ಮಕ್ಕಳ ಭಾವನೆಗೆ ಸ್ಪಂದಿಸಿ ಉತ್ತಮ ಶಿಕ್ಷಣ ಕೊಡಿಸಿ ಪಾಲಕರಿಗೆ ನ್ಯಾಯಾಧೀಶರ ಸಲಹೆ

Share

ಹಾವೇರಿ: ಮಕ್ಕಳ ಭಾವನೆಗಳಿಗೆ ಸ್ಪಂದಿಸಿ ಬಾಲ್ಯದಲ್ಲಿರುವಾಗಲೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಿ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬೆಳೆಸಿ ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ ಕಿಣಿ ಅವರು ಹೇಳಿದರು.

ನಗರದ ತಾಲೂಕಾ ಪಂಚಾಯತ್ ಸಭಾಭವನದಲ್ಲಿ ಮಂಗಳವಾರ ನಡೆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬಚಪನ್ ಬಚಾವೋ ಆಂದೋಲನ, ನ್ಯಾಯವಾದಿಗಳ ಸಂಘ, ಅಭಿಯೋಜನಾ ಇಲಾಖೆ, ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಆಶಾಕಿರಣ ರೂರಲ್ ಡೆವಲ್‍ಪಮೆಂಟ್ ಸೊಸೈಟಿ ಸಹಯೋಗದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರಿಗೆ ಬಚಪನ್ ಬಚಾವೋ ಆಂದೋಲನ ಕುರಿತು ಜಿಲ್ಲಾ ಮಟ್ಟದ ಒಂದು ದಿನದ ಕಾನೂನು ಅರಿವು ನೆರವು ಮತ್ತು ಸಾಮಥ್ರ್ಯ ಅಭಿವೃದ್ಧಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ದಿನಮಾನಗಳಲ್ಲಿ ಮಕ್ಕಳ ಶಿಕ್ಷಣಕ್ಕೆ ಪಾಲಕರು ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಒಬ್ಬಮಗುವಿನಿಂದ ಮತ್ತೊಂದು ಮಗುವಿಗೆ ಕಲಿಕಾ ಸಾಮಥ್ರ್ಯದಲ್ಲಿ, ಗ್ರಹಿಕಾ ಸಾಮಥ್ರ್ಯದಲ್ಲಿ ವ್ಯತ್ಯಾಸವಿದೆ. ಪಾಲಕರು ಒಂದು ಮಗುವನ್ನು ಮತ್ತೊಂದು ಮಗುವಿಗೆ ಹೋಲಿಕೆಮಾಡಿ ಒತ್ತಡ ಹೇರಬಾರದು. ಸಾಮಥ್ರ್ಯಕ್ಕನುಗುಣವಾಗಿ ಸಹಜ ಕಲಿಕೆಗೆ ಅವಕಾಶ ಕಲ್ಪಿಸಬೇಕು. ಮಕ್ಕಳ ಭಾವನೆಗೆ ಸ್ಪಂದಿಸುವ ಮನೋಭಾವವನ್ನು ಪಾಲಕರು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬಚಪನ್ ಬಚಾವೋ ಎಂದರೇ ಮಗುವಿನ ಬಾಲ್ಯದ ರಕ್ಷಣೆ ಎಂದರ್ಥವಾಗಿದೆ. ಮಕ್ಕಳಿಗೆ ಇರುವ ನೈಸರ್ಗಿಕ ಹಕ್ಕುಗಳನ್ನು ಒದಗಿಸಿದಾಗ ಬಾಲ್ಯದ ರಕ್ಷಣೆಯಾಗಲು ಸಾಧ್ಯವಾಗುತ್ತದೆ. ಮಕ್ಕಳಿಗಿರುವ ದೈಹಿಕ ಹಾಗೂ ಮಾನಸಿಕ, ಸಾಮಾಜಿಕ, ಶೈಕ್ಷಣಿಕ, ಆರೋಗ್ಯಕ್ಕೆ ಸಂಬಂಧಿಸಿದ ಹಕ್ಕುಗಳನ್ನು ರಕ್ಷಿಸಿದಾಗ ಮಾತ್ರ ಮಗುವಿನ ಬಾಲ್ಯದ ರಕ್ಷಣೆಯಾಗುತ್ತದೆ. ನಮ್ಮ ಸಮಾಜದಲ್ಲಿ ಮಕ್ಕಳ ಬಾಲ್ಯದ ರಕ್ಷಣೆಯಾಗಬೇಕು. ಅಂದಾಗ ಮಗು ಸತ್ಪ್ರಜೆಯಾಗಬಹುದು ಎಂದು ಅಭಿಪ್ರಾಯಪಟ್ಟರು.

