ಒಂದುವರೆ ತಿಂಗಳಲ್ಲಿ ಎಲ್ಲ ದೇವಾಲಯಗಳಿಗೆ ಆಡಳಿತಾಧಿಕಾರಿಗಳ ನೇಮಕ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Share

ಹಾವೇರಿ: ಹಿಂದು ದೇವಾಲಯಗಳ ರಕ್ಷಣೆ ಹಾಗೂ ವ್ಯವಸ್ಥಿತ ನಿರ್ವಹಣೆಗಾಗಿ ಮುಂದಿನ ಒಂದೂವರೆ ತಿಂಗಳೊಳಗಾಗಿ ರಾಜ್ಯದ ಎಲ್ಲ ದೇವಾಲಯಗಳಿಗೂ ವಿವಿಧ ಹಂತದ ಅಧಿಕಾರಿಗಳನ್ನು ಆಡಳಿತಾಧಿಕಾರಿಗಳನ್ನಾಗಿ ನೇಮಕ ಮಾಡಲಾಗುವುದು ಎಂದು ರಾಜ್ಯ ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲ್ಲಿ ಬುಧವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಧಾರ್ಮಿಕ ದತ್ತಿ ಕಾಯ್ದೆ ಅನುಸಾರ ಮುಜರಾಯಿ ಇಲಾಖೆಯಲ್ಲಿ ಎ,ಬಿ ಮತ್ತು ಸಿ ದರ್ಜೆಯ ದೇವಾಲಯಗಳಾಗಿ ವರ್ಗೀಕರಿಸಲಾಗಿದೆ. ರಾಜ್ಯದಲ್ಲಿ ಒಂದು ನೂರು ದೇವಾಲಯಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಬಿ ಮತ್ತು ಸಿ ದರ್ಜೆಯ ದೇವಾಲಯಗಳಿಗೂ ಆಡಳತಾಧಿಕಾರಿಗಳನ್ನು ನೇಮಕ ಮಾಡಲು ಚಿಂತನೆ ನಡೆಸಿದೆ ಎಂದು ಹೇಳಿದರು.

ರಾಜ್ಯದಲ್ಲಿ 34 ಸಾವಿರ ದೇವಾಲಯಗಳಿವೆ, ಈ ಪೈಕಿ ಒಂದು ನೂರು ದೇವಾಲಯಗಳಿಗೆ ವ್ಯವಸ್ಥಾಪನಾ ಸಮಿತಿ ರಚಿಸಲು ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲಾಧಿಕಾರಿಗಳ ಮೂಲಕ ವಿವರ ಸಲ್ಲಿಸಲಾಗಿದೆ. ರಾಜ್ಯದಲ್ಲಿ ಅಂದಾಜು ಒಂದು ಸಾವಿರ ಎ ಮತ್ತು ಬಿ ದರ್ಜೆಯ ದೇವಾಲಯಗಳು, ಉಳಿದಂತೆ 33 ಸಾವಿರದಷ್ಟು ಸಿ ದರ್ಜೆಯ ದೇವಾಲಯಗಳಿವೆ. ಎ ದರ್ಜೆಯ ದೇವಾಲಯಗಳಿಗೆ ಉಪ ವಿಭಾಗ ಮಟ್ಟದ ಅಧಿಕಾರಗಳನ್ನು, ಬಿ ದರ್ಜೆಯ ದೇವಾಲಯಗಳಿಗೆ ರೆವಿನ್ಯೂ ಇನ್ಸಪೆಕ್ಟರ್ ಹಾಗೂ ಸಿ ದರ್ಜೆಯ ದೇವಾಲಯಗಳಿಗೆ ಗ್ರಾಮ ಲೆಕ್ಕಾಧಿಕಾರಿಗಳನ್ನು ಆಡಳಿತಾಧಿಕಾರಿಗಳನ್ನಾಗಿ ನೇಮಕಮಾಡುವ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.

ರಾಜ್ಯದ ಒಂದು ನೂರು ಎ ದರ್ಜೆಯ ದೇವಾಲಯಗಳಲ್ಲಿ ಗೋ ರಕ್ಷಣಾ ಕೇಂದ್ರವನ್ನು ತೆರೆಯಲಾಗುವುದು. ಜಿಲ್ಲೆಯ ಜನಪ್ರತಿನಿಧಿಗಳ ಮನವಿಯ ಮೇರೆಗೆ ಹಾವೇರಿ ಜಿಲ್ಲೆಯಲ್ಲಿಯೂ ಗೋ ರಕ್ಷಣಾ ಕೇಂದ್ರವನ್ನು ತೆರೆಯಲಾಗುವುದು. ಈ ಉದ್ದೇಶಕ್ಕಾಗಿ ಹತ್ತು ಎಕರೆ ಜಮೀನು ಗುರುತಿಸಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಹಾವೇರಿ ಜಿಲ್ಲೆಯಲ್ಲಿ ಎ ದರ್ಜೆ ದೇವಾಲಯಗಳು ಇಲ್ಲದಿದ್ದರೂ ಗೋ ರಕ್ಷಣಾ ಕೇಂದ್ರವನ್ನು ತೆರೆಲಾಗುವುದು ಎಂದು ತಿಳಿಸಿದರು.