ಜಿಪಿಎಸ್ ಮಾಡಿಸಲು ಫಲಾನುಭವಿಗಳಿಗೆ ಮಾರ್ಚ್ 15ರವರೆಗೆ ಗಡುವು: ಜಿಲ್ಲಾ ಪಂಚಾಯತ್ ಸಿಇಓ ರಮೇಶ ದೇಸಾಯಿ

Share

ಹಾವೇರಿ: ಜಿಲ್ಲೆಯಲ್ಲಿ ಬಸವ ವಸತಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ ವಸತಿ ಯೋಜನೆಯಡಿ ಬ್ಲಾಕ್ಡ್ ಮನೆಗಳನ್ನು ವಿಶೇಷ ಮನವಿಯ ಮೇರೆಗೆ ತೆರವುಗೊಳಿಸಲಾಗಿದೆ. ಇದೇ ಮಾರ್ಚ್ 14ರೊಳಗಾಗಿ ಮನೆ ನಿರ್ಮಾಣ ಆರಂಭಿಸಿ ಜಿ.ಪಿ.ಎಸ್. ಮಾಡಿಸಿಕೊಳ್ಳಲು ಫಲಾನುಭವಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ದೇಸಾಯಿ ಅವರು ಮನವಿ ಮಾಡಿಕೊಂಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಮಾಧ್ಯಮಗೋಷ್ಠಿ ನಡೆಸಿದ ಅವರು ಜಿಲ್ಲೆಯಾದ್ಯಂತ 2013-14 ರಿಂದ 2017-18ರವರೆಗೆ ಬಸವತಿ ಯೋಜನೆಯಡಿ 5720, ಡಾ.ಬಿ.ಆರ್.ಅಂಬೇಡ್ಕರ ನಿವಾಸ ಯೋಜನೆಯಡಿ 3831 ಮನೆಗಳು ಸೇರಿ 9559 ಬ್ಲಾಕ್ಡ್ ಆದ ಮನೆಗಳ ಬ್ಲಾಕ್ಡ್ ತೆರವುಗೊಳಿಸಲಾಗಿದೆ. ಈ ಕುರಿತಂತೆ ಫಲಾನುಭವಿಗಳು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಮಾನ್ಯ ಸಚಿವರು ಮುಖ್ಯಮಂತ್ರಿಗಳೊಂದಿಗೆ ಚರ್ಚಿ ಸದರಿ ಬ್ಲಾಕ್ಡ್ ಮಾಡಲಾದ ಹತ್ತು ಸಾವಿರ ಮನೆಗಳ ನಿರ್ಮಾಣ ಮಾಡಿಕೊಳ್ಳಲು ವಿಶೇಷ ಅವಕಾಶ ಕಲ್ಪಿಸಿದ್ದಾರೆ ಎಂದು ತಿಳಿಸಿದರು.

ಈಗಾಗಲೇ ಮನೆ ಮಂಜೂರಾಗಿ ಬ್ಲಾಕ್ಡ್ ಆದ ಮನೆಗಳ ಫಲಾನುಭವಿಗಳು ಈಗಾಗಲೇ ಮನೆ ನಿರ್ಮಾಣ ಕಾರ್ಯ ಆರಂಭಿಸಿದಲ್ಲಿ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಜಿಪಿಎಸ್ ಮಾಡಿಸಬೇಕು. ಈವರೆಗೆ ಮನೆ ನಿರ್ಮಾಣ ಕಾರ್ಯ ಆರಂಭಿಸದ ಫಲಾನುಭವಿಗಳು ದಿನಾಂಕ 14-03-2020 ರೊಳಗಾಗಿ ತಳಪಾಯ ಹಾಕಿ ಕಡ್ಡಾಯವಾಗಿ ಜಿಪಿಎಸ್ ಮಾಡಿಸಬೇಕು. ದಿನಾಂಕ 15-03-2020ರ ನಂತರ ಜಿಪಿಎಸ್‍ಗೆ ಅಳವಡಿಸಲು ಅವಕಾಶವಿರುವುದಿಲ್ಲ. ಮಂಜೂರಾದ ಸದರಿ ಮನೆಗಳನ್ನು ಶಾಶ್ವತವಾಗಿ ಬ್ಲಾಕ್ ಮಾಡಲಾಗುತ್ತದೆ. ನಂತರದ ದಿನಗಳಲ್ಲಿ ಫಲಾನುಭವಿಗಳ ಯಾವುದೇ ಮನವಿಗಳನ್ನು ಪರಿಗಸಲಾಗುವುದಿಲ್ಲ ಹಾಗೂ ಅಂತಹ ಫಲಾನುಭವಿಗಳಿಗೆ ಮನೆ ಮಂಜೂರಾತಿ ನೀಡಲು ಸಹ ಬರುವುದಿಲ್ಲ ಎಂದು ತಿಳಿಸಿದ್ದಾರೆ.

ಬಸವ ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ 1.20 ಲಕ್ಷ ರೂ. ಹಾಗೂ ಡಾ.ಬಿ.ಆರ್.ಅಂಬೇಡ್ಕರ ವಸತಿ ಯೋಜನೆಯಡಿ 1.50 ಲಕ್ಷ ರೂ. ಸರ್ಕಾರದ ಸಹಾಯಧನ ನೀಡಲಾಗುತ್ತದೆ. ಇದರೊಂದಿಗೆ ಜಿಲ್ಲಾ ಪಂಚಾಯತ್ ವತಿಯಿಂದ ಮನರೇಗಾ ಯೋಜನೆಯಡಿ ಒಂದು ನೂರು ಮಾನವ ದಿನಗಳನ್ನು ಮನೆ ನಿರ್ಮಾಣದ ಕಾರ್ಯಕ್ಕಾಗಿ ಬಳಸಿಕೊಳ್ಳಲು ಅವಕಾಶ ಕಲ್ಪಿಸಿದೆ. ಈಗಾಗಲೇ ಬಸವ ಮತ್ತು ಅಂಬೇಡ್ಕರ ವಸತಿ ಯೋಜನೆಯಡಿ ಮನೆ ಮಂಜೂರಾಗಿ ಬ್ಲಾಕ್ಡ್ ಆದವರು ಈ ವಿಶೇಷ ಅವಕಾಶಗಳನ್ನು ಬಳಸಿಕೊಂಡು ಮನೆ ನಿರ್ಮಿಸಿಕೊಳ್ಳಬೇಕು. ನಿಗದಿತ ಕಾಲಾವಧಿಯೊಳಗೆ ಜಿ.ಪಿ.ಎಸ್. ಮಾಡಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.