ಎಸ್ಸೆಸ್ಸೆಲ್ಸಿ ಪರೀಕ್ಷೆ: 18,503 ವಿದ್ಯಾರ್ಥಿಗಳು ಹಾಜರ್

Share

ಹಾವೇರಿ: ಕೋವಿಡ್ ಆತಂಕದ ನಡುವೆ ಮುಂದೂಡಲ್ಪಟ್ಟ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಗುರುವಾರದಿಂದ ಆರಂಭಗೊಂಡಿದ್ದು, ಮೊದಲ ದಿನ ಜಿಲ್ಲೆಯಾದ್ಯಂತ ಸುಗಮವಾಗಿ ನಡೆದಿದೆ.

ಮೊದಲ ದಿನ ದ್ವಿತೀಯ ಭಾಷೆ ಪರೀಕ್ಷೆ ನಡೆದಿದ್ದು, ನೊಂದಾಯಿಸಿಕೊಂಡ 19,600 ವಿದ್ಯಾರ್ಥಿಗಳ ಪೈಕಿ 18,503 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. 1097 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಕಂಟೈನ್ಮೆಂಟ್ ವಲಯದ 25 ಮಕ್ಕಳು ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶಮಾಡಿಕೊಡಲಾಗಿತ್ತು. ಮೊದಲ ದಿನ ಯಾವುದೇ ವಿದ್ಯಾರ್ಥಿಗಳು ಡಿಬಾರ್ ಆಗಿರುವುದಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಣೆ ತಿಳಿಸಿದೆ.

ಪರಿಶೀಲನೆ: ಕೋವಿಡ್ ಪ್ರಮಾಣಿಕೃತ ಮಾರ್ಗಸೂಚಿಯಂತೆ ಜಿಲ್ಲೆಯ ಎಲ್ಲ 75 ಪರೀಕ್ಷಾ ಕೇಂದ್ರಗಳಲ್ಲೂ ಸುಗಮವಾಗಿ ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆದಿದೆ. ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್, ಮಾಸ್ಕ್, ಜ್ವರ ತಪಾಸಣೆ ನಡೆಸಿದ ಶಿಕ್ಷಣ ಇಲಾಖಾ ಅಧಿಕಾರಿಗಳು ಶಿಸ್ತುಬದ್ಧವಾಗಿ ವಾಹನದಿಂದ ಮಕ್ಕಳನ್ನು ಕರೆತಂದು ಸರತಿ ಸಾಲಿನಲ್ಲಿ ತಪಾಸಣೆ ನಡೆಸಿ ನಿಗಧಿತ ಕೊಠಡಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಿಕೊಟ್ಟರು.

ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಮೇಶ ದೇಸಾಯಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಹಶೀಲ್ದಾರ, ಪೊಲೀಸ್ ಅಧಿಕಾರಿಗಳು ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಕೋವಿಡ್ ಮಾನದಂಡ ಹಾಗೂ ಪರೀಕ್ಷಾ ಪಾರದರ್ಶಕ ಕ್ರಮಗಳ ಕುರಿತಂತೆ ಪರಿಶೀಲನೆ ನಡೆಸಿದರು.