ಕೊರೋನಾ ಸೋಂಕು ತಡೆ ಹಿನ್ನೆಲೆ- ಮುಂಗಡವಾಗಿ ಎರಡು ತಿಂಗಳ ಪಡಿತರ ವಿತರಣೆ

Share

ಹಾವೇರಿ: ಕೊರೋನಾ ವೈರಸ್ ಹರಡುವಿಕೆ ತಡೆಗಟ್ಟುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಲಾಕ್‍ಡೌನ್ ಜಾರಿಯಲ್ಲಿರುವುದರಿಂದ ಜಿಲ್ಲೆಯ ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಚಿದಾರರಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅನ್ವಯ ಹಾಗೂ ಸರ್ಕಾರದ ಘೋಷಣೆಯಂತೆ ಎಪ್ರಿಲ್ ಹಾಗೂ ಮೇ ಮಾಹೆಗಳ ಎರಡು ಎರಡು ತಿಂಗಳ ಪಡಿತರ ವಸ್ತುಗಳನ್ನು ಒಟ್ಟಿಗೆ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದ್ದಾರೆ.

ಅಂತ್ಯೋದಯ ಅನ್ನ ಯೋಜನೆ ಪ್ರತಿ ಪಡಿತರ ಚೀಟಿಗೆ ಮಾಹೆಗೆ 35 ಕೆ.ಜಿಯಂತೆ ಎಪ್ರಿಲ್ ಮತ್ತು ಮೇ-2020ರ ಮಾಹೆಯ ಎರಡು ತಿಂಗಳು ಸೇರಿ 70 ಕೆ.ಜಿ.ಅಕ್ಕಿ ವಿತರಿಸಲಾಗುವುದು. ಆದ್ಯತಾ(ಬಿಪಿಎಲ್) ಪಡಿತರ ಚೀಟಿಯಲ್ಲಿರುವ ಪ್ರತಿ ಸದಸ್ಯರಿಗೆ(ಯುನಿಟ್) ಪ್ರತಿ ತಿಂಗಳಿಗೆ ಐದು ಕೆ.ಜಿ. ಅಕ್ಕಿಯಂತೆ ಎಪ್ರಿಲ್ ಹಾಗೂ ಮೇಲೆ ಮಾಹೆಯ ಎರಡು ತಿಂಗಳುಗಳ 10 ಕೆ.ಜಿ ಅಕ್ಕಿ ಹಾಗೂ ಪ್ರತಿ ತಿಂಗಳಿಗೆ ಎರಡು ಕೆ.ಜಿ.ಗೋದಿಯಂತೆ ಎರಡು ತಿಂಗಳುಗಳ ನಾಲ್ಕು ಕೆ.ಜಿ. ಗೋದಿ ವಿತರಿಸಲಾಗುವುದು.

ಜಿಲ್ಲೆಯಾದ್ಯಂತ ನ್ಯಾಯ ಬೆಲೆ ಅಂಗಡಿಕಾರರು ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9ರವರೆಗೆ (ಮಧ್ಯಾಹ್ನ 1-30 ರಿಂದ 2-30 ಗಂಟೆವರೆಗೆ ವಿರಾಮದ ಸಮಯ) ವಿತರಿಸಲು ಸೂಚಿಸಲಾಗಿದೆ. ಪ್ರತಿ ಮಂಗಳವಾರ ರಜೆಯ ದಿನ ಮತ್ತು ರಾಷ್ಟ್ರೀಯ ರಜೆಯ ದಿನಗಳನ್ನು ಹೊರತುಪಡಿಸಿ ಪಡಿತರ ವಿತರಣೆಯನ್ನು ತಿಂಗಳ ಪೂರ್ತಿ ವಿತರಣೆ, ಪ್ರತಿ ಪಡಿತರ ಚೀಟಿ ಫಲಾನುಭವಿಗಳಿಗೆ ಆಧಾರ್ ಆಧಾರಿತ ಓಟಿಪಿ ಸಂಖ್ಯೆ ಮೂಲಕ ಪಡಿತರ ಆಹಾರಧಾನ್ಯವನ್ನು ವಿತರಿಸಲು, ಪಡಿತರ ವಿತರಣೆ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನಿಗಾವಹಿಸಲು ಹಾಗೂ ಕೋವಿಡ್-19ರ ನಿಮಿತ್ಯ ಎಲ್ಲ ಮುನ್ನೆಚ್ಚರಿಕೆ ಕ್ರಮ, ಅಗತ್ಯ ಸ್ವಚ್ಛತೆಗೆ ಆದ್ಯತೆ ನೀಡುವ (ಸೋಪು, ಡೇಟಾಲ್ ಮತ್ತು ಸ್ಯಾನಿಟೈಜರ್ ಮೂಲಕ)ಪಡಿತರ ವಿತರಣೆ ಕ್ರಮಕೈಗೊಳ್ಳಲು ಸೂಚಿಸಲಾಗಿದೆ.

ಜಿಲ್ಲೆಯ ನ್ಯಾಯಬೆಲೆ ಅಂಗಡಿಕಾರರು ಸರ್ಕಾರ ನೀಡುತ್ತಿರುವ ಪಡಿತರ ವಸ್ತುಗಳನ್ನು ಹೊರತುಪಡಿಸಿ ಬೇರೆ ವಸ್ತುಗಳನ್ನು ನೀಡುವಂತಿಲ್ಲ. ಯಾವುದೇ ಕಾರಣಕ್ಕೂ ಪ್ರತಿ ಪಡಿತರ ಚೀಟಿದಾರರಿಂದ ಸಬೂಬು ಹೇಳಿ ಇಂಟರನೆಟ್ ಮತ್ತಿತರ ವೆಚ್ಚವನ್ನು ವಸೂಲಿ ಮಾಡುವಂತಿಲ್ಲ. ಒಂದು ವೇಳೆ ಈ ರೀತಿಯ ದೂರುಗಳು ದಾಖಲಾದಲ್ಲಿ ಸಂಬಂಧಪಟ್ಟ ತಾಲೂಕುಗಳ ಆಹಾರ ಕಾರ್ಯನಿರ್ವಾಹಕ ಸಿಬ್ಬಂದಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಕ್ರಮಕೈಗೊಳ್ಳಲಾಗುವುದು ಎಚ್ಚರಿಕೆ ನೀಡಿದ್ದಾರೆ.

ನ್ಯಾಯಬೆಲೆ ಅಂಗಡಿಕಾರರಿಂದ ಪಡಿತರ ಚೀಟಿದಾರರಿಗೆ ಯಾವುದೇ ತೊಂದರೆಯಾದಲ್ಲಿ 1967 ಟೋಲ್ ಫ್ರಿ ಸಂಖ್ಯೆಗೆ ಕರೆಮಾಡಿ ದೂರು ದಾಖಲಿಸಬಹುದು ಎಂದು ತಿಳಿಸಿದ್ದಾರೆ.