ಖಾಸಗಿ ಕ್ಲಿನಿಕ್ ತೆರೆಯದ ವೈದ್ಯೆರ ಪರವಾನಿಗೆ ರದ್ದು: ಕೃಷಿ ಸಚಿವ ಬಿ.ಸಿ.ಪಾಟೀಲ

Share

ಹಾವೇರಿ: ಕೋರೋನಾದಂತಹ ಮಾರಕ ರೋಗ ಹರಡಿಸುವ ಪ್ರಸಕ್ತ ಸಂದರ್ಭದಲ್ಲಿ ಸರ್ಕಾರಿ ವೈದ್ಯರ ಮಾದರಿಯಲ್ಲಿ ಖಾಸಗಿ ವೈದ್ಯರು ಕ್ಲಿನಿಕ್‍ಗಳನ್ನು ತೆರೆದು ಸಾರ್ವಜನಿಕರಿಗೆ ಸೇವೆ ನೀಡಬೇಕು ಎಂದು ಕೃಷಿ ಸಚಿವರಾದ ಬಿ.ಸಿ. ಪಾಟೀಲ ಅವರು ಮನವಿ ಮಾಡಿಕೊಂಡಿದ್ದಾರೆ.

ಸೋಮವಾರ ಹಾವೇರಿ ನಗರಸಭೆ ಸಭಾಂಗಣದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಖಾಸಗಿ ಕ್ಲಿನಿಕ್‍ಗಳು ಹಾಗೂ ಮೆಡಿಕಲ್ ಶಾಪ್‍ಗಳು ತೆರೆದಿರಬೇಕು. ಒಂದೊಮ್ಮೆ ಖಾಸಗಿ ವೈದ್ಯರು ಕ್ಲಿನಿಕ್‍ಗಳನ್ನು ತೆರೆದು ಸೇವೆಗೆ ಮುಂದಾಗದಿದ್ದರೆ ಅಂತವರ ಮೇಲೆ ಕ್ರಮವಹಿಸಲಾಗುವುದು. ಕ್ಲಿನಿಕ್‍ಗಳಿಗೆ ನೀಡಿದ ಲೈಸನ್ಸ್ ಸಹ ರದ್ದು ಪಡಿಸಲಾಗುವುದು. ಈ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು ಎಂದು ತಿಳಿಸಿದರು.

ದೇಶದಲ್ಲಿ ಈಗಾಗಲೇ ಕೋವಿಡ್-19 ಸೋಂಕಿನ ಒಂದು ಸಾವಿರ ಪ್ರಕರಣಗಳು ದಾಟಿವೆ. ಅದೃಷ್ಟವಶಾತ ಹಾವೇರಿ ಜಿಲ್ಲೆಯಲ್ಲಿ ಯಾವುದೇ ಪ್ರಕರಣಗಳು ಕಂಡುಬಂದಿಲ್ಲ. ಈಗಾಗಲೇ ವಿದೇಶದಲ್ಲಿರುವ ಜಿಲ್ಲೆಯ ಪ್ರಜೆಗಳು ಬಂದಾಗಿದೆ. ಬೇರೆ ರಾಜ್ಯ ಮತ್ತು ದೇಶದಿಂದ ಬಂದವರನ್ನು ತಪಾಸಣೆಗೆ ಒಳಪಡಿಸಿ ಗೃಹಪ್ರತ್ಯೇಕತೆಯಲ್ಲಿ ಇರಿಸಲಾಗಿದೆ. ನಿತ್ಯವೂ ಇವರಮೇಲೆ ವೈದ್ಯಕೀಯ ನಿಗಾವಹಿಸಲಾಗಿದೆ. ಈಗಾಗಲೇ ಜಾರಿಗೊಳಿಸಲಾದ ಕಫ್ರ್ಯೂ ಅವಧಿಯಲ್ಲಿ ಜಿಲ್ಲೆಯ ಜನತೆ ಸಂಯಮದಿಂದ ವರ್ತಿಸಬೇಕು. ಮನೆಯಿಂದ ಹೊರಬರದೆ ಮನೆಯೊಳಗೆ ಇರಬೇಕು. ಇಡಿ ಜಗತ್ತಿಗೆ ಕಷ್ಟಬಂದಿದೆ. ನಮ್ಮ ದೈನಂದಿನ ಚಟುವಟಿಕೆಗೆ ಕೊಂಚ ಕಷ್ಟವಾಗಿರಬಹುದು. ಆದರೆ ಇದನ್ನು ಸಹಿಸಿಕೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳ ಪರಿಸ್ಥಿತಿ ಗಂಭೀರವಾಗಲಿದೆ. ಇದನ್ನು ಅರ್ಥಮಾಡಿಕೊಂಡು ಎಲ್ಲರೂ ಮನೆಯೊಳಗಿರಬೇಕು, ಸಾಮಾಜಿಕ ಅಂತರವೇ ಕರೋನಾ ನಿರ್ಮೂಲನೆಗೆ ಔಷಧವಾಗಿದೆ ಎಲ್ಲರೂ ಸಹಕರಿಸಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿಕೊಂಡರು.

ಜನವರಿಗೆ ಅತ್ಯವಶಕವಾದ ಆಹಾರ. ನೀರು, ಹಾಲು, ತರಕಾರಿಯನ್ನು ಪೂರೈಸಲು ಎಲ್ಲ ಕ್ರಮವಹಿಸಲಾಗಿದೆ. ಕಿರಾಣಿ ಅಂಗಡಿಗಳನ್ನು ತೆರೆದಿಡಲು ಸೂಚಿಸಲಾಗಿದೆ. ತಳ್ಳುಗಾಡಿಯ ಮೂಲಕ ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಪರಿಸ್ಥಿತಿಯನ್ನು ದುರ್ಬಳಕೆಮಾಡಿಕೊಂಡು ಕಿರಾಣಿ ಸಾಮಗ್ರಿದರ, ತರಕಾರಿ ದರಗಳನ್ನು ದುಪ್ಪಟ್ಟು ಮಾಡಿದರೆ ಅಂತಹವರ ಮೇಲೆ ಕಠಿಣ ಕ್ರಮವಹಿಸಲಾಗುವುದು. ಕಿರಾಣಿ ಮತ್ತು ತರಕಾರಿಯ ಮಾರಾಟ ದರದ ಫಲಕವನ್ನು ಪ್ರತಿ ಅಂಗಡಿ, ತಳ್ಳುಗಾಡಿಗಳಲ್ಲಿ ಪ್ರದರ್ಶನಮಾಡಬೇಕು. ರೈತರಿಂದ ಖರೀದಿಮಾಡಿದ ದರದ ಮೇಲೆ ಗರಿಷ್ಠ ಐದು ರೂ.ವರೆಗೆ ಲಾಭ ಇಟ್ಟುಕೊಂಡು ವ್ಯಾಪಾರಮಾಡಬೇಕು. ಇಲ್ಲವಾದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಕೃಷಿ ಚಟುವಟಿಕೆಗೆ ಯಾವುದೇ ನಿರ್ಭಂಧವಿರುವುದಿಲ್ಲ. ಕಟಾವು, ಒಕ್ಕಲುತನ, ಉಳಿಮೆ, ಇತರ ಚಟುವಟಿಕೆ ಸಂದರ್ಭದಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ರೈತ ಬೆಳೆದ ಹಣ್ಣು,ತರಕಾರಿ ಅಗತ್ಯ ಬೆಳೆಕಾಳುಗಳ ಮಾರಾಟಕ್ಕೆ ಯಾವುದೇ ನಿರ್ಭಂಧವಿರುವುದಿಲ್ಲ. ಕೃಷಿ ಯಂತ್ರಗಳ ಬಳಕೆಗೆ ಬೇಕಾದ ಇಂಧನವನ್ನು ಪೂರೈಸಲ ಕ್ರಮವಹಿಸಲಾಗುವುದು. ಪ್ರತಿ ತಾಲೂಕಿನಲ್ಲಿ ಸಹಾಯಕ ಕೃಷಿ ನಿರ್ದೇಶಕರು, ತೋಟಗಾರಿಕಾ ಸಹಾಯಕ ನಿರ್ದೇಶಕರು, ಎ.ಪಿ.ಎಂ.ಸಿ.ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ ಪರವಾನಿಗೆ ನೀಡಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಖರೀದಿಗೆ ಕ್ರಮ: ಮಾಸ್ಕ್, ವೆಂಟಿಲೇಟರ್, ಹ್ಯಾಂಡ್ ಗ್ಲೌಸ್, ಸ್ಯಾನಿಟೈಸರ್ ಹಾಗೂ ಕೋವಿಡ್-19 ವೈದ್ಯಕೀಯ ಕಿಟ್ ಸೇರಿದಂತೆ ಅಗತ್ಯ ಉಪಕರಣಗಳ ಖರೀದಿಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಸದ್ಯದಲ್ಲೆ ಪೂರೈಕೆಯಾಗಲಿವೆ.

ಹೋಟೆಲ್ ತೆರೆಸಿ: ಹೋಟೆಲ್ ಮಾಲಿಕರನ್ನು ಕರೆಸಿ ಕೆಲವು ಹೋಟೆಲ್‍ಗಳನ್ನು ಆರಂಭಿಸಿ ಪಾರ್ಸ್‍ಲ್ ವ್ಯವಸ್ಥೆ ನೀಡಲು ಸೂಚನೆ ನೀಡಿ. ಇದೇ ಮಾದರಿಯಲ್ಲಿ ಈಗಾಗಲೇ ಸರ್ಕಾರ ಮಾರ್ಗದರ್ಶನ ನೀಡಿದಂತೆ ರಾಜ್ಯ ಹೆದ್ದಾರಿಗಳ ಡಾಬಾಗಳನ್ನು ಆರಂಭಿಸಲು ಕ್ರಮವಹಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು ಎಂದು ತಿಳಿಸಿದರು.

ಕಠಿಣ ಕ್ರಮ: ಅತ್ಯಂತ ಅಗತ್ಯ ಸಂದರ್ಭದಲ್ಲಿ ಹೊರಬನ್ನಿ. ಅನಗತ್ಯವಾಗಿ ಬೀದಿಯಲ್ಲಿ ಸುತ್ತಾಡಿದರೆ ಕಠಿಣ ಕ್ರಮಕೈಗೊಳ್ಳುವುದು ಅನಿವಾರ್ಯ ಎಂದು ಈ ಸಂದರ್ಭದಲ್ಲಿ ಎಚ್ಚರಿಸಿದರು.

ಅಭಿನಂದನೆ: ಜಿಲ್ಲೆಯಲ್ಲಿ ಕರೋನಾ ವೈರಸ್ ಹರಡದಂತೆ ಶ್ರಮಿಸುತ್ತಿರುವ ವೈದ್ಯರು, ದಾದಿಯರು, ಅರೇ ವೈದ್ಯಕೀಯ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಅಧಿಕಾರಿಗಳು ಹಾಗೂ ಜಿಲ್ಲೆಯ ಕರೋನಾ ನಿಯಂತ್ರಣ ಟಾಸ್ಕ್‍ಪೋರ್ಸ್‍ನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲರಿಗೂ ಅಭಿನಂದಿಸುತ್ತೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹಾವೇರಿ ಶಾಸಕ ನೆಹರು ಓಲೇಕಾರ, ಬ್ಯಾಡಗಿ ಶ್ಯಾಸಕ ವಿರುಪಾಕ್ಷಪ್ಪ ಬಳ್ಳಾರಿ, ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ ಉಪಸ್ಥಿತರಿದ್ದರು.