ಮಕ್ಕಳ ರಕ್ಷಣೆಗೆ ಹಲವು ಕಾನೂನುಗಳನ್ನು ಜಾರಿಗೊಳಿಸಿದರೂ ದೌರ್ಜನ್ಯಗಳು ಸಮಾಜದಲ್ಲಿ ಕಡಿಮೆಯಾಗಿಲ್ಲ. ಸಮಾಜದಲ್ಲಿ ಹಿಂಸಾತ್ಮಕ ಹಾಗೂ ವಿಕೃತ ಮನಸ್ಸುಗಳು ಪರಿವರ್ತನೆಗೊಂಡಾಗ ಇಂತಹ ಕೃತ್ಯಗಳು ತಡೆಗಟ್ಟಬಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಮಾತನಾಡಿ, ಪೊಲೀಸ್ ಠಾಣೆಗಳಲ್ಲಿ ಟ್ರ್ಯಾಕ್ ಮಿಸ್ಸಿಂಗ್ ಚೈಲ್ಡ್ ಎಂಬ ವೆಬ್‍ಪೋರ್ಟಲ್ ಆರಂಭಿಸಲಾಗಿದೆ. ಇದರಲ್ಲಿ ಕಾಣೆಯಾದ ಪ್ರಕರಣಗಳನ್ನು ದಾಖಲಿಸಲಾಗುತ್ತದೆ. ರೈಲ್ವೆ ಸ್ಟೇಶನ್‍ಗಳಲ್ಲಿ, ಬಸ್‍ಸ್ಟ್ಯಾಂಡ್‍ಗಳಲ್ಲಿರುವ ಅನಾಥ ಮಕ್ಕಳು, ಭೀಕ್ಷಾಟನೆ, ಕಟ್ಟಡ ಕೆಲಸ, ಹೊಟೇಲ್ ಇನ್ನಿತರ ಕಡೆಗಳಲ್ಲಿ ಕೆಲಸ ಮಾಡುವ ಮಕ್ಕಳನ್ನು ಠಾಣೆಗೆ ಕರೆದುಕೊಂಡು ಬಂದರೆ ಅವರ ಮಾಹಿತಿಯನ್ನು ದಾಖಲಿಸಿ ಇದರಿಂದ ಕಾಣೆಯಾದ ಮಕ್ಕಳ ಪಾಲಕರು ಹಾಗೂ ಆ ಮಗುವಿನ ಮಾಹಿತಿ ಹೊಂದಾಣಿಕೆಯಾದರೆ ಅಂತಹವರನ್ನು ಪಾಲಕರ ಹತ್ತಿರ ತಲುಪಿಸುವ ಕಾರ್ಯವನ್ನು ಪೊಲೀಸ್ ಇಲಾಖೆ ನಿರ್ವಹಿಸುತ್ತದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಪೋಕ್ಸೊ ಕಾಯ್ದೆ ಮತ್ತು ಜೆ.ಜೆ.ಕಾಯ್ದೆ ಕುರಿತು ವಕೀಲರಾದ ಜಿ.ಕೆ.ಕಮ್ಮಾರ, ಮಕ್ಕಳ ಹಕ್ಕುಗಳ ಕುರಿತು ಆಶಾಕಿರಣ ರೂರಲ್ ಡೆವಲ್‍ಪಮೆಂಟ್ ಸೊಸೈಟಿ ಅಧ್ಯಕ್ಷ ಮುತ್ತುರಾಜ ಮಾದರ ಅವರು ಉಪನ್ಯಾಸ ನೀಡಿದರು. ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀಮತಿ ಕೆ.ಶ್ರೀವಿದ್ಯಾ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ.ಸಿ.ಪಾವಲಿ ಅವರು ಮಾತನಾಡಿದರು.

ಶಿಬಿರದಲ್ಲಿ ಜಿಲ್ಲಾ ನ್ಯಾಯವಾದಿಗಳ ಸಂಘದ ಕಾರ್ಯದರ್ಶಿ ಪಿ.ಎಂ.ಬೆನ್ನೂರ, ಸರ್ಕಾರಿ ಅಭಿಯೋಜಕಿ ಸರೋಜ ಕೂಡಲಮಠ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ವೈ.ಶೆಟ್ಟೆಪ್ಪನವರ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎಸ್.ಎಚ್.ಮಜೀದ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿಗಳಾದ ಶ್ರೀಮತಿ ಪದ್ಮಾವತಿ, ಎಂ.ಬಿ. ಬಸವನಾಯ್ಕರ್, ವಿನಾಯಕ ಗುಡುಗೂರು ಹಾಗೂ ಅಂಗನಾವಾಡಿ ಆಶಾಕಾರ್ಯಕರ್ತೆಯರು ಉಪಸ್ಥಿತರಿದ್ದರು.