನ ಮುಂಗಾರು ಋತುವಿನಲ್ಲಿ ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ಹಾನಗಲ್, ಹಿರೇಕೆರೂರು ಹಾಗೂ ಶಿಗ್ಗಾಂವ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಬೆಂಬಲ ಬೆಲೆ ಭತ್ತ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ತೆರೆಯಲಾದ ಭತ್ತ ಖರೀದಿ ಕೇಂದ್ರಗಳಲ್ಲಿ, ರೈತರು ಆನ್‍ಲೈನ್ ವ್ಯವಸ್ಥೆ ಮುಖಾಂತರ ನೋಂದಾಯಿಸಿಕೊಳ್ಳಲು ಕೃಷಿ ಇಲಾಖೆಯಿಂದ ನೀಡಿರುವ “ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ(ಪ್ರೂಟ್ಸ್) Farmer Registration and Unified Benificiary Information System (FRUITS)” ಗುರುತಿನ ಸಂಖ್ಯೆಯೊಂದಿಗೆ ನೋಂದಣಿ ಕೇಂದ್ರಕ್ಕೆ ಬಂದು ನೋಂದಣಿ ಮಾಡಿಸಿಕೊಳ್ಳಬೇಕು. ಅಂದರೆ ರೈತರು ಬೇರಾವುದೇ ದಾಖಲೆಗಳನ್ನು ತರುವ ಅಗತ್ಯವಿರುವುದಿಲ್ಲ ಎಂದು ತಿಳಿಸಿದ್ದಾರೆ.

ರೈತರ ‘ಪ್ರೂಟ್ಸ್’ ಗುರುತಿನ ಸಂಖ್ಯೆಯನ್ನು ನೀಡಿದಾಗ ರೈತರ ಹೆಸರು, ಜಮೀನಿನ ವಿವರ ಮತ್ತು ರೈತರು ಈ ಸಾಲಿನಲ್ಲಿ ಬೆಳೆದಿರುವ ಬೆಳೆ ವಿವರ ಕೂಡ ‘ಪ್ರೂಟ್ಸ್’ ದತ್ತಾಂಶದಿಂದ ತೋರ್ಪಡಿಸುತ್ತದೆ. ಹೀಗೆ ರೈತರ ಗುರುತು ಮತ್ತು ಅವರು ಬೆಳೆದಿರುವ ಬೆಳೆಯ ಪ್ರಮಾಣದ ಬಗ್ಗೆ ಕೂಡಾ ಆನ್‍ಲೈನ್ ಮಾಹಿತಿಯಿಂದಲೇ ಖಾತ್ರಿಪಡಿಸಲಾಗುವುದು. ಹಾಗಾಗಿ ರೈತರು ಬೆಂಬಲ ಬೆಲೆ ಯೋಜನೆಗಾಗಿ ಯಾವುದೇ ಪ್ರತ್ಯೇಕ ನೋಂದಣಿ ಮಾಡಲಾಗುವುದಿಲ್ಲ, ಕೇವಲ ರೈತರ ‘ಪ್ರೂಟ್ಸ್’ ದತ್ತಾಂಶದಿಂದ ದಾಖಲೆಯನ್ನು ಪಡೆದು ಭತ್ತ ಖರೀದಿಯನ್ನು ಮಾಡಲಾಗುವುದು. ಜಿಲ್ಲೆಯ ಸಣ್ಣ ಮತ್ತು ಅತೀ ಸಣ್ಣ ರೈತರಿಂದ ಉತ್ಪಾದನೆ ಅನುಗುಣವಾಗಿ ಗರಿಷ್ಠ 40 ಕ್ವಿಂ. ಮೀರದಂತೆ (ಪ್ರತಿ ಎಕೆರೆಗೆ 16 ಕ್ವಿಂ. ನಂತೆ) ಖರೀದಿಸಲಾಗುವುದು.

ರೈತರು ತಮ್ಮ ‘ಪ್ರೂಟ್ಸ್’ ಗುರುತಿನ ಸಂಖ್ಯೆಯೊಂದಿಗೆ ನೋಂದಾಯಿಸಿದ ನಂತರ ತಾವು ಬೆಳೆದ ಭತ್ತದ ಮಾದರಿಯೊಂದಿಗೆ ಬಂದು ತಾವು ಖರೀದಿಗೆ ನೀಡಬಹುದಾದ ದಿನಾಂಕ ಮತ್ತು ನಿಯೋಜಿಸಿರುವ ಅಕ್ಕಿ ಗಿರಣಿಯ ವಿವರಗಳನ್ನು ಪಡೆದು, ನಿಗದಿಪಡಿಸುವ ದಿನಾಂಕದಂದು ಭತ್ತವನ್ನು ಅಕ್ಕಿ ಗಿರಣಿಗೆ ರೈತರು ಖುದ್ದು ಸಾಗಾಣಿಕೆ ಮಾಡಿ, ನಂತರ ಅಕ್ಕಿ ಗಿರಣಿ ಮಾಲೀಕರಿಂದ ಭತ್ತದ ಸ್ವೀಕೃತಿಯನ್ನು ಪಡೆಯುವುದು. ರೈತರು ಖರೀದಿ ಕೇಂದ್ರದಲ್ಲಿ ದಾಸ್ತಾನಿನ ಮಾದರಿಯನ್ನು ತೋರಿಸಿ, ಅದರಂತೆಯೇ ಅದರ ಗುಣಮಟ್ಟವನ್ನು ನೋಡಿ ರೈತರಿಗೆ ಒಟ್ಟು ದಾಸ್ತಾನನ್ನು ತರಬೇಕಾದ ದಿನಾಂಕ, ಭತ್ತ ಸರಬರಾಜು ಮಾಡಬೇಕಾದ ಅಕ್ಕಿ ಗಿರಣಿಯ ಬಗ್ಗೆ ಮಾಹಿತಿಯನ್ನು ನೀಡಲಾಗುವುದು. ಈ ಮಾಹಿತಿಯಂತೆ ರೈತರು ತರುವ ಭತ್ತವನ್ನು ಸಂಪೂರ್ಣ ದಾಸ್ತಾನನ್ನು ಪರಿಶೀಲನೆಗೆ ಒಳಪಡಿಸಿ, ಅದು ನಿಗದಿತ ಗುಣಮಟ್ಟದ ಮಿತಿಯಲ್ಲಿದ್ದರೆ ಮಾತ್ರ ಖರೀದಿಸಲಾಗುವುದು.

ರೈತರು ತಮ್ಮ ಭತ್ತವನ್ನು ಖರೀದಿ ಕೇಂದ್ರಗಳಲ್ಲಿ ಮೊದಲು ಯಾರು ಬರುವರೋ ಅವರಿಗೆ ಆದ್ಯತೆ ಮೇರೆಗೆ ಖರೀದಿಸಲಾಗುವುದು. ಭತ್ತ ಖರೀದಿ ಏಜೆನ್ಸಿಯವರಾದ ಜಿಲ್ಲಾ ವ್ಯವಸ್ಥಾಪಕರು, ಕೆಎಫ್‍ಸಿಎಸ್‍ಸಿ, ಹಾವೇರಿ ಇವರಿಂದ ಭತ್ತ ಖರೀದಿ ಬಾಬ್ತು ಹಣವನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಸಂದಾಯ ಮಾಡಲಾಗುವುದು. ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆ ಅಡಿ ತೆರೆಯಲಾಗಿರುವ ತಾಲೂಕುಗಳ ಭತ್ತ ಖರೀದಿ ಕೇಂದ್ರಗಳಲ್ಲಿ, ರೈತರ ನೋಂದಣಿಯನ್ನು “ಪ್ರೂಟ್ಸ್” ಗುರುತಿನ ಸಂಖ್ಯೆಯೊಂದಿಗೆ ನೋಂದಣಿ ಮಾಡಿಸಿಕೊಂಡು, ನಂತರ ತಮ್ಮ ಭತ್ತವನ್ನು ಸಂಬಂಧಪಟ್ಟ ಅಕ್ಕಿ ಗಿರಣಿಗಳಿಗೆ ಸರಬರಾಜು ಮಾಡಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.