ಕಳಪೆ ಬೀಜ-ಲೂಸ್ ಬಿತ್ತನೆ ಬೀಜಗಳ ಮಾರಾಟ ಮಾಡುವವರ ಮೇಲೆ ಕಾನೂನು ರಿತ್ಯ ಕಠಿಣ ಕ್ರಮ

Share

ಹಾವೇರಿ: ಕಳಪೆ ಬೀಜ, ಲೂಸ್ ಬಿತ್ತನೆ ಬೀಜಗಳ ಮಾರಾಟ ಮಾಡುವವರ ಮೇಲೆ ಕಾನೂನು ರಿತ್ಯ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಅವರು ಎಚ್ಚರಿಕೆ ನೀಡಿದ್ದಾರೆ.

ಜಿಲ್ಲೆಯ ಎಲ್ಲಾ ಕೃಷಿ ಪರಿಕರ ಮಾರಾಟಗಾರರಿಗೆ ಖುಲ್ಲಾ (ಲೂಸ್) ಬೀಜಗಳನ್ನು ಮಾರಾಟ ಮಾಡದಂತೆ ಮತ್ತು ಉತ್ತಮ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳನ್ನು ನಿಗಧಿತ ದರಕ್ಕೆ ಮಾರಾಟ ಮಾಡಬೇಕು. ಕೃತಕ ಅಭಾವ ಸೃಷ್ಟಿಸದಂತೆ ಈಗಾಗಲೇ ಎಲ್ಲ ಮಾರಾಟಗಾರರಿಗೂ ನಿರ್ದೇಶನ ನೀಡಲಾಗಿದೆ. ಕಾಯ್ದೆಯನ್ವಯ ಮಾರಾಟ ಮಾಡಲು ಕಟ್ಟುನಿಟ್ಟಾಗಿ ಸೂಚಿಸಿ ತಪ್ಪಿದ್ದಲ್ಲಿ ಅಂತಹ ಮಾರಾಟಗಾರರ ಪರವಾನಿಗೆಗಳನ್ನು ರದ್ದು ಮಾಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ಮನವಿ: ಲೂಸ್ ಬಿತ್ತನೆ ಬೀಜಗಳನ್ನು ಬಿತ್ತುವುದರಿಂದ ಇಳುವರಿಯಲ್ಲಿ ನಷ್ಟ ಆಗುವುದನ್ನು ತಪ್ಪಿಸಲು ಜಿಲ್ಲೆಯ ರೈತ ಬಾಂಧವರು ಲೂಸ್ ಬೀಜಗಳನ್ನು ಖರೀದಿಸಬಾರದು. ಲೂಜ್ ಬಿತ್ತನೆ ಬೀಜ ಮಾರಾಟಗಾರರು ಕಂಡುಬಂದಲ್ಲಿ ಕೃಷಿ ಇಲಾಖೆಗೆ ದೂರು ನೀಡಬೇಕು. ಮತ್ತು ರೈತರು ಅಧಿಕೃತ ಮಾರಾಟಗಾರರಿಂದ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಖರೀದಿಸಿ ಕಡ್ಡಾಯವಾಗಿ ರಶೀದಿ ಪಡೆಯಲು ಅವರು ಸಲಹೆ ನೀಡಿದ್ದಾರೆ.

ಮೂರು ಮಾರಾಟ ಮಳಿಗೆಗಳು ಸೀಜ್: ಜಿಲ್ಲೆಯಾದ್ಯಂತ ಖುಲ್ಲಾ(ಲೂಸ್/ಕಳಪೆ) ಬಿತ್ತನೆ ಬೀಜಗಳನ್ನು ಅನಧಿಕೃತವಾಗಿ ಮಾರಾಟ ಮಾಡುತ್ತಿರುವ ಕಂಡು ಬಂದಿರುವ ಹಿನ್ನೆಲೆಯಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳ ತಂಡಗಳು ಮಾರಾಟಗಾರರ ಮಳಿಗೆಗಳ ತಪಾಸಣೆ ಕೈಗೊಂಡು ಇಲ್ಲಿಯವರೆಗೆ ಸಂಶಯಾಸ್ಪದ ಮೂರು ಮಾರಾಟ ಮಳಿಗೆಗಳನ್ನು ಸೀಜ್ ಮಾಡಿ, ಅವರ ಬೀಜ ಮಾರಾಟ ಪರವಾನಿಗೆಗಳನ್ನು ರದ್ದು ಮಾಡಲಾಗಿದೆ. ಕಾಯ್ದೆಯನ್ವಯ ವ್ಯವಹಾರ ನಿರ್ವಹಿಸದಿರುವ ಕೃಷಿ ಇಲಾಖೆಯ 20 ಕೃಷಿ ಪರಿಕರ ಮಾರಾಟ ಅಂಗಡಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕೃಷಿ ಇಲಾಖೆಯ ಜಾಗೃತ ಕೋಶ ಬೆಳಗಾವಿ ವಿಭಾಗ ಹಾಗೂ ಕೃಷಿ ಇಲಾಖೆ ಹಾವೇರಿಯ ಅಧಿಕಾರಿಗಳು ಏ.21ರಂದು ರಟ್ಟಿಹಳ್ಳಿ ತಾಲೂಕಿನ ಶಿರಗುಂಬಿ ಗ್ರಾಮದಲ್ಲಿ ಅನಧಿಕೃತವಾಗಿ ಬೀಜೋತ್ಪಾದನೆ ಮಾಡಿದ 33 ಕ್ವಿಂಟಲ್ ಬಿತ್ತನೆ ಬೀಜವನ್ನು ಸೀಜ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